Advertisement
ದೆಹಲಿಯ ನೆರೆ ರಾಜ್ಯ ಉತ್ತರಪ್ರದೇಶದಲ್ಲಿ ಕಸಾಯಿಖಾನೆಗಳು ಮುಚ್ಚುತ್ತಿರುವುದು ಮತ್ತು ಮಾಂಸ ವ್ಯಾಪಾರಿಗಳ ಮುಷ್ಕರದಿಂದಾಗಿ ಮಾಂಸದ ಪೂರೈಕೆ ಶೇ.50ರಷ್ಟು ಕಡಿಮೆಯಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಹಿಂದೂಗಳು ಮಾಂಸಾಹಾರದಿಂದ ದೂರವುಳಿಯುವ ಕಾರಣ ಸದ್ಯಕ್ಕೆ ಗಂಭೀರ ಸಮಸ್ಯೆಯೇನೂ ತಲೆದೋರಿಲ್ಲ. ಆದರೆ, 9 ದಿನ ಕಳೆದರೆ ಮಾಂಸದ ಕೊರತೆ ತೀವ್ರವಾಗಲಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರಪ್ರದೇಶದಲ್ಲಿ 44 ಕಸಾಯಿಖಾನೆಗಳು ಪರವಾನಗಿ ಹೊಂದಿವೆ. ಆದರೆ, ಈ ಪೈಕಿ 26 ವಧಾಗೃಹಗಳನ್ನು ಮೂಲ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 26 ಕಸಾಯಿಖಾನೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆಯಷ್ಟೆ. ನಿಯಮದಂತೆ ನಡೆದುಕೊಂಡರೆ, ಅವುಗಳ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಹೇಳಿದ್ದಾರೆ. ಜತೆಗೆ, ಮುಷ್ಕರನಿರತ ಮಾಂಸ ವ್ಯಾಪಾರಿಗಳು ಯಾವುದೇ ದೂರು ಅಥವಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಮ್ಮ ಮುಂದೆ ಬಂದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.