Advertisement

ದ. ಭಾರತದ ಲೀಡಿಂಗ್‌ ಮಾಡೆಲ್‌, ಫ್ಯಾಶನ್‌ ಕೊರಿಯೊಗ್ರಾಫ‌ರ್‌ 

06:00 AM Apr 08, 2018 | Team Udayavani |

ಮಂಗಳೂರು: ಪುತ್ತೂರು ತಾಲೂಕಿನ ತೀರಾ ಹಳ್ಳಿ ಪ್ರದೇಶವಾದ ಬುಳೇರಿಕಟ್ಟೆ ಸಮೀಪ ಹುಟ್ಟಿದ ಸಮೀರ್‌ ಖಾನ್‌ ಓದಿದ್ದು ಕೇವಲ 10ನೇ ತರಗತಿ. ಓದು ಬದಿಗಿರಲಿ, ಈಗ ಇವರ ಸಾಧನೆಯತ್ತ ಇಡೀ ದಕ್ಷಿಣ ಭಾರತವೇ ತಿರುಗಿ ನೋಡುತ್ತಿದೆ. ಸಮೀರ್‌ ಖಾನ್‌ ಸದ್ಯ ದಕ್ಷಿಣ ಭಾರತದ ಮುಂಚೂಣಿಯ ಪುರುಷ ರೂಪದರ್ಶಿ. ಹುಟ್ಟೂರಿನಲ್ಲಿ ಹತ್ತನೇ ತರಗತಿ ಪೂರೈಸಿದ ಬಳಿಕ ಸಮೀರ್‌ ಖಾನ್‌ ಹೆಚ್ಚಿನ ವಿದ್ಯಾಭ್ಯಾಸದತ್ತ ಅಷ್ಟೊಂದು ಒಲವು ತೋರಲಿಲ್ಲ. ಬದುಕಲು ಶಾಲೆ ಕಾಲೇಜಿನಲ್ಲಿ ಕಲಿಯುವ ವಿದ್ಯೆಯೇ ದಾರಿ ತೋರಿಸಬೇಕಾಗಿಲ್ಲ ಎಂದುಕೊಂಡು ಬೆಂಗಳೂರಿನಲ್ಲಿ ಹೊಟೇಲ್‌ ಒಂದರಲ್ಲಿ ಅಣ್ಣನ ಜತೆಗೆ ಕೆಲಸ ಮಾಡುತ್ತಿದ್ದರು. ಅವರ ಬದುಕಿನ ದಿಕ್ಕು ಬದಲಿದ್ದು ಕೂಡ ಅಲ್ಲಿಯೇ. 

Advertisement

ದಿಕ್ಕು ಬದಲಿಸಿದ ಗ್ರಾಹಕ
ಹೊಟೇಲ್‌ಗೆ ಬಂದಿದ್ದ ಗ್ರಾಹಕ ರೊಬ್ಬರು ಸಮೀರ್‌ ಅವರನ್ನು ನೋಡಿ “ನೀನ್ಯಾಕೆ ಮಾಡಲಿಂಗ್‌ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಾರದು’ ಎಂದು ಸಲಹೆ ನೀಡಿದರಂತೆ. ಕಿವಿ ನಿಮಿರಿಸಿದ ಸಮೀರ್‌, ಹಳ್ಳಿ ಪ್ರದೇಶದಲ್ಲಿ ಹುಟ್ಟಿದ ತಾನು ಮಾಡಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುವುದು ಕಷ್ಟ ಎಂದು ಕೈಕಟ್ಟಿ ಕೂರಲಿಲ್ಲ. ಪ್ರಯತ್ನ ಮಾಡೋಣ, ಫಲ ದೇವರಿಗೆ ಬಿಟ್ಟದ್ದು ಎಂದು ಯೋಚಿಸಿ ಮಾಡಲಿಂಗ್‌ ಜಗತ್ತಿನೊಳಗೆ ಅಂಬೆಗಾಲಿಕ್ಕಿದರು. ಅಲ್ಲಿ ಏಳುತ್ತ ಬೀಳುತ್ತ ನಡೆಯಲು ಕಲಿತ ಹುಡುಗ ಈಗ ಮುಂಚೂಣಿಯ ಮಾಡೆಲ್‌ ಆಗಿ ಸ್ಥಾಪನೆಗೊಂಡಿದ್ದಾರೆ.

2002ರಲ್ಲಿ   ಮಾಡೆಲಿಂಗ್‌ ಕ್ಷೇತ್ರದ ಒಳ ಹೊಕ್ಕ ಸಮೀರ್‌ ಮುಂಬಯಿಯಲ್ಲಿ 6 ತಿಂಗಳು ಮಾಡೆಲಿಂಗ್‌ ಕಲಿಕೆ ಕೋರ್ಸ್‌ ಪೂರೈಸಿದರು. ಮಾಡೆಲಿಂಗ್‌ ಕ್ಷೇತ್ರದಲ್ಲಿ ಸ್ವಂತ ಅಧ್ಯಯನ, ಗಮನಿಸುವಿಕೆಗಳಿಂದ ಹಂತಹಂತ ವಾಗಿ ಬೆಳೆದರು. ಆರಂಭದಲ್ಲಿ ಮಾಡೆಲ್‌ ಆಗಿ ಹಲವು ವೇದಿಕೆಗಳಲ್ಲಿ ರ್‍ಯಾಂಪ್‌ ವಾಕ್‌ ಮಾಡಿದರು. ಆಬಳಿಕ ಅವರ ಗಮನ ಫ್ಯಾಶನ್‌ ಕೊರಿಯೋಗ್ರಫಿಯತ್ತ ತಿರುಗಿತು. 2004ರಲ್ಲಿ ಬೆಂಗಳೂರಿನಲ್ಲಿ ಎಲೈಟ್‌ ಮಾಡೆಲ್‌ ಫ್ಲ್ಯಾಟ್‌ ಎಂಬ ಮಾಡೆಲಿಂಗ್‌ ಕೊರಿಯೋಗ್ರಫಿ ತರಬೇತಿ ಕೇಂದ್ರ ಪ್ರಾರಂಭಿಸಿದರು. ಈಗ ಈ ಸಂಸ್ಥೆ ಕೊಲೊಂಬೊದ ಮಾಡೆಲಿಂಗ್‌ ಸಂಸ್ಥೆಯೊಡನೆ ಒಡಂಬಡಿಕೆ ಮಾಡಿಕೊಂಡು ಅಲ್ಲಿಯೂ ಕೆಲಸ ನಿರ್ವಹಿಸುತ್ತಿದೆ.

ಕೊರಿಯೋಗ್ರಫಿ ಪಾಠ
ಇದುವರೆಗೆ ಸಮೀರ್‌ ಖಾನ್‌ ಅವರ ಬಳಿ ಪಳಗಿದ ರೂಪದರ್ಶಿಗಳ ಸಂಖ್ಯೆ ಒಂದು ಸಾವಿರಕ್ಕೂ ಮಿಕ್ಕಿದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಕನ್ನಡ ಸೇರಿದಂತೆ ವಿವಿಧ ಭಾಷೆಯ ನಟ-ನಟಿಯರಿಗೆ ಇವರು ಫ್ಯಾಷನ್‌ ಕೊರಿಯೋಗ್ರಫ‌ರ್‌ ಆಗಿ ಕೆಲಸ ನಿರ್ವಹಿಸಿದ್ದಾರೆ. ಫ್ಯಾಶನ್‌ ಶೋಗಳಲ್ಲಿ ಮಾಡೆಲ್‌ಗ‌ಳ ನಡಿಗೆ, ಹಾವಭಾವ, ಅಂಗಭಂಗಿ ಇತ್ಯಾದಿ ಕೊರಿಯೋಗ್ರಫಿ ತರಬೇತಿ ನೀಡುವುದು ಇವರು ನಿರ್ವಹಿಸುವ ಮುಖ್ಯ ಕಾರ್ಯ.  ದೂರಶಿಕ್ಷಣ ಮುಖೇನ ಹೊಟೇಲ್‌ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಪದವಿ ಪಡೆದಿರುವ ಇವರು ಅನೇಕ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಫ್ಯಾಶನ್‌ ಕೊರಿಯೋಗ್ರಫ‌ರ್‌ ಆಗಿ ಗುರುತಿಸಿಕೊಂಡಿದ್ದಾರೆ. 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಸ್ಟ್‌ ಕೊರಿಯೋಗ್ರಫ‌ರ್‌ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ- ಕೇರಳ- ಹೈದರಾಬಾದ್‌ ರಾಜ್ಯಗಳ ವ್ಯಾಪ್ತಿಯಲ್ಲಿ ನಡೆಯುವ ಪ್ರಖ್ಯಾತ ಮಿಸ್‌ ಸೌತ್‌ ಇಂಡಿಯಾ ಸ್ಪರ್ಧೆಯಲ್ಲಿ ಫ್ಯಾಶನ್‌ ಕೊರಿಯೋಗ್ರಫ‌ರ್‌ ಆಗಿ ಸತತ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮಿಸ್‌ ಸೌತ್‌ ಇಂಡಿಯಾ ಕೊಚ್ಚಿ (2008), ಮಿಸ್‌ ಸೌತ್‌ ಇಂಡಿಯಾ ಬೆಂಗಳೂರು, ಮಿಸ್‌ ಕ್ವೀನ್‌ ಆಫ್‌ ಇಂಡಿಯಾ ಬೆಂಗಳೂರು, ತ್ರಿಪುರಾ ಫ್ಯಾಶನ್‌ ವೀಕ್‌, ಇಂಟರ್‌ನ್ಯಾಷನಲ್‌ ಫ್ಯಾಶನ್‌ ಫೆಸ್ಟ್‌ ಕೊಚ್ಚಿ, ಮಿಸ್‌ ಸೌತ್‌ ಇಂಡಿಯಾ ತೃಶ್ಶೂರು, ಮಿಸ್‌ ಮಂಗಳೂರು, ಬೆಂಗಳೂರು ಫ್ಯಾಶನ್‌ ಫೆಸ್ಟ್‌, ಕೇರಳ ಫ್ಯಾಶನ್‌ ಲೀಗ್‌, ಮಿಸ್‌ ಏಷ್ಯ, ಮಿಸ್‌ ಸೌತ್‌ ಇಂಡಿಯಾ ಕ್ವೀನ್‌ ಸೇರಿದಂತೆ ವಿವಿಧ ಸೌಂದರ್ಯ ಸ್ಪರ್ಧೆಗಳಲ್ಲಿ ರೂಪದರ್ಶಿಗಳಿಗೆ ಕೊರಿಯೋ ಗ್ರಫಿ ತರಬೇತಿ ನೀಡಿದ್ದಾರೆ.

ಮಾಡೆಲ್‌ ಆಗುವವರು ಅನೇಕರಿದ್ದಾರೆ. ಬೆಂಗಳೂರಿನಲ್ಲಿ ರೂಪದರ್ಶಿ ಯಾಗಿ ಕೆಲಸ ಮಾಡುತ್ತಿದ್ದಾಗ ಫ್ಯಾಶನ್‌ ಕೊರಿಯೋಗ್ರಫಿ ತರಬೇತಿ ನೀಡುವವರು ಇಲ್ಲಿ ಕಡಿಮೆ ಇದ್ದಾರೆ ಎಂಬುದು ಗಮನಕ್ಕೆ ಬಂತು. ಹಾಗಾಗಿ ಆ ದಿಕ್ಕಿನತ್ತ ಹೆಚ್ಚು ಗಮನ ಕೇಂದ್ರೀಕರಿಸಿ ಮುಂದುವರಿದೆ ಎನ್ನುತ್ತಾರೆ ಸಮೀರ್‌. ಸಮೀರ್‌ ತಂದೆ-ತಾಯಿ ಮೊಹ ಮ್ಮದ್‌ ಮತ್ತು ಅಮೀನಾ ದಂಪತಿ ಬುಳೇರಿಕಟ್ಟೆಯಲ್ಲಿ ವಾಸಿಸುತ್ತಿದ್ದಾರೆ. ಅವರದು ಮಧ್ಯಮ ವರ್ಗದ ಕೃಷಿಕ ಕುಟುಂಬ. ಸಮೀರ್‌ ಎಸೆಸೆಲ್ಸಿ ಓದಿದ್ದು ಬುಳೇರಿಕಟ್ಟೆಯ ಸರಕಾರಿ ಪ್ರೌಢಶಾಲೆಯಲ್ಲಿ. 

Advertisement

ಜೀವನದಲ್ಲಿ ನಾವು ಮಾಡುವ ಕೆಲಸದಲ್ಲಿ ಖಚಿತ ಗುರಿ ಮತ್ತು ಅದನ್ನು ಸಾಧಿಸುವ ಶ್ರದ್ಧೆ ಇದ್ದರೆ ಯಾವುದೂ ಕಠಿನವಲ್ಲ. ಫ್ಯಾಶನ್‌ ಕ್ಷೇತ್ರದ ಬಗ್ಗೆ ಅನೇಕರಿಗೆ ತಪ್ಪು ಅಭಿಪ್ರಾಯ ಇದೆ. ಆದರೆ ಒಳಹೊಕ್ಕರೆ ನಿಜಾಂಶ ತಿಳಿಯುತ್ತದೆ.
 ಸಮೀರ್‌ ಖಾನ್‌, ರೂಪದರ್ಶಿ

ನವೀನ್‌ ಭಟ್‌ ಇಳಂತಿಲ 

Advertisement

Udayavani is now on Telegram. Click here to join our channel and stay updated with the latest news.

Next