Advertisement
ಕಾರ್ಗಿಲ್ ವಿಜಯ ದಿವಸ
Related Articles
Advertisement
ರಕ್ಷಣ ವಲಯದಲ್ಲಿ ಆತ್ಮನಿರ್ಭರತೆ
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ “ಆತ್ಮನಿರ್ಭರ ಭಾರತ’ ಉಪಕ್ರಮದ ಅಡಿಯಲ್ಲಿ ದೇಶದಲ್ಲಿಯೇ ರಕ್ಷಣ ಸಾಮಗ್ರಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದೇ ವೇಳೆ ದೇಶದಲ್ಲಿ ತಯಾರಾಗುವ ಮಿಲಿಟರಿ ಉತ್ಪನ್ನಗಳನ್ನು ವಿದೇಶಕ್ಕೆ ಭಾರತ ರಫ್ತು ಮಾಡುತ್ತಿದೆ. ಸರಕಾರದ ಮಾಹಿತಿ ಪ್ರಕಾರ, 2016ಕ್ಕೆ ಹೋಲಿಸಿದರೆ 2020ರ ವೇಳೆಗೆ ಭಾರತದ ಮಿಲಿಟರಿ ರಫ್ತು ಶೇ.700ರಷ್ಟು ಏರಿಕೆಯಾಗಿದೆ.
ಇನ್ನೊಂದೆಡೆ 5,400 ಕೋಟಿ ರೂ. ವೆಚ್ಚದಲ್ಲಿ 100 ಆರ್ಟಿಲರಿ ಗನ್‌ಗಳನ್ನು ತಯಾರಿಸಲು ಕೊರಿಯಾದ ಸ್ಯಾಮ್‌ಸಂಗ್ ಕಂಪೆನಿಯೊಂದಿಗೆ ಎಲ್ ಆ್ಯಂಡ್ ಟಿ ಕಂಪೆನಿ ಒಪ್ಪಂದ ಮಾಡಿಕೊಂಡಿದೆ. ಇದೇ ವೇಳೆ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯೊಂದಿಗೆ ಸಹಭಾಗಿತ್ವದಲ್ಲಿ ಲಕ್ಷ್ಯ-1 ಮತ್ತು ಲಕ್ಷ್ಯ-2 ಪೈಲಟ್ ರಹಿತ ಯುದ್ಧ ವಿಮಾನಗಳ ತಯಾರಿಕೆಗೆ ಎಲ್ ಆ್ಯಂಡ್ ಟಿ ಕಂಪೆನಿ ಮುಂದಾಗಿದೆ.
ಜತೆಗೆ ಫ್ಯೂಚರಿಸ್ಟಿಕ್ ಇನ್‌ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್(ಎಫ್ಐಸಿವಿ)ಗಳ ಉತ್ಪಾದನೆಗೆ ಭಾರತ್ ಫೋರ್ಜ್ ಕಂಪೆನಿಯೊಂದಿಗೆ ಹಾಗೂ ಮಧ್ಯಮ ಸಾರಿಗೆ ಯುದ್ಧ ವಿಮಾನಗಳ ತಯಾರಿಕೆಗೆ ಟಾಟಾ ಸ್ಟ್ರೇಟಿಜಿಕ್ ಡಿವಿಷನ್‌ನೊಂದಿಗೆ ಡಿಆರ್‌ಡಿಒ ಕೈಜೋಡಿಸಿದೆ. ರಿಲಿಯನ್ಸ್ ಇಂಡಸ್ಟ್ರೀಸ್, ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್, ಡೈನಾಮೆಟಿಕ್ ಟೆಕ್ನಾಲಜಿಸ್, ಟಿವಿಎಸ್ ಲಾಜಿಸ್ಟಿಕ್ಸ್, ಎಂಕೆಯು ಹಾಗೂ ಇತರೆ ಭಾರತೀಯ ಕಂಪೆನಿಗಳು ರಕ್ಷಣ ಕ್ಷೇತ್ರಕ್ಕೆ ಲಗ್ಗೆ ಹಾಕಿವೆ. ಮತ್ತೂಂದೆಡೆ ಮೇಕ್ ಇನ್ ಇಂಡಿಯಾ ಉಪಕ್ರಮಗಳಡಿಯಲ್ಲಿ ವಿದೇಶಿ ಕಂಪೆನಿಗಳು ಭಾರತದಲ್ಲೇ ತಮ್ಮ ರಕ್ಷಣ ಸಾಮಗ್ರಿಗಳನ್ನು ತಯಾರಿಸಲು ಮುಂದಾಗಿವೆ. ಇದಕ್ಕಾಗಿ ಎರಡು ರಕ್ಷಣ ಕೈಗಾರಿಕಾ ವಲಯಗಳು ತಲೆ ಎತ್ತುತ್ತಿವೆ.
ಭಾರತಕ್ಕೆ 4ನೇ ಸ್ಥಾನ
ವಿಶ್ವಾದ್ಯಂತ ಇರುವ ಮಿಲಿಟರಿ ಪಡೆಗಳ ಒಟ್ಟಾರೆ ಸಾರ್ಮರ್ಥ್ಯಕ್ಕೆ ಅನುಗುಣವಾಗಿ ಗ್ಲೋಬಲ್ ಫೈರ್‌ಪವರ್ ಇಂಡೆಕ್ಸ್ ರೇಟಿಂಗ್ಸ್ ನೀಡುತ್ತದೆ. 2022ರ ಅದರ ವರದಿ ಪ್ರಕಾರ, ಭಾರತೀಯ ಸೇನೆಯು ಪ್ರಪಂಚದಲ್ಲೇ ನಾಲ್ಕನೇ ಅತ್ಯಂತ ಬಲಿಷ್ಠ ಸೇನೆಯಾಗಿದೆ. ಮೊದಲ ಮೂರು ಸ್ಥಾನಗಳನ್ನು ಕ್ರಮವಾಗಿ ಅಮೆರಿಕ, ರಷ್ಯಾ ಮತ್ತು ಚೀನ ಹೊಂದಿದೆ.
ಭಾರತೀಯ ಭೂಸೇನೆ, ಭಾರತೀಯ ನೌಕಾ ಸೇನೆ ಹಾಗೂ ಭಾರತೀಯ ವಾಯುಪಡೆ-ಭಾರತೀಯ ಸೇನೆಯ ಪ್ರಮುಖ ಮೂರು ವಿಭಾಗಗಳಾಗಿವೆ. ಇವನ್ನು ಹೊರತುಪಡಿಸಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಭಾರತೀಯ ಕರಾವಳಿ ರಕ್ಷಕ ಪಡೆ, ಅಸ್ಸಾಂ ರೈಫಲ್ಸ್, ವಿಶೇಷ ಗಡಿ ಪಡೆ ಹಾಗೂ ಅನೇಕ ಅಂತರ್ ಸೇವಾ ಕಮಾಂಡ್‌ಗಳು ಒಟ್ಟಾರೆ ಭಾರತೀಯ ಸೇನೆಯನ್ನು ಒಳಗೊಂಡಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿ
ಭಾರತೀಯ ಭೂಸೇನೆಗಾಗಿ ಅಮೆರಿಕದಿಂದ ಅತ್ಯಾಧುನಿಕ ಎಐಜಿ 716 ರೈಫಲ್‌ಗಳನ್ನು ಭಾರತ ಖರೀದಿಸುತ್ತಿದೆ. ಜತೆಗೆ ಫ್ರಾನ್ಸ್‌ನಿಂದ ಈಗಾಗಲೇ 36 ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯು ಪಡೆಗೆ ಸೇರಿವೆ. ಹೊಸದಾಗಿ ಭಾರತೀಯ ನೌಕಾ ಪಡೆಗೆ 26 ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳನ್ನು ಹಾಗೂ ಮೂರು ಸ್ಕ್ಯಾರ್ಪಿಯನ್ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಖರೀದಿಗೆ ರಕ್ಷಣ ಸಚಿವಾಲಯ ಅನುಮೋದನೆ ನೀಡಿದೆ. ಈಗಾಗಲೇ ಅಮೆರಿಕದ ಬೋಯಿಂಗ್ ವರ್ಟಲ್ ಕಂಪೆನಿಯಿಂದ ಚಿನೂಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್‌ಗಳು ಹಾಗೂ ಅಪಾಚಿ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಖರೀದಿಸಿದೆ. ಜತೆಗೆ ರಷ್ಯಾದಿಂದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಸಿದ್ದು, ಈ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತದ ಶಸ್ತ್ರಾಗಾರವನ್ನು ಬಲಪಡಿಸಿದೆ.
ಅಗ್ನಿವೀರರ ನೇಮಕ
2022ರಲ್ಲಿ ಕೇಂದ್ರ ಸರಕಾರ ಅಗ್ನವೀರ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಡಿ ಸೇನೆಯ ಮೂರು ವಿಭಾಗಗಳಿಗೆ ಅಗ್ನಿವೀರರನ್ನು ನೇಮಿಸಲಾಗುತ್ತದೆ. ಅವರಿಗೆ 31 ವಾರಗಳ ತರಬೇತಿ ನೀಡಲಾಗುತ್ತದೆ. ಒಟ್ಟು 4 ವರ್ಷಗಳ ಅವಧಿಗೆ ಅವರನ್ನು ಕರ್ತವ್ಯಕ್ಕೆ ನೇಮಿಸಲಾಗುತ್ತದೆ. ಅವರ ಕಾರ್ಯಕ್ಷಮತೆಯ ಆಧಾರದಲ್ಲಿ ಅವರ ಸೇವಾವಧಿಯನ್ನು ವಿಸ್ತರಿಸಲಾಗುತ್ತದೆ. ಈಗಾಗಲೇ ಹಲವು ಬ್ಯಾಚ್‌ಗಳ ಅಗ್ನಿವೀರರು ತರಬೇತಿಯಲ್ಲಿ ನಿರತರಾಗಿದ್ದಾರೆ.
ಸಮನ್ವಯತೆಗಾಗಿ ಹೊಸ ಹುದ್ದೆ
ಮೂರು ಪಡೆಗಳ ನಡುವಿನ ಸಮನ್ವಯತೆಗಾಗಿ ಭಾರತೀಯ ಸೇನೆಯಲ್ಲಿ ಅತ್ಯುನ್ನತ ಹುದ್ದೆಯಾದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆಯನ್ನು ಸೃಜಿಸಲಾಯಿತು. 2020 ಜ.1ರಂದು ಜನರಲ್ ಬಿಪಿನ್ ರಾವತ್ ಅವರನ್ನು ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ನೇಮಿಸಲಾಯಿತು. ಪ್ರಸ್ತುತ ಜ| ಅನೀಲ್ ಚೌಹಾಣ್ ಅವರು ಈ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಕ್ಷಣ ವಲಯಕ್ಕೆ 5.94 ಲಕ್ಷ ಕೋಟಿ ರೂ.
ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2023-24ರ ಬಜೆಟ್‌ನಲ್ಲಿ ರಕ್ಷಣ ವಲಯಕ್ಕೆ 5.94 ಲಕ್ಷ ಕೋಟಿ ರೂ. ಮೀಸಲಿರಿಸಲಾಗಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ, ಈ ಬಜೆಟ್‌ನಲ್ಲಿ ರಕ್ಷಣ ಕ್ಷೇತ್ರಕ್ಕೆ ನೀಡಿರುವ ಅನುದಾನದಲ್ಲಿ ಶೇ.13ರಷ್ಟು ಏರಿಕೆಯಾಗಿದೆ. ಯುದ್ಧ ವಿಮಾನಗಳ ಖರೀದಿ, ಚೀನ ಗಡಿಯಾದ್ಯಂತ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಉಳಿದಂತೆ ನೂತನ ಶಸ್ತ್ರಾಸ್ತ್ರ, ಯುದ್ಧ ನೌಕೆ ಹಾಗೂ ಇತರೆ ಯುದ್ಧ ಸಾಮಗ್ರಿಗಳ ಖರೀದಿಗೆ ಗಮನಹರಿಸಲಾಗಿದೆ.
ಸಂತೋಷ್ ಪಿ.ಯು