ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕವು ದೇಶದ ರಾಜಧಾನಿಯಾಗಿ ಹೊರಹೊಮ್ಮಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ವಿದ್ಯುತ್ ವಾಹನಗಳ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, ಪರಿಸರ ಹಾನಿ, ವಾಯುಮಾಲಿನ್ಯವನ್ನು ತಪ್ಪಿಸುವ ನಿಟ್ಟಿನಲ್ಲಿ ಉತ್ಕೃಷ್ಟ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಬಳಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ 2 ಲಕ್ಷ ಕೋಟಿ ರೂ.ಗಳ ಹೂಡಿಕೆಯಾಗಿದೆ. ರಾಜ್ಯದಲ್ಲಿಯೂ 31 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುತ್ತಿದ್ದು, ವಿದ್ಯುತ್ ವಾಹನಗಳ ಉತ್ಪಾದನೆಯಲ್ಲಿ ಇಡೀ ದೇಶದಲ್ಲೇ ಕರ್ನಾಟಕ ರಾಜ್ಯವನ್ನು ಮುಂಚೂಣಿಗೆ ತರಲು ಎಲ್ಲ ರೀತಿಯ ನೆರವನ್ನು ಸರ್ಕಾರ ಒದಗಿಸಲಿ ಎಂದು ಹೇಳಿದರು.
ರೇವಾ ಕಂಪನಿ ವಿದ್ಯತ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ವಿದ್ಯುತ್ ವಾಹನಗಳ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸಿದೆ. ಪ್ರಸ್ತುತ ಮಹೀಂದ್ರ ಕಂಪನಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೂಲಕ ಮತ್ತೂಂದು ಹೆಜ್ಜೆ ಮುಂದಿಟ್ಟಿದೆ. ಇದರಿಂದ ರಾಜ್ಯದಲ್ಲಿ 31 ಸಾವಿರ ಕೋಟಿ ರೂ ಬಂಡವಾಳ ಹೂಡಿಕೆಯಾಗುತ್ತಿದ್ದು, 55 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಿದ್ದು, ಬೇಡಿಕೆಯು ಕಡಿಮೆಯಿದ್ದು, ಬಳಕೆ ಹೆಚ್ಚಾದಂತೆ ಉತ್ಪಾದನೆಯು ಹೆಚ್ಚಾಗುತ್ತದೆ. ಬೆಲೆಯಲ್ಲಿಯೂ ಇಳಿಕೆಯಾಗುತ್ತದೆ. ಉತ್ಪಾದನೆ, ವಹಿವಾಟು ವೃದ್ಧಿಸಲು ತೈವಾನ್ ಕಂಪನಿ ಈ ಶೃಂಗ ಸಭೆಯಲ್ಲಿ 350 ಕೋಟಿ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ತಿಳಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ಮುಂದಿನ ಕೆಲವೇ ದಿನಗಳಲ್ಲಿ ವಿದ್ಯುತ್ ವಾಹನಗಳ ಯುಗವೇ ಆರಂಭವಾಗಲಿದೆ. ಪರಿಸರ ರಕ್ಷಣೆ, ಆರ್ಥಿಕ ಮಿತವ್ಯಯದಿಂದಾಗಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚು ಸೂಕ್ತ. ರಾಜ್ಯ ಸರ್ಕಾರ ವಿದ್ಯುತ್ ವಾಹನ ನಿಲುಗಡೆಗೆ ಒಂದು ವ್ಯವಸ್ಥೆ ಮಾಡಿ, ಆ ಸ್ಥಳದಲ್ಲಿಯೇ ಚಾರ್ಜಿಂಗ್ ಪಾಯಿಂಟ್ ತೆರೆಯಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ನಗರಾದ್ಯಂತ 108 ಕಡೆ ವಿದ್ಯುತ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿ ಇಲಾಖೆ ಆಯುಕ್ತ ದರ್ಪನ್ ಜೈನ್, ಟೆಕೊ ಎಲೆಕ್ಟ್ರಿಕ್ ಕಂಪನಿ ಅಧ್ಯಕ್ಷ ಜಾರ್ಜ್ ಲಿಯನ್, ಡಬ್ಲ್ಯೂಇವಿಐಒ ಸಂಸ್ಥೆ ಅಧ್ಯಕ್ಷ ಕಾಲ್ವಿನ್ ಯಿ, ದಕ್ಷಿಣ ಕೋರಿಯಾದ ಭಾರತದ ರಾಯಭಾರಿ ಶೈನ್ ಬೋಂಗ್ ಕಿಲ್, ಐಸಿಸಿ ಪ್ರಧಾನ ನಿರ್ದೇಶಕ ಡಾ.ರಾಜೀವ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.