Advertisement

ಕರಗದ ವಿಧಿವಿಧಾನಕ್ಕೆ ಇಂದು ಚಾಲನೆ

12:45 AM Apr 11, 2019 | Lakshmi GovindaRaju |

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಗುರುವಾರದಿಂದ (ಏ.11) ಆರಂಭವಾಗಲಿದ್ದು, ಏ.19ರಂದು ಮಧ್ಯಾರಾತ್ರಿ ಕರಗ ಶಕ್ತ್ಯೋತ್ಸವ ಜರುಗಲಿದೆ.

Advertisement

ನಗರದ ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮಹೋತ್ಸವದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಅದರಂತೆ ಗುರುವಾರ ರಥೋತ್ಸವ ಹಾಗೂ ಧ್ವಜಾರೋಹಣದ ಮೂಲಕ ಬೆಂಗಳೂರು ಕರಗ ಶಕ್ತ್ಯೋತ್ಸವದ ವಿಧಿವಿಧಾನಕ್ಕೆ ಚಾಲನೆ ದೊರೆಯಲಿದೆ.

ಗುರುವಾರದಿಂದ ಆರಂಭವಾಗುವ ಧಾರ್ಮಿಕ ವಿಧಿವಿಧಾನಗಳು ಏ.21ರವರೆಗೆ ಅಂದರೆ 11 ದಿನಗಳು ನಡೆಯಲಿದ್ದು, ಕರಗದ ಕೊನೆಯ ದಿನ ಹೆಂಗೆಳೆಯರು ತಮ್ಮ ಮನೆಗಳಿಂದ ಬಿಂದಿಗೆಯಲ್ಲಿ ತಂದ ಅರಿಶಿಣ ನೀರಿನಿಂದ ಓಕುಳಿ ಆಡುವ ಮೂಲಕ ವಸಂತೋತ್ಸವ ಆಚರಿಸಲಾಗುತ್ತದೆ. ಅದೇ ದಿನ ರಾತ್ರಿ ಧ್ವಜಾರೋಹಣ ಮಾಡುವ ಮೂಲಕ ಕರಗ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

ಈ ಬಾರಿಯೂ ಹಸಿ ಕರಗವನ್ನು ಅರ್ಚಕ ಎನ್‌.ಮನು ಹೊರಲಿದ್ದು, ಗುರುವಾರದಿಂದ ಧಾರ್ಮಿಕ ವಿಧಿವಿಧಾನಗಳಲ್ಲಿ ತಮ್ಮ ತೊಡಗಿಸಿಕೊಳ್ಳಲಿದ್ದಾರೆ. ಕಳೆದ ಬಾರಿಯೇ ಮನು ಅವರು ಕರಗ ಹೊರಲು ಎಲ್ಲ ವಿಧಿವಿಧಾನಗಳನ್ನು ನೆರವೇರಿಸಿದ್ದರಾದರೂ, ಕೊನೆಯ ಗಳಿಗೆಯಲ್ಲಿ ಭಯಗೊಂಡ ಕಾರಣದಿಂದ ಅವರ ಬದಲಿಗೆ ಅರ್ಚಕ ಜ್ಞಾನೇಂದ್ರ ಕರಗವನ್ನು ಹೊತ್ತಿದ್ದರು.

ಬಿಬಿಎಂಪಿಯಿಂದ ಅಗತ್ಯ ವ್ಯವಸ್ಥೆ: ಪಾಲಿಕೆಯ ವತಿಯಿಂದ ಕರಗ ಉತ್ಸವಕ್ಕೆ ಪ್ರತಿವರ್ಷದ ಈ ಬಾರಿಯೂ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ಉತ್ಸವಕ್ಕೆ 1 ಕೋಟಿ ರೂ. ಮೀಸಲಿಟ್ಟಿದ್ದರೆ, ಈ ಬಾರಿ ಬಜೆಟ್‌ನಲ್ಲಿ 50 ಲಕ್ಷ ರೂ. ಅನುದಾನ ನೀಡಿದೆ. ಇದರೊಂದಿಗೆ ಕರಗ ಸಾಗುವ ಮಾರ್ಗಗಳನ್ನು ಸುಂದರೀಕರಣಗೊಳಿಸುವುದು, ಭಕ್ತರ ಅನುಕೂಲಕ್ಕಾಗಿ ಇ-ಶೌಚಾಲಯ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಪಾಲಿಕೆಯಿಂದ ಮಾಡಿಕೊಡಲಾಗುತ್ತದೆ.

Advertisement

ಕರಗದ ಕಾರ್ಯಕ್ರಮಗಳ ಪಟ್ಟಿ
ಏ.11: ರಾತ್ರಿ 10 ಗಂಟೆಗೆ ದೇವರ ರಥೋತ್ಸವ, ಮುಂಜಾನೆ 4ಕ್ಕೆ ದ್ವಜಾರೋಹಣ ಮೂಲಕ ಕರಗಕ್ಕೆ ಚಾಲನೆ

ಏ.12: ಕರಗದ ಕುಂಟೆ, ಗಂಗೆಗೆ ವಿಶೇಷ ಪೂಜೆ

ಏ.13: ಸಂಪಂಗಿ ಕೆರೆಯ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ವಿಶೇಷ ಪೂಜೆ

ಏ.14: ಲಾಲ್‌ಬಾಗ್‌ ರಸ್ತೆಯಲ್ಲಿರುವ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಏ.15: ಗವಿಪುರ ಗುಟ್ಟಹಳ್ಳಿಯ ಜಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಏ.16: ದೀಪದ ಆರತಿ ಉತ್ಸವ ಮತ್ತು ಅಣ್ಣಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

ಏ.17: ಹಸಿ ಕರಗ ಮತ್ತು ಕರಗದ ಕುಂಟೆಗೆ ವಿಶೇಷ ಪೂಜೆ

ಏ.18: ಪೊಂಗಲ್‌ ಸೇವೆ, ಪುರಾಣ ಕಥನ ಹಾಗೂ ಕಲಾಸಿಪಾಳ್ಯದ ಮರಿಸ್ವಾಮಿ ಮಠದಲ್ಲಿ ವಿಶೇಷ ಪೂಜೆ

ಏ.19: ಬೆಳಗ್ಗೆ 9ಕ್ಕೆ ಕಬ್ಬನ್‌ಪಾರ್ಕ್‌ನಲ್ಲಿರುವ ಕರಗದ ಕುಂಟೆಗೆ ವಿಶೇಷ ಪೂಜೆ, ರಾತ್ರಿ 12ಕ್ಕೆ ಶಕ್ತ್ಯೋತ್ಸವ

ಏ.20: ಗಾವು ಶಾಂತಿ ಮತ್ತು ಭಾರತ ಕಥಾ ಪ್ರವಚನ

ಏ.21: ಸಂಜೆ 4ಕ್ಕೆ ವಸಂತೋತ್ಸವ, ರಾತ್ರಿ 10ಕ್ಕೆ ದೇವತಾ ಉತ್ಸವ, ರಾತ್ರಿ 12ಕ್ಕೆ ಧ್ವಜಾವರೋಹಣದ ಬಳಿಕ ಕರಗಕ್ಕೆ ತೆರೆ

Advertisement

Udayavani is now on Telegram. Click here to join our channel and stay updated with the latest news.

Next