Advertisement

Tigers ಸಂಖ್ಯೆ ಏರಿಕೆ ಉತ್ತಮ ಬೆಳವಣಿಗೆ

12:06 AM Apr 10, 2023 | Team Udayavani |

2018ರ ಬಳಿಕ ಈಗ ದೇಶದ ಹುಲಿ ಗಣತಿ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದು, ಕೆಲವೊಂದು ಸಮಾಧಾನಕರ ಅಂಶಗಳು ಹೊರಬಿದ್ದಿವೆ. 2018ಕ್ಕೆ ಹೋಲಿಕೆ ಮಾಡಿದರೆ, ಈಗ ಹುಲಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಅಂದರೆ, 2018ರಲ್ಲಿ 2,967 ಹುಲಿಗಳಿದ್ದರೆ, ಈಗ 3,167 ಹುಲಿಗಳಿವೆ.

Advertisement

2006ರಿಂದಲೂ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಅಂದರೆ, 2006ರಲ್ಲಿ 1,411, 2010ರಲ್ಲಿ 1,706, 2014ರಲ್ಲಿ 2,226 ಮತ್ತು 2018ರಲ್ಲಿ 2,967 ಹುಲಿಗಳಿದ್ದವು. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಗಣತಿ ನಡೆಸಿ, ಅವುಗಳ ವರದಿ ಬಿಡುಗಡೆ ಮಾಡಿದಾಗಲೂ ಉತ್ತಮವಾದ ಸುದ್ದಿಯೇ ಸಿಕ್ಕಿದೆ. ಅಲ್ಲದೆ, ಈ ವರ್ಷ ದೇಶದಲ್ಲಿ ಪ್ರಾಜೆಕ್ಟ್ ಟೈಗರ್‌ ಅನ್ನು ಘೋಷಣೆ ಮಾಡಿ 50 ವರ್ಷಗಳಾಗಿವೆ. ಇಂಥ ಹೊತ್ತಿನಲ್ಲೇ ಹುಲಿಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿರುವುದು ಖುಷಿಯ ಸಂಗತಿಯೇ ಆಗಿದೆ.

ದೇಶದಲ್ಲಿ ಒಟ್ಟಾರೆಯಾಗಿ ಐದು ವಲಯಗಳನ್ನು ಮಾಡಿ, ಈ ಮೂಲಕ ಹುಲಿಗಳ ಸಂಖ್ಯೆಯನ್ನು ಗುರುತಿಸಲಾಗಿದೆ. ಮೊದಲನೇ ವಲಯವಾದ ಶಿವಾಲಿಕ್‌ ಹಿಲ್‌ ಮತ್ತು ಗಂಗಾತೀರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. 2018ರಲ್ಲಿ 646 ಇದ್ದ ಹುಲಿಗಳ ಸಂಖ್ಯೆ ಈಗ 804ಕ್ಕೆ ಏರಿಕೆಯಾಗಿದೆ. ಹಾಗೆಯೇ, ಸೆಂಟ್ರಲ್‌ ಇಂಡಿಯನ್‌ ಹೈಲ್ಯಾಂಡ್‌ ಮತ್ತು ಪೂರ್ವ ಘಟ್ಟ ಪ್ರದೇಶಗಳಲ್ಲಿ 2018ರಲ್ಲಿ  1,033 ಇದ್ದ ಸಂಖ್ಯೆ 2022ಕ್ಕೆ 1,161ಕ್ಕೆ ಏರಿಕೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ 2018ರಲ್ಲಿ 981 ಇದ್ದ ಸಂಖ್ಯೆ ಈಗ 824ಕ್ಕೆ ಇಳಿಕೆಯಾಗಿದೆ. ಈಶಾನ್ಯ ಬೆಟ್ಟಗಳು, ಬ್ರಹ್ಮಪುತ್ರ ಪ್ರದೇಶದಲ್ಲಿ 2018ರಲ್ಲಿ 219 ಹುಲಿಗಳಿದ್ದು, ಈಗ 194ಕ್ಕೆ ಇಳಿಕೆಯಾಗಿದೆ. ಹಾಗೆಯೇ ಸುಂದರ್‌ಬನ್‌ನಲ್ಲಿ 2018ರಲ್ಲಿ 88 ಇದ್ದ ಸಂಖ್ಯೆ ಈಗ 100ಕ್ಕೆ ಏರಿಕೆಯಾಗಿದೆ. ಇವೆಲ್ಲವೂ ಕ್ಯಾಮೆರಾ ಎಣಿಕೆಯಾಗಿದ್ದು, ಇವುಗಳಲ್ಲಿ ಕೊಂಚ ಅದಲು ಬದಲು ಆಗಿರುವ ಸಾಧ್ಯತೆಗಳೂ ಹೆಚ್ಚಿರುತ್ತವೆ.

ಹುಲಿ ಗಣತಿಗೆ ಕೇಂದ್ರ ಪರಿಸರ ಇಲಾಖೆ ಸಾಕಷ್ಟು ಶ್ರಮವನ್ನೂ ಹಾಕಿದೆ. ಒಟ್ಟಾರೆಯಾಗಿ 6.41 ಮಾನವ ದಿನಗಳನ್ನು ಗಣತಿಗಾಗಿ ವ್ಯಯಿಸಲಾಗಿದೆ. 6.41 ಕಿ.ಮೀ. ಸಮೀಕ್ಷೆ ನಡೆಸಲಾಗಿದ್ದರೆ, 97,399 ಹುಲಿಗಳ ಫೋಟೋ ತೆಗೆಯಲಾಗಿದೆ. ಅಲ್ಲದೆ, 2018ರಲ್ಲಿ 2,461 ಹುಲಿಗಳನ್ನು ಕ್ಯಾಮೆರಾ ಸೆರೆ ಹಿಡಿದಿದ್ದರೆ, ಈ ಬಾರಿ 3080 ಹುಲಿಗಳ ಫೋಟೋ ತೆಗೆದಿದೆ.

ಹುಲಿ ಸಂಖ್ಯೆ ಹೆಚ್ಚಳದ ನಡುವೆಯೇ, ಹುಲಿ ಗಣತಿ ವರದಿಯಲ್ಲಿ ಕೆಲವೊಂದು ಆತಂಕಕಾರಿ ಅಂಶಗಳ ಬಗ್ಗೆಯೂ ಉಲ್ಲೇಖೀಸಲಾಗಿದೆ. ಇದರಲ್ಲಿ ಪ್ರಮುಖವಾದವು ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಕಾಡಿನಲ್ಲಿ ಮಾನವ-ಪ್ರಾಣಿ

Advertisement

ಸಂಘರ್ಷ. ಅಲ್ಲದೆ, ಬಹುದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಭಿವೃದ್ಧಿ ನಡೆಸುತ್ತಿರುವುದರಿಂದ ಅರಣ್ಯದ ರಕ್ಷಣೆಯೂ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿಯೇ ಅರಣ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷವೂ ಉಂಟಾಗುತ್ತಿದೆ ಎಂಬುದನ್ನು ಉಲ್ಲೇಖೀಸಲಾಗಿದೆ. 4 ಲಕ್ಷ ಚದರ ಕಿ.ಮೀ. ಅರಣ್ಯವನ್ನು ಹುಲಿಯ ಪ್ರದೇಶವೆಂದು ಗುರುತಿಸಲಾಗಿದ್ದು, ಇದರಲ್ಲಿ ಮೂರನೇ ಒಂದು ಭಾಗ ಮಾತ್ರ ಸುರಕ್ಷಿತ ಎಂದು ಹೇಳಲಾಗುತ್ತಿದೆ. ಜತೆಗೆ ಹುಲಿಗಳ ಬೇಟೆಯೂ ಒಂದು ದೊಡ್ಡ ಸವಾಲಾಗಿದೆ. ಇದು ಅಕ್ರಮ ಮತ್ತು ದೊಡ್ಡ ಮಟ್ಟದ ಶಿಕ್ಷೆಯಾಗುತ್ತದೆ ಎಂಬುದು ಗೊತ್ತಿದ್ದರೂ, ಬೇಟೆ ಮತ್ತು ಅಕ್ರಮ ಮಾರಾಟವೂ ಸಾಗಿದೆ ಎಂಬುದನ್ನು ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಏನೇ ಆಗಿದ್ದರೂ, ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ವಿಚಾರ ಸಮಾಧಾನಕರ ಅಂಶ. ಯಾವುದೇ ದೇಶ ಆರೋಗ್ಯಕರವಾಗಿ, ಉತ್ತಮವಾಗಿ ಇದೆ ಎಂದರೆ ಅಲ್ಲಿನ ಅರಣ್ಯಗಳೂ ಹೆಚ್ಚಾಗಿರಬೇಕು. ಅರಣ್ಯ ಚೆನ್ನಾಗಿದೆ ಎಂಬುದು ಅಲ್ಲಿ ಎಷ್ಟು ಪ್ರಾಣಿ ಪಕ್ಷಿಗಳು ವಾಸ ಮಾಡುತ್ತಿವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮವೂ ಉತ್ತಮವಾಗಿಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗಿರುವುದು ಇದಕ್ಕೆ ಒಂದು ಉದಾಹರಣೆಯಾಗಿದೆ. ಆದರೂ, ಆದಷ್ಟು ಮಾನವ-ಪ್ರಾಣಿ ಸಂಘರ್ಷ ತಡೆಗಟ್ಟುವ ವಿಚಾರದಲ್ಲಿ ಸರ್ಕಾರಗಳು ಯೋಚನೆ ಮಾಡುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next