Advertisement

ಮಾದರಿಯಾಗಿದೆ ಕ್ಷೇತ್ರ ಸಂಪನ್ಮೂಲ ಕೇಂದ್ರ

12:27 PM Jul 23, 2019 | Suhan S |

ಸಿಂದಗಿ: ಸರ್ಕಾರಿ ಕಚೇರಿಗಳೆಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಜಿಲ್ಲೆಯ ಇತರ ತಾಲೂಕುಗಳಿಗೆ ಇಲ್ಲಿನ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಾದರಿಯಾಗುವಂತೆ ಮಾಡಲಾಗಿದೆ.

Advertisement

ಕಚೇರಿ ಆವರಣದಲ್ಲಿ ಗೋಡೆಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಾಕಿಕೊಂಡ ಕಾರ್ಯಕ್ರಮಗಳನ್ನು ಚಿತ್ರ ಬಿಡಿಸುವ ಮೂಲಕ ಕಚೇರಿ ಚಿತ್ರಣವನ್ನೆ ಬದಲಿಸಿದ್ದಾರೆ. ಅಧಿಕಾರಿಗಳು ಮನಸು ಮಾಡಿದರೆ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಮಾಡಲು ಸಾಧ್ಯ ಎನ್ನುವುದಕ್ಕೆ ಇಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಆವರಣದಲ್ಲಿನ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಾಕ್ಷಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರಿ ಎಂದರೆ ಕೇವಲ ವೇತನಕ್ಕಾಗಿ ಮತ್ತು ಸಮಯಕ್ಕಾಗಿ ಮಾಡುವವರು ಬಹಳಷ್ಟು ಜನರಿದ್ದಾರೆ. ಇಲ್ಲಿನ ಕ್ಷೇತ್ರ ಸಂಪನ್ಮೂಲ ಕೇಂದ್ರ ಈ ಮೊದಲು ಸಾಮಾನ್ಯ ಕಚೇರಿಯಂತಿತ್ತು. ಕೇಂದ್ರಕ್ಕೆ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಸಂತೋಷಕುಮಾರ ಬೀಳಗಿ ಅಧಿಕಾರ ವಹಿಸಿಕೊಂಡ ನಂತರ ಒಂದಿಲ್ಲ ಒಂದು ರೀತಿಯಾಗಿ ವಿಶೇಷ ತರಬೇತಿ, ಸಾಧನೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ಇಲ್ಲಿ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಶಿಕ್ಷಕರಿಗೆ ಗುಣಾತ್ಮಕ ಶಿಕ್ಷಣ ನೀಡುವ ತರಬೇತಿ ನಡೆಯುತ್ತಿದೆ. ಮಕ್ಕಳು ತಮ್ಮ ಶೈಕ್ಷಣಿಕ ಹಕ್ಕನ್ನು ಅನುಭವಿಸಲು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರಳಿ ತರುವ ಕಾರ್ಯ ನಡೆಯುತ್ತಿದೆ. ಇತ್ತೀಚೆಗೆ ದೇವರಹಿಪ್ಪರಗಿ ಪಟ್ಟಣದ ಹೊರ ವಲಯದ ಇಟ್ಟಂಗಿ ಭಟ್ಟಿಗೆ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಸ್ವತಃ ತಮ್ಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿರುವ ಶಾಲಾ ಮಕ್ಕಳನ್ನು ಗುರುತಿಸಿದ್ದಾರೆ. ತಾಲೂಕಿನ ಹೊನ್ನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಸರು ದಾಖಲಾಗಿರುವ ವಿದ್ಯಾರ್ಥಿ ರವಿ ಲಕ್ಕಪ್ಪ ದೇವೂರ, ವಿದ್ಯಾರ್ಥಿ ಸಾದೇವಪ್ಪ ಲಕ್ಕಪ್ಪ ದೇವೂರ ಅವರನ್ನು ಗುರುತಿಸಿ ಅವರೊಂದಿಗೆ ಆಪ್ತಸಮಾಲೋಚನೆ ಮಾಡಿ ತಿಳಿ ಹೇಳಿ ಮರಳಿ ಶಾಲೆಗೆ ಕಳುಹಿಸಿದ್ದಾರೆ.

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಕಳೆದ ಮೂರು ವರ್ಷದಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಕಚೇರಿಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಸರ್ಕಾರಿ ಶಾಲೆಗಳನ್ನು ಕ್ರಿಯಾಶೀಲ, ಆಕರ್ಷಕ ಮತ್ತು ಗುಣಮಟ್ಟದ ಶಿಕ್ಷಣ ಕೇಂದ್ರಗಳಾಗಿ ಮಾಡುವ ನಿಟ್ಟಿನಲ್ಲಿ ತಮ್ಮ ಕಚೇರಿಯಿಂದಲೇ ಕೆಲಸವನ್ನು ಆರಂಭಿಸಿದ್ದಾರೆ. ಪರಿಸರ ಪ್ರಜ್ಞೆ ಮೂಡಿಸಲು ಕಚೇರಿಯ ಒಳ ಹಾಗೂ ಹೋರ ಆವರಣಗಳಲ್ಲಿ ಗಿಡಗಳನ್ನು ನಡೆಸಿ ಪೋಷಿಸಿ ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಿಸಿದ್ದಾರೆ.

Advertisement

ಸಮನ್ವಯ ಶಿಕ್ಷಣ, ಶಾಲೆಯಲ್ಲಿ ಹೊರಗುಳಿದ ಮಕ್ಕಳನ್ನು ಶಾಲೆಗೆ ಆಮಂತ್ರಿಸುವ ಚಿತ್ರ, ಪಠ್ಯ ಪುಸ್ತಕ ಹಂಚುವ ಚಿತ್ರ, ಬಾಲ ಕಾರ್ಮಿಕರ ನಿಷೇಧ, ಮಕ್ಕಳ ಸಹಾಯವಾಣಿ, ಸೈಕಲ್ ವಿತರಿಸುವ ಕಾರ್ಯಕ್ರಮ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವಂತಹ ಚಿತ್ರ, ಮಕ್ಕಳು ಕಲಿಕಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಚಿತ್ರ, ಶಿಕ್ಷಕರು ಮಾರ್ಗದರ್ಶನ ನೀಡುವಂಥ ಚಿತ್ರ, ಬೇಟಿ ಬಚಾವೋ ಬೇಟಿ ಫ‌ಡಾವೋ ಮುಂತಾದ ಹಲವಾರು ಚಿತ್ರಗಳನ್ನು ತಮ್ಮ ಕಚೇರಿಯ ಗೋಡೆಗಳಲ್ಲಿ ಬರೆಸಿದ್ದಾರೆ.

ಶಿಕ್ಷಕರ, ವಿದ್ಯಾರ್ಥಿಗಳ ಹಾಗೂ ಪಾಲಕರ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಶಿಕ್ಷಕರಿಗೆ ಉತ್ತಮ ತರಬೇತಿ ನೀಡುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಜಿಲ್ಲೆಯಲ್ಲಿ ಅತ್ಯುತ್ತಮವಾದ ಕ್ಷೇತ್ರ ಸಂಪನ್ಮೂಲ ಕೇಂದ್ರವಾಗಿದೆ.•ಎಂ.ಎಸ್‌.ಚೌಧರಿ,ಅಧ್ಯಕ್ಷ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆ

 

•ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next