ಹೊನ್ನಾವರ: ಜಿಲ್ಲೆಯನ್ನು ಕಾಡಿದ ಮಂಗನ ಕಾಯಿಲೆಗೆ ಚಿಕಿತ್ಸೆ ನೀಡಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು, ಆರೋಗ್ಯ ಇಲಾಖೆಯೊಂದಿಗೆ ವ್ಯವಹರಿಸಲು, ಲಸಿಕೆ ಮತ್ತು ಔಷಧ ಸಂಗ್ರಹಿಸಲು ಬಳಕೆಯಾಗುತ್ತಿದ್ದ ಜಿಲ್ಲಾ ಕೆಎಫ್‌ಡಿ ಘಟಕದ ಎರವಲು ಕಟ್ಟಡ ಅನಾರೋಗ್ಯಕ್ಕೆ ತುತ್ತಾಗಿದೆ. ಸೋರುವುದನ್ನು ತಪ್ಪಿಸಲು ಪ್ಲಾಸ್ಟಿಕ್ ಹೊದೆಸಲಾಗಿದೆ.
ಮಳೆ ಆರಂಭವಾದ ಮೇಲೆ ಮಂಗನ ಕಾಯಿಲೆಗೆ ವಿರಾಮ ನೀಡಿದರೂ ಮುಂದಿನ ಬೇಸಿಗೆಯಲ್ಲಿ ಅದು ಮರುಕಳಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಘಟಕ ಮೊದಲು ಡಾ| ಎಂ.ಪಿ. ಕರ್ಕಿ ಅವರ ಬಾಡಿಗೆ ಕಟ್ಟಡದಲ್ಲಿತ್ತು. ನಂತರ ಭಿಕ್ಕು ಕಾಮತ್ ಎಂಬ ವ್ಯಾಪಾರಿಗಳು 15ಸಾವಿರ ರೂ. ದೇಣಿಗೆ ನೀಡಿ ಸರ್ಕಾರಿ ಆಸ್ಪತ್ರೆಗೆ ಕಟ್ಟಿಸಿಕೊಟ್ಟ ಕಟ್ಟಡಕ್ಕೆ ಬಂತು. ಮಂಗನ ಕಾಯಿಲೆ ರೋಗಿಗಳಿಗೆ ಮಂಕಿಯಲ್ಲಿ ಒಂದು ವಾರ್ಡ್ ಕಟ್ಟಿಸಲಾಗಿತ್ತು. ಅದು ನೆಲಸಮವಾಗಿದೆ. ಈಗ ಎರವಲು ಕಟ್ಟಡಕ್ಕೂ ಅಪಾಯ ಕಾದಿದೆ. ರೀಪುಗಳು ಲಡ್ಡಾಗಿವೆ. ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗಿಲ್ಲ.
ಇಲ್ಲಿ ಒಬ್ಬರು ವೈದ್ಯಾಧಿಕಾರಿಗಳು, ಇಬ್ಬರು ಸಹಾಯಕರಿದ್ದಾರೆ. ಇವರು ಮಂಗನ ಕಾಯಿಲೆ ಸಂಭವನೀಯ ಪ್ರದೇಶಕ್ಕೆ ಓಡಾಡಲು ವಾಹನ ಇಲ್ಲ. ಸಿಬ್ಬಂದಿ ಸಾಕಷ್ಟಿಲ್ಲ. ದಾಖಲೆ, ಕಾಗದ ಪತ್ರಗಳನ್ನು ಸಂಗ್ರಹಿಸಿಡಲು ವ್ಯವಸ್ಥೆ ಇಲ್ಲ.
ಈ ಮಳೆಗಾಲದಲ್ಲಿ ಜಿಲ್ಲೆ ತುಂಬ ಓಡಾಡಿ ಅಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಹಾಯದಿಂದ ಹಳ್ಳಿಯ ಜನ ತಮ್ಮ ಕೊಟ್ಟಿಗೆಯ ದನಗಳ ಉಣ್ಣಿ ನಿವಾರಣೆಗೆ ಬೇಕಾದ ಸಹಾಯ, ಔಷಧ ನೀಡಬೇಕು. ಮುಂದಿನ ವರ್ಷ ಸಂಭವನೀಯ ಪ್ರದೇಶದ ವಿವರಗಳನ್ನು ದಾಖಲಿಸಿ, ಲಸಿಕೆ, ಡಿಎಂಪಿ ತೈಲಕ್ಕೆ ಸಿದ್ಧತೆ ನಡೆಸಬೇಕು. ಮಳೆ ಮುಗಿದೊಡನೆ ಲಸಿಕೆ ನೀಡಿಕೆ ಆರಂಭವಾಗಬೇಕು. ಕಳೆದ ವರ್ಷ ಸಾಗರ ಸೀಮೆಯನ್ನು ಭೀಕರವಾಗಿ ಕಾಡಿ, ಜಿಲ್ಲೆಯ ಸಿದ್ಧಾಪುರ ಸಹಿತ ನಾಲ್ಕು ತಾಲೂಕುಗಳಲ್ಲಿ ಮುಖ ತೋರಿಸಿದ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬೇಕಾದ ಮೂಲ ಸೌಕರ್ಯಗಳಿಲ್ಲ.
ಸಾಗರದಲ್ಲಿ ಕಾಯಿಲೆ ಹಾವಳಿ ನಡೆಸಿದಾಗ ಮುಖ್ಯಮಂತ್ರಿಗಳು 10ಕೋಟಿ ರೂ. ಮೀಸಲಿಟ್ಟಿರುವುದಾಗಿ ಹೇಳಿದ್ದರು. ನಂತರ ಸುದ್ದಿ ಇಲ್ಲ. ಲಸಿಕೆ ಎಲ್ಲಿಂದಲೋ ಬರಬೇಕು, ರಕ್ತ ತಪಾಸಣೆ ಇನ್ನೆಲ್ಲೋ ಆಗಬೇಕು. ಹೀಗಾಗಿ ಮಂಗನ ಕಾಯಿಲೆ ಸಾವು, ನೋವನ್ನು ಉಂಟುಮಾಡಿ ಭೀತಿ ಹುಟ್ಟಿಸಿತ್ತು. ಶಿವಮೊಗ್ಗ ಮಂಗನ ಕಾಯಿಲೆ ಸಂಶೋಧನಾ ಪ್ರಯೋಗಾಲಯ ಚಿಕಿತ್ಸ ಘಟಕ ಆರಂಭಿಸಲು ಸರ್ಕಾರ 5ಕೋಟಿ ರೂ. ನೀಡಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿಲ್ಲ, ಸಾಮರ್ಥ್ಯ ಹೆಚ್ಚಿಸುವ ಮಾತನ್ನೂ ಆಡಿದ್ದಾರೆ. ತುಂಬ ವರ್ಷದ ಸಂಶೋಧಯ ನಂತರ ಪುಣೆಯ ವೈರಾಣು ಸಂಶೋಧನಾ ಸಂಸ್ಥೆ ಲಸಿಕೆ ತಯಾರಿಸಿತ್ತು. ಸಾಮರ್ಥ್ಯ ಹೆಚ್ಚಿಸಲು ಇನ್ನೆಷ್ಟು ಕಾಲ ಬೇಕೋ ಗೊತ್ತಿಲ್ಲ. ಮಂಗನ ಕಾಯಿಲೆ ಆರಂಭವಾದ ಮೇಲೆ ಶಿವಮೊಗ್ಗ ಜಿಲ್ಲೆಯ ನಂತರ ಅತಿಹೆಚ್ಚು ನರಳಿದ್ದು, ಸಾವು, ನೋವು ಸಂಭವಿಸಿದ್ದು ಉತ್ತರಕನ್ನಡದಲ್ಲಿ ಎಂಬುದಕ್ಕೆ ಇಲಾಖೆಯಲ್ಲಿ ದಾಖಲೆ ಇದೆ. ಆದ್ದರಿಂದ ಆರೋಗ್ಯ ಮಂತ್ರಿಗಳು ಉತ್ತರ ಕನ್ನಡ ಜಿಲ್ಲಾ ಘಟಕ ಸುಸ್ಸಜ್ಜಿತವಾಗುವಂತೆ ಮಾಡಬೇಕು. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಪ್ರಯತ್ನಿಬೇಕು. ಮನೆಗೆ ಬೆಂಕಿಬಿದ್ದ ಮೇಲೆ ಬಾವಿ ತೋಡಿದರೆ ಪ್ರಯೋಜನವಿಲ್ಲ, ಮಂಗನ ಕಾಯಿಲೆ ಬರುವ ಮೊದಲು ಸಂಬಂಧಿಸಿದವರು ಎಚ್ಚರಾಗಬೇಕಿದೆ.
•ಜೀಯು, ಹೊನ್ನಾವರ