Advertisement

ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒಟ್ಟಾಗಿ: ಕೋನರೆಡ್ಡಿ

06:30 AM Feb 10, 2018 | Team Udayavani |

ವಿಧಾನಸಭೆ: ಕಳಸಾ-ಬಂಡೂರಿ  ಮಹದಾಯಿ ಯೋಜನೆ ಜಾರಿಗೆ ಎರಡೂ ರಾಷ್ಟ್ರೀಯ ಪಕ್ಷಗಳು ಸ್ವ ಪ್ರತಿಷ್ಠೆ ಬಿಟ್ಟು ರಾಜ್ಯದ ಹಿತಾಸಕ್ತಿಗಾಗಿ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನ್ಯಾಯಾಧೀಕರಣದ ಹೊರಗೆ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಜೆಡಿಎಸ್‌ನ ಕೋನರೆಡ್ಡಿ ಆಗ್ರಹಿಸಿದರು.

Advertisement

ಶುಕ್ರವಾರ ಸಾರ್ವಜನಿಕ ಜರೂರು ವಿಷಯದಡಿ ಮಹದಾಯಿ ವಿವಾದ ಪ್ರಸ್ತಾಪಿಸಿದ ಅವರು, ನ್ಯಾಯಾಧೀಕರಣದ ವಿಚಾರಣೆ ನಡೆಯುತ್ತಿದ್ದು ಆಗಸ್ಟ್‌ ವೇಳೆಗೆ ಅಂತಿಮ ತೀರ್ಪು ಬರಲಿದೆ. ನ್ಯಾಯಾಂಗ ಹೋರಾಟದಲ್ಲಿ ಪ್ರತಿ ಹೆಜ್ಜೆಯಲ್ಲೂ  ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸುವ ನಾಡಕರ್ಣಿ ಎಂಬ ವಕೀಲರು ಕರ್ನಾಟಕದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅವರನ್ನು ಬದಲಿಸಿ ಎಂದು ಹೇಳುವ ಧೈರ್ಯ ನಮಗಿಲ್ಲದಂತಾಗಿದೆ ಎಂದು ಅವಲತ್ತುಗೊಂಡರು.

ಹೋರಾಟಗಾರರ ಮೇಲೆ 83 ಪ್ರಕರಣ ದಾಖಲಿಸಿದ್ದು ತಕ್ಷಣ ವಾಪಸ್‌ ಪಡೆಯಬೇಕು. ಹೋರಾಟದಲ್ಲಿ ಜೀವ ಕಳೆದುಕೊಂಡ 12 ಮಂದಿಯ ಪೈಕಿ ಮೂವರಿಗೆ ಮಾತ್ರ ಪರಿಹಾರ ಕೊಟ್ಟಿದ್ದು ಉಳಿದವರಿಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌,  ನ್ಯಾಯಾಧೀಕರಣದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಲು ನಮ್ಮ ತಕರಾರೇನಿಲ್ಲ. ಆದರೆ ಅದಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗಬೇಕು. ಆ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ನಾವು ರಾಜಕಾರಣ ಮಾಡಲು ಹೋಗುವುದಿಲ್ಲ ಎಂದು ಹೇಳಿದರು.

ನಾಡಕರ್ಣಿ ಅವರನ್ನು ಬದಲಿಸಿ ಎಂದು ಕರ್ನಾಟಕ ಪರ ವಕೀಲರು ಎಂದೂ ಹೇಳಿಲ್ಲ. ನಾಡಕರ್ಣಿಯೇನು ಭೂತವಾ ಹೆದರಿಕೊಳ್ಳಲು? ನಮ್ಮ ವಾದ ಸರಿ ಇದ್ದರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದರು.

Advertisement

ಪ್ರಾಮಾಣಿಕ ಪ್ರಯತ್ನ
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಪರವಾಗಿ ಉತ್ತರಿಸಿದ ಕಾಗೋಡು ತಿಮ್ಮಪ್ಪ, ನ್ಯಾಯಾಧೀಕರಣದ ಮುಂದೆ ಅಂತಿಮ ವಿಚಾರಣೆಯ ಕಲಾಪ ಪ್ರಾರಂಭವಾಗಿದೆ. 

ನ್ಯಾಯಾಧೀಕರಣದಿಂದ ರಾಜ್ಯಕ್ಕೆ ಲಭ್ಯವಾಗಬೇಕಿರುವ ನೀರಿನ ಪ್ರಮಾಣ ಪಡೆಯಲು ಕಾನೂನಾತ್ಮಕ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ನ್ಯಾಯಾಧೀಕರಣದ ಹೊರಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು  ಮುಕ್ತವಾಗಿದ್ದು ಎಲ್ಲ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.

ಏಕಾಂಗಿ
ಕೋನರೆಡ್ಡಿ ಮಹದಾಯಿ ವಿಚಾರ ಪ್ರಸ್ತಾಪಿಸುವಾಗ ಸದನದಲ್ಲಿದ್ದವರ ಸಂಖ್ಯೆ ಕೇವಲ 20. ಜೆಡಿಎಸ್‌ನವರಂತೂ ಒಬ್ಬರೂ ಇರಲಿಲ್ಲ. ಒಂದು ರೀತಿಯಲ್ಲಿ ಅವರದು ಏಕಾಂಗಿ ಹೋರಾಟ ಎಂಬಂತಾಗಿತ್ತು. ಬಿಜೆಪಿಯ ಜೀವರಾಜ್‌, ನಿಮ್ಮವರೇ ನಿಮ್ಮ ಬೆಂಬಲಕ್ಕೆ ಇಲ್ಲ ಎಂದು ಲೇವಡಿ ಮಾಡಿದರು. ಅದಕ್ಕೆ  ಉತ್ತರ ಕರ್ನಾಟಕದಲ್ಲಿ ಒಬ್ಬ ಗಂಡು ಸಾಕು ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next