ಚಿಯಾಂಗ್ ಮೈ (ಥಾಯ್ಲೆಂಡ್): ಕಿಂಗ್ಸ್ ಕಪ್‌ಗಾಗಿ ಗುರುವಾರ ನಡೆದ ಫುಟ್‌ಬಾಲ್ ಪಂದ್ಯದಲ್ಲಿ ಸುನೀಲ್ ಚೇತ್ರಿ ಅವರ ಅನುಪಸ್ಥಿತಿಯಲ್ಲಿ ಇರಾಕ್ ವಿರುದ್ಧ ಆಡಿದ ಭಾರತೀಯ ತಂಡವು ಪಂದ್ಯದ ಕೊನೆ ಹಂತದಲ್ಲಿ ಎದುರಾಳಿಗೆ ಪೆನಾಲ್ಟಿ ಅವಕಾಶ ಕಲ್ಪಿಸಿದ್ದರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲನ್ನು ಕಾಣುವಂತಾಯಿತು.
ತನಗಿಂತ ಉನ್ನತ ರ್‍ಯಾಂಕಿನ ಇರಾಕ್ ವಿರುದ್ಧ ನಡೆದ ಈ ಪಂದ್ಯದ 79ನೇ ನಿಮಿಷದವರೆಗೆ ಭಾರತ 2-1 ಮುನ್ನಡೆಯಲ್ಲಿತ್ತು. ಈ ಹಂತದಲ್ಲಿ ರೆಫರಿ ಇರಾಕ್‌ಗೆ ಪೆನಾಲ್ಟಿ ಅವಕಾಶ ನೀಡಿದರು. ಇದರಲ್ಲಿ ಸ್ಟ್ರೈಕರ್ ಐಮೆನ್ ಘಡ್‌ಬಾನ್ ಅವರು ಗೋಲು ಹೊಡೆದ ಕಾರಣ ನಿಗದಿತ ಸಮಯ ದಲ್ಲಿ 2-2 ಸಮಬಲದಲ್ಲಿತ್ತು. ಫಲಿ ತಾಂಶ ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಅಳವಡಿಸಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಇರಾಕ್ 5-4 ಅಂತರದಿಂದ ಜಯಭೇರಿ ಬಾರಿಸಿತು. ಬ್ರ್ಯಾಂಡನ್ ಫೆರ್ನಾಂಡಿಸ್ ಗೋಲನ್ನು ಹೊಡೆಯಲು ವಿಫಲರಾಗಿದ್ದರು.
ಕೂಟದ ನಿಯಮದಂತೆ ಒಂದು ವೇಳೆ ನಿಗದಿತ ಸಮಯ ದಲ್ಲಿ ಗೋಲು ಸಮಬಲ ಹೊಂದಿದ್ದರೆ ಪೆನಾಲ್ಟಿ ಶೂಟೌಟ್ ಮೂಲಕ ಯಾರು ವಿಜೇತ ರೆಂದು ನಿರ್ಧರಿಸಬೇಕಿತ್ತು. ಇಲ್ಲಿ ಹೆಚ್ಚು ವರಿ ಅವಧಿಯ ಆಟಕ್ಕೆ ಅವಕಾಶವಿಲ್ಲ.
ಭಾರತ ಈ ಪಂದ್ಯದಲ್ಲಿ ಅತ್ಯಮೋಘ ವಾಗಿ ಆಡಿ ಗಮನ ಸೆಳೆದಿದೆ. ಅನುಭವಿ ಆಟಗಾರ ಸುನೀಲ್ ಚೇತ್ರಿ ಅವರ ಅನುಪಸ್ಥಿತಿ ಯಾವುದೇ ಹಂತದಲ್ಲೂ ಕಂಡಿರಲಿಲ್ಲ. ಅವರು ಇತ್ತೀಚೆಗೆ ತಂದೆಯಾದ ಕಾರಣ ತಂಡದಿಂದ ಹೊರಗಿದ್ದರು.
ಈ ಸೋಲಿನಿಂದ ಈ ವರ್ಷ ಭಾರತದ 11 ಪಂದ್ಯಗಳ ಅಜೇಯ ಸಾಧನೆ ಅಂತ್ಯಗೊಂಡಿತು. ಭಾರತ ಮತ್ತು ಇರಾಕ್ ನಡುವೆ ಈ ವರೆಗೆ ಏಳು ಪಂದ್ಯಗಳು ನಡೆದಿದ್ದು ಆರು ಪಂದ್ಯಗಳಲ್ಲಿ ಇರಾಕ್ ಜಯ ಸಾಧಿಸಿದ್ದರೆ ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಈ ಎರಡು ತಂಡಗಳು ಈ ಹಿಂದೆ ಆಡಿದ ಸೌಹಾರ್ದ ಪಂದ್ಯದಲ್ಲಿ ಇರಾಕ್ 2-0 ಗೋಲುಗಳಿಂದ ಜಯಿಸಿತ್ತು.