Advertisement

ಯೋಜನೆಗಳು ಯಾರದ್ದೇ ಆಗಿರಲಿ ಅನುಷ್ಠಾನ ಸಮರ್ಪಕವಾಗಬೇಕು

11:26 AM Jun 07, 2017 | Team Udayavani |

ಜನರ ಜತೆಗೆ ನೇರ ಸಂಪರ್ಕ ಹೊಂದಿರುವುದು ರಾಜ್ಯ ಸರಕಾರವೇ ಹೊರತು ಕೇಂದ್ರವಲ್ಲ. ಹೀಗಾಗಿ ಯೋಜನೆಗಳ ಜಾರಿಗೆ ಕೇಂದ್ರ ರಾಜ್ಯವನ್ನು ಅವಲಂಬಿಸಲೇಬೇಕು.  

Advertisement

ತನ್ನ ಹಲವು ಯೋಜನೆಗಳನ್ನು ರಾಜ್ಯ ಸರಕಾರ ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂಬ ಅಸಮಾಧಾನ ಕೇಂದ್ರ ಸರಕಾರಕ್ಕಿದೆ. ಕೇಂದ್ರ ಇಂಧನ ಸಚಿವ ಪಿಯೂಷ್‌ ಗೋಯಲ್‌ ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಸರಕಾರದ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಕೇಂದ್ರ ಸರಕಾರ ತನ್ನ ಮೂರು ವರ್ಷದ ಆಡಳಿತಾವಧಿಯಲ್ಲಿ ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿರುವುದಂತೂ ನಿಜ. ಅದು ಎಷ್ಟರಮಟ್ಟಿಗೆ ಜನರಿಗೆ ತಲುಪಿದೆ ಎಂಬ ಮೌಲ್ಯಮಾಪನ ಈಗ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೇಂದ್ರದ ಯೋಜನೆಗಿಂತಲೂ ರಾಜ್ಯದ ಯೋಜನೆಗಳೇ ಹೆಚ್ಚು ಬಿರುಸಾಗಿ ಜಾರಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೋಯಲ್‌ ಅಸಮಾಧಾನ ಹೊರಹಾಕಿದ್ದಾರೆ. ಹಾಗೆಂದು ರಾಜ್ಯದ ಯೋಜನೆಗಳನ್ನು ಬದಿಗಿಟ್ಟು ಕೇಂದ್ರ ಯೋಜನೆಗಳನ್ನು ಜಾರಿ ಮಾಡಬೇಕೆಂದು ಅಲ್ಲ. ಆದರೆ ಕೇಂದ್ರವೂ ಜನರಿಗಾಗಿಯೇ ಯೋಜನೆಗಳನ್ನು ರೂಪಿಸುತ್ತದೆ. ಅದನ್ನೂ° ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹೊಣೆ ರಾಜ್ಯದ್ದು. 

ಜನರ ಜತೆಗೆ ನೇರ ಸಂಪರ್ಕ ಹೊಂದಿರುವುದು ರಾಜ್ಯ ಸರಕಾರವೇ ಹೊರತು ಕೇಂದ್ರ ಸರಕಾರವಲ್ಲ. ಹೀಗಾಗಿ ಯೋಜನೆಗಳ ಜಾರಿಗೆ ಕೇಂದ್ರ ರಾಜ್ಯವನ್ನು ಅವಲಂಬಿಸಲೇಬೇಕಾಗಿದೆ.  ಕರ್ನಾಟಕದ ವಿಷಯಕ್ಕೆ ಬರುವುದಾದರೆ, ಇಷ್ಟರ ತನಕ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರ ಬರ ಪರಿಹಾರ, ನೀರು ಹಂಚಿಕೆ ಮತ್ತಿತರ ಪ್ರಮುಖ ವಿಷಯಗಳಲ್ಲಿ ಕೇಂದ್ರ ಸರಿಯಾಗಿ ಸಹಕರಿಸುತ್ತಿಲ್ಲ, ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸುತ್ತಿತ್ತು. ಆದರೆ ಇದೀಗ ಪರಿಸ್ಥಿತಿ ತಿರುವುಮುರುವು ಆಗಿ, ಕೇಂದ್ರವೇ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡಿದೆ. ವಿದ್ಯುತ್‌ ಉಳಿತಾಯ ಮಾಡುವ ಗುರಿಯಿರಿಸಿಕೊಂಡಿರುವ ಎಲ್‌ಇಡಿ ಬಲ್ಬ್ ವಿತರಿಸುವ ಉಜಾಲ, ಬಿಪಿಎಲ್‌ ಕುಟುಂಬಗಳಿಗೆ ಉಚಿತ ಗ್ಯಾಸ್‌ ಸಂಪರ್ಕ ಒದಗಿಸುವ ಉಜ್ವಲ, ರೈತರನ್ನು ಬೆಳೆನಾಶದಂತಹ ಸಂದರ್ಭದಲ್ಲಿ ಸಂಕಷ್ಟದಿಂದ ಪಾರು ಮಾಡುವ ಪ್ರಧಾನ್‌ಮಂತ್ರಿ ಫ‌ಸಲ್‌ ಬಿಮಾ ಯೋಜನೆ ಸೇರಿದಂತೆ ಕೆಲವು ಯೋಜನೆಗಳು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ ಎನ್ನುವ ಆರೋಪ ಕೇಂದ್ರದ್ದು. ಕರ್ನಾಟಕಕ್ಕೆ 23 ಕೋಟಿ ಎಲ್‌ಇಡಿ ಬಲ್ಬ್ಗಳನ್ನು ವಿತರಿಸಲು ಅವಕಾಶ ನೀಡಲಾಗಿತ್ತು, ಆದರೆ ಸರಕಾರ ವಿತರಿಸಿದ್ದು ಬರೀ 1.5 ಕೋಟಿ ಬಲ್ಬ್ ಗಳನ್ನು.

ಅದೇ ಕರ್ನಾಟಕಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಗುಜರಾತ್‌ನಲ್ಲಿ 3 ಕೋಟಿಗೂ ಹೆಚ್ಚು ಬಲ್ಬ್ ವಿತರಣೆಯಾಗಿದೆ ಎಂದು ಗೋಯಲ್‌ ಉದಾಹರಣೆಯನ್ನೂ ನೀಡಿದ್ದಾರೆ. ಇದು ಅಲ್ಲಗಳೆಯಲು ಸಾಧ್ಯವಾಗದ ಆರೋಪ. 

ಕೇಂದ್ರ ಮತ್ತು ರಾಜ್ಯದಲ್ಲಿ ಭಿನ್ನ ಪಕ್ಷಗಳ ಸರಕಾರ ಇದ್ದಾಗ ಈ ಮಾದರಿಯ ತಿಕ್ಕಾಟಗಳು ಸಾಮಾನ್ಯ. ಕರ್ನಾಟಕ ಎಂದಲ್ಲ, ವಿಪಕ್ಷಗಳ ಸರಕಾರ ಇರುವ ಎಲ್ಲ ರಾಜ್ಯಗಳು ಸದಾ ಕೇಂದ್ರದ ವಿರುದ್ಧ ಒಂದಲ್ಲ ಒಂದು ದೂಷಣೆಯನ್ನು ಮಾಡುತ್ತಿರುತ್ತವೆ. ಇವೆಲ್ಲ ರಾಜಕೀಯ ಪ್ರೇರಿತ ದೂಷಣೆಗಳು ಎನ್ನುವುದು ಜನಸಾಮಾನ್ಯರಿಗೂ ಗೊತ್ತಿರುವ ವಿಷಯವೇ. ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿಸಿ ಅದು ಯಶಸ್ವಿಯಾದರೆ ಬಿಜೆಪಿಗೆ ಅನುಕೂಲವಾಗಬಹುದು ಎಂಬ ಆತಂಕ ರಾಜ್ಯ ಸರಕಾರಕ್ಕಿರಬಹುದು. 

Advertisement

ಇದೇ ವೇಳೆ ಕೇಂದ್ರಕ್ಕೂ ತನ್ನ ಯೋಜನೆಗಳು ಜನರಿಗೆ ತಲುಪದಿದ್ದರೆ ಸದ್ಯದಲ್ಲೇ ನಡೆಯಲಿರುವ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಭೀತಿಯಿದೆ. ಕೇಂದ್ರ ಮತ್ತು ರಾಜ್ಯಗಳ ರಾಜಕೀಯ ಲೆಕ್ಕಾಚಾರದಲ್ಲಿ ನಷ್ಟವಾಗಿರುವುದು ಮಾತ್ರ ಜನರಿಗೆ. ಯೋಜನೆಗಳ ಅನುಷ್ಠಾನದಲ್ಲಿ ರಾಜಕೀಯ ಲಾಭದ ಲೆಕ್ಕಾಚಾರ ಮಾಡುವುದು ಸರಿಯಲ್ಲ. ಯೋಜನೆಗಳು ರಾಜ್ಯದ್ದಿರಲಿ ಕೇಂದ್ರದ್ದಿರಲಿ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಅಧಿಕಾರಲ್ಲಿರುವವರ ಹೊಣೆ. ಕೇಂದ್ರ ಕೂಡ ವಿಪಕ್ಷಗಳ ಅಧಿಕಾರವಿರುವ ರಾಜ್ಯಗಳಿಗೆ ಬೇಧಭಾವ ಮಾಡಬಾರದು. ಆಗ ಮಾತ್ರ ಒಕ್ಕೂಟ ವ್ಯವಸ್ಥೆ ಎನ್ನುವುದು ಅರ್ಥಪೂರ್ಣವಾದೀತು.

Advertisement

Udayavani is now on Telegram. Click here to join our channel and stay updated with the latest news.

Next