Advertisement

ಅಕ್ರಮ ಮತದಾನಕ್ಕಾಗಿ ನಕಲಿ ಮತದಾರರ ಸೇರ್ಪಡೆ: ಮನಿಗಾರ

05:50 PM Jun 05, 2022 | Shwetha M |

ವಿಜಯಪುರ: ವಾಯವ್ಯ ಶಿಕ್ಷಕರ ಮೇಲ್ಮನೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ಮತದಾನಕ್ಕಾಗಿ ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಈ ಕುರಿತು ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ಇದಕ್ಕೆ ಕಾರಣವಾದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲು ಆಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ವಾಯವ್ಯ ಶಿಕ್ಷಕರ ಮೇಲ್ಮನೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸಪ್ಪ ಮನಿಗಾರ ಹೇಳಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 19,505 ಮತದಾರರಿದ್ದು ಹಲವು ಕಡೆಗಳಲ್ಲಿ ಮತದಾರರ ಪಟ್ಟಿಗೆ ಅಕ್ರಮವಾಗಿ ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಅತಿಥಿ ಉಪನ್ಯಾಸಕನಾಗಿ ನಾನು ಸೇವೆ ಸಲ್ಲಿಸುತ್ತಿರುವ ಮುಧೋಳ ತಾಲೂಕಿನ ಕಾಲೇಜಿನಲ್ಲೇ ಅಕ್ರಮ ಮತದಾರರ ಸೇರ್ಪಡೆ ಪತ್ತೆಯಾಗಿವೆ ಎಂದು ಮತದಾರರ ಪಟ್ಟಿ ಪ್ರದರ್ಶಿಸಿದರು.

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ಮತದಾರರ ಸೇರ್ಪಡೆಗೆ ಹಾಲಿ ಸದಸ್ಯ ಅರುಣ ಶಹಾಪುರ ಅವರೇ ಪ್ರಮುಖ ಕಾರಣ. ಹೀಗಾಗಿ ಇವರ ಸ್ಪರ್ಧೆಯನ್ನು ಅನರ್ಹಗೊಳಿಸುವಂತೆ ಎರಡು ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.

ಶಿಕ್ಷಕರ ಕ್ಷೇತ್ರವನ್ನು ಎರಡು ಬಾರಿ ಪ್ರಯತ್ನ ಮಾಡಿಲ್ಲ. ಪರಿಣಾಮ ರಾಜ್ಯದ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ 5 ಸಾವಿರ ಅತಿಥಿ ಉಪನ್ಯಾಸಕರು ಬೀದಿಗೆ ಬಿದ್ದರು. ಶಿಕ್ಷಕರ ಸಮಸ್ಯೆಗಳ ಅರಿವೇ ಇಲ್ಲದ ಶಿಕ್ಷಕರೇ ಅಲ್ಲದವರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದೇ ಇಂಥ ಅನ್ಯಾಯಗಳಿಗೆ ಕಾರಣವಾಗುತ್ತಿದೆ ಎಂದು ದೂರಿದರು.

ಮತ್ತೊಂದೆಡೆ ಕಾಂಗ್ರೆಸ್‌ ಪಕ್ಷ ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿ ಅವರನ್ನು ಕಣಕ್ಕೆ ಇಳಿಸಿದ್ದು ಅವರು ಶಿಕ್ಷಕರೇ ಅಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳ ಅರಿವಿಲ್ಲದವರ ಕೈಗೆ ಅಧಿಕಾರ ಕೊಟ್ಟು ನಾವೆಲ್ಲ ಮೂರ್ಖರಾಗಿದ್ದೇವೆ. ಭವಿಷ್ಯದಲ್ಲಿ ಈ ತಪ್ಪುಗಳು ಆಗಬಾರದೆಂದೇ ಅತಿಥಿ ಉಪನ್ಯಾಸಕರು ಸೇರಿದಂತೆ ಎಲ್ಲ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಶಿಕ್ಷಕರ ಪ್ರತಿನಿಧಿಯಾಗಿ ನಾನು ಕಣಕ್ಕೆ ಇಳಿದಿದ್ದೇನೆ ಎಂದು ಮನಿಗಾರ ಹೇಳಿದರು.

Advertisement

ಕ್ಷೇತ್ರದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಬಗ್ಗೆ ಮತದಾರರಿಗೆ ಆಕ್ರೋಶವಿದ್ದು, ಇದು ನನ್ನ ಗೆಲುವಿಗೆ ಸಹಕಾರಿ ಆಗಲಿದೆ ಎಂದರು. ಆರ್‌.ಟಿ.ಚಲವಾದಿ, ಭೀಮಪ್ಪ ಇಟಕಣ್ಣವರ, ಶಂಕರಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next