Advertisement

ತಿರುಪತಿ ದೇಗುಲದ ಆದಾಯದಲ್ಲೂ ಖೋತಾ!

03:37 PM Jan 07, 2018 | Team Udayavani |

ತಿರುಪತಿ: ಕೇಂದ್ರ ಸರ್ಕಾರದ ನೋಟು ಅಮಾನ್ಯದ ಬಿಸಿ ತಿರುಪತಿ ತಿಮ್ಮಪ್ಪ ದೇಗುಲದ ಆದಾಯಕ್ಕೂ
ತಟ್ಟಿದೆ. 2016ರಲ್ಲಿ ಭಕ್ತರ ಕಡೆಯಿಂದ ದೇಣಿಗೆಯಾಗಿ 1046.28 ಕೋಟಿ ರೂ. ಬಂದಿದ್ದರೆ, 2017ರಲ್ಲಿ ಈ ಮೊತ್ತ 995.89 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಯೇ ಅಧಿಕೃತವಾಗಿ ಹೇಳಿಕೆ ನೀಡಿದೆ. 50 ಕೋಟಿ ರೂ.ಗಳಷ್ಟು ಹಣ ಖೋತಾ ಆಗಲು ನೋಟು ಅಮಾನ್ಯವೇ ಕಾರಣ ಎಂದು ಟಿಟಿಯ ಕಾರ್ಯಕಾರಿ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ಹೇಳಿದ್ದಾರೆ. 

Advertisement

ಜಗತ್ತಿನ ಅತೀ ಶ್ರೀಮಂತ ದೇಗುಲವಾಗಿರುವ ತಿರುಪತಿ ದೇಗುಲಕ್ಕೆ ಏನಿಲ್ಲವೆಂದರೂ ವರ್ಷಕ್ಕೆ ಒಂದು ಸಾವಿರ ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ಅಲ್ಲದೆ ಕಳೆದ ವರ್ಷ 2.73 ಕೋಟಿ ಭಕ್ತರು ತಿರುಪತಿಗೆ ಭೇಟಿ ನೀಡಿದ್ದು, ಇವರು ಹರಕೆ ರೂಪದಲ್ಲಿ ಕೊಟ್ಟ ಕೂದಲಿನ ಪ್ರಮಾಣವೇ 1,87,000 ಕೆಜಿ. ಈ ಕೂದಲಿನ ಮಾರಾಟದಿಂದಲೇ ದೇಗುಲಕ್ಕೆ 6 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಂದಿದೆ. ಆದರೆ ದೇಗುಲದ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಟಿಟಿಡಿ ಕೇಂದ್ರ ಸರ್ಕಾರದ ನೋಟು ಅಮಾನ್ಯ ನಿರ್ಧಾರವನ್ನೇ ಹೊಣೆ ಮಾಡಿದೆ.

2016ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿದ ಮೇಲೆ ದೇಗುಲಕ್ಕೆ ಭಾರಿ ಪ್ರಮಾಣದ ಕಾಣಿಕೆ ಹರಿದು ಬಂತು. ಜತೆಗೆ ಹಳೇ ನೋಟುಗಳನ್ನು ಬ್ಯಾಂಕಿಗೆ ವಾಪಸ್‌ ನೀಡುವ ದಿನಾಂಕ ಮುಗಿದ ಮೇಲೂ ಭಾರಿ ಪ್ರಮಾಣದ ಹಣ ದೇಗುಲಕ್ಕೆ ಬಂದಿದೆ. ಇದನ್ನು ತೆಗೆದುಕೊಳ್ಳಲು ಆರ್‌ಬಿಐ ನಿರಾಕರಿಸಿದ್ದರಿಂದ ದೇಗುಲಕ್ಕೆ 50 ಕೋಟಿ ರೂ. ನಷ್ಟವಾಗಿದೆ ಎಂದು ಅನಿಲ್‌ ಕುಮಾರ್‌ ಹೇಳಿದ್ದಾರೆ.

ಆನ್‌ಲೈನ್‌ ಹುಂಡಿಯಲ್ಲಿ ಹೆಚ್ಚಳ: ಈ ಮಧ್ಯೆ, 2016ಕ್ಕೆ ಹೋಲಿಕೆ ಮಾಡಿದಲ್ಲಿ 2017ರಲ್ಲಿ ದೇಗುಲದ ಆನ್‌ಲೈನ್‌ ಹುಂಡಿಗೆ ಬಂದ ಕಾಣಿಕೆಯಲ್ಲಿ ಹೆಚ್ಚಾಗಿದೆ. ಈ ವರ್ಷ 15.36 ಕೋಟಿ ಬಂದಿದ್ದರೆ, ಕಳೆದ ಬಾರಿ 10.53 ಕೋಟಿ ರೂ.
ಗಳಷ್ಟೇ ಸಂಗ್ರಹವಾಗಿತ್ತು. ಇದಷ್ಟೇ ಅಲ್ಲ ಕಳೆದ ವರ್ಷ ತಿರುಪತಿಯಲ್ಲಿ 10.66 ಕೋಟಿ ಮೌಲ್ಯದ ಲಡ್ಡುಗಳನ್ನು ಪ್ರಸಾದದ ರೂಪವಾಗಿ ವಿತರಿಸಲಾಗಿದೆ ಎಂದು ಅನಿಲ್‌ ಕುಮಾರ್‌ ಹೇಳಿದ್ದಾರೆ. 

ಹಿಂದೂಯೇತರರ ವರ್ಗಾವಣೆ? ಜಗದ್ವಿಖ್ಯಾತ ವೆಂಕಟೇಶ್ವರ ಸ್ವಾಮಿ ಸನ್ನಿಧಾನ ಸೇರಿದಂತೆ, ತಿರುಮಲ- ತಿರುಪತಿ ದೇವಸ್ಥಾನಂ (ಟಿಟಿಡಿ) ಅಡಿಯಲ್ಲಿ ಬರುವ ಎಲ್ಲಾ ದೇಗುಲಗಳಲ್ಲಿ ಸೇವೆ ಸಲ್ಲಿಸುತ್ತಿರುವ 44 ಹಿಂದೂಯೇತರ ಸಿಬ್ಬಂದಿ ಬೇರೆ ಇಲಾಖೆಗಳಿಗೆ ತೆರಳುವಂತೆ ಮಾಡಲು ಟಿಟಿಡಿ ಆಡಳಿತ ಮಂಡಳಿ ಆಲೋಚಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಲ್‌, “”ಟಿಟಿಡಿ ದೇಗುಲ ಗಳಲ್ಲಿ ಸೇವೆ
ಸಲ್ಲಿಸುತ್ತಿರುವ ವಿವಿಧ ಸಿಬ್ಬಂದಿಯನ್ನು ಬೇರೆ ಬೇರೆ ಇಲಾಖೆಗಳಿಗೆ ತೆರಳುವಂತೆ ಸೂಚಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದ್ದು, ಸರ್ಕಾರವೂ ಇವರನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಲು ಒಪ್ಪಿದೆ” ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next