Advertisement

ಆದರ್ಶ ಯಜಮಾನ ಈ “ದಶರಥ’

09:05 AM Mar 25, 2019 | Lakshmi GovindaRaju |

ರವಿಚಂದ್ರನ್‌ ಅಭಿನಯದ “ದೃಶ್ಯಂ’ ಚಿತ್ರ ನೋಡಿದವರಿಗೆ ಅವರನ್ನು ಪುನಃ ಅಂಥದ್ದೇ ಫ್ಯಾಮಿಲಿ ಚಿತ್ರದಲ್ಲಿ ನೋಡುವ ಬಯಕೆಯನ್ನು ಪ್ರೇಕ್ಷಕರು ಬಯಸಿದ್ದರು. ಅಭಿಮಾನಿಗಳಿಗೂ ತಮ್ಮ ಹೀರೋನನ್ನು ಹಾಗೆಯೇ ನೋಡಬೇಕು ಎಂಬ ತುಡಿತವಿತ್ತು. ಇದೀಗ “ದಶರಥ’ ಚಿತ್ರದ ಮೂಲಕ ಅದು ಈಡೇರಿದೆ.

Advertisement

ಹೌದು, ರವಿಚಂದ್ರನ್‌ ಈ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ಎಂ.ಎಸ್‌.ರಮೇಶ್‌ ಅವರನ್ನು ಹೊಸ ಪಾತ್ರದ ಮೂಲಕ ತೆರೆಯ ಮೇಲೆ ತರುತ್ತಿದ್ದಾರೆ. ಚಿತ್ರ ಪೂರ್ಣಗೊಂಡಿದ್ದು, ಇಷ್ಟರಲ್ಲೇ ಅದು ಪ್ರೇಕ್ಷಕರ ಮುಂದೆ ಬರಲಿದೆ.

ರವಿಚಂದ್ರನ್‌ ಇದುವರೆಗೆ ವಕೀಲರಾಗಿ ಕಾಣಿಸಿಕೊಂಡಿದ್ದು ಕಡಿಮೆ. ಬೆರಳೆಣಿಕೆ ಚಿತ್ರಗಳಲ್ಲಿ ಮಾತ್ರ ಲಾಯರ್‌ ಆಗಿ ಸೈ ಎನಿಸಿಕೊಂಡಿದ್ದ ಅವರು, ಮಾಡಿದ ಚಿತ್ರಗಳೆಲ್ಲವೂ ಸೂಪರ್‌ ಹಿಟ್‌ ಆಗಿದ್ದವು. ಕಳೆದ ಹತ್ತು ವರ್ಷಗಳಿಂದ ಅನೇಕ ಚಿತ್ರಗಳಲ್ಲಿ ನಟಿಸಿದ್ದರೂ, ರವಿಚಂದ್ರನ್‌ ಲಾಯರ್‌ ಆಗಿ ಕಾಣಿಸಿಕೊಂಡಿರಲಿಲ್ಲ.

ಈಗ “ದಶರಥ’ ಚಿತ್ರದಲ್ಲಿ ಬ್ಲಾಕ್‌ ಕೋಟು ಹಾಕಿಕೊಂಡು ಅಭಿಮಾನಿಗಳನ್ನು ರಂಜಿಸಲು ಅಣಿಯಾಗಿದ್ದಾರೆ. ರವಿಚಂದ್ರನ್‌ ಅವರಿಗೆ ಈ ಚಿತ್ರದ ಕಥೆ ಮತ್ತು ಪಾತ್ರ ಎರಡೂ ಪಕ್ಕಾ ಹೊಂದಿಕೊಂಡಿವೆ. ಹಾಗಾದರೆ ಇಲ್ಲಿ ರವಿಚಂದ್ರನ್‌ ಲಾಯರ್‌ ಅಷ್ಟೇನಾ ಎಂಬ ಪ್ರಶ್ನೆ ಬರಬಹುದು. ಅವರಿಲ್ಲಿ ಮನೆಯೊಳಗೆ ತಂದೆಯಾಗಿ, ನ್ಯಾಯಾಲಯದಲ್ಲಿ ವಕೀಲರಾಗಿ ಕಾಣಿಸಿಕೊಂಡಿದ್ದಾರೆ.

“ಮನೆಯಲ್ಲಿ ಮಕ್ಕಳು ತಪ್ಪು ಮಾಡದಿದ್ದಾಗ ಅವರ ಪರ ನಿಲ್ಲಬೇಕು. ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು’ ಎಂಬ ನಿಲುವನ್ನು ಪ್ರತಿಪಾದಿಸುವುದು ಅವರ ಪಾತ್ರವಂತೆ. ಈ ಚಿತ್ರ ನೋಡಿದ ಮೇಲೆ ಈ ಥರದ ಅಪ್ಪ ನಮಗೂ ಇರಬೇಕು ಅಂಥ ಪ್ರತಿಯೊಬ್ಬರಿಗೂ ಅನಿಸುತ್ತದೆ.

Advertisement

ಮನೆಯ ಒಬ್ಬ ಆದರ್ಶ ಯಜಮಾನ, ಆದರ್ಶ ತಂದೆ ಹೇಗೆ ವರ್ತಿಸಬಹುದು ಅನ್ನೋದನ್ನ ರವಿಚಂದ್ರನ್‌ ಪಾತ್ರ ತೋರಿಸುತ್ತದೆ ಎಂಬುದು ನಿರ್ದೇಶಕರ ಮಾತು. ಇಂದು ಎಲ್ಲರ ಮನೆಯಲ್ಲೂ ನಡೆಯುವ ಘಟನೆಯಂತೆಯೇ ಈ ಕಥೆ ಹೊಂದಿದೆಯಂತೆ. ನಮ್ಮ ಸುತ್ತಮುತ್ತ ಬಹುತೇಕ ಎಲ್ಲರೂ ನೋಡಿರುವ, ಅನುಭವಿಸಿರುವ ಕಥೆಯೇ “ದಶರಥ’ ಚಿತ್ರದಲ್ಲೂ ಇದೆಯಂತೆ.

“ವಯಸ್ಸಿಗೆ ಬಂದ ಹುಡುಗಿಯರು ಎಷ್ಟು ಸೇಫ್ ಆಗಿ ಮನೆಗೆ ಬರುತ್ತಾರೆ, ಅವರ ಸಮಸ್ಯೆಗಳೇನು, ಮನೆಯವರ ಪ್ರತಿಕ್ರಿಯೆ ಏನು, ನಮ್ಮ ಸುತ್ತಮುತ್ತಲಿನ ವಾತಾವರಣ ಹೇಗಿದೆ ಅನ್ನೋದನ್ನ ಈ ಚಿತ್ರ ಪ್ರತಿಬಿಂಬಿಸುವಂತಿದೆಯಂತೆ. “ದಶರಥ’ ಚಿತ್ರದಲ್ಲಿ ರವಿಚಂದ್ರನ್‌ ಅವರೊಂದಿಗೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಸೋನಿಯಾ ಅಗರ್‌ವಾಲ್‌, ಅಭಿರಾಮಿ, ರಂಗಾಯಣ ರಘು, ಅವಿನಾಶ್‌, ಶೋಭರಾಜ್‌, ತಬಲ ನಾಣಿ, ಮೇಘಶ್ರೀ, ಮಾಲತಿ ಸರದೇಶಪಾಂಡೆ ಹೀಗೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಗುರುಕಿರಣ್‌ ಸಂಗೀತವಿದೆ. ವಿ. ಮನೋಹರ್‌, ಕವಿರಾಜ್‌, ಸಂತೋಷ್‌ ನಾಯಕ್‌ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಜಿ.ಎಸ್‌.ವಿ ಸೀತಾರಾಮ್‌ ಛಾಯಾಗ್ರಹಣವಿದೆ.

ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಎಂ.ಎಸ್‌.ಆರ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಅಕ್ಷಯ್‌ ಮಹೇಶ್‌ “ದಶರಥ’ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯ ಶುರುಮಾಡಿರುವ ಚಿತ್ರತಂಡ, ಚಿತ್ರವನ್ನು ತೆರೆಗೆ ತರಲು ತಯಾರಿ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next