ಬೆಂಗಳೂರು: ‘ಯೋಗಿ ಆದಿತ್ಯನಾಥರು ಸನ್ಯಾಸಿ ಜೀವನ ದಿಂದ ಏಕಾಏಕಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನರ ಸೇವೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ರಾಜಕೀಯ ಪ್ರವೇಶಿಸಿ, ಐದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿ ಆನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿದವರು’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ತಿಳಿಸಿದರು.
ಇನ್‌ಸ್ಪೈರ್ ಪುಸ್ತಕ ಪ್ರಕಾಶನ ವತಿಯಿಂದ ಭಾರತೀಯ ವಿದ್ಯಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಎಚ್.ಎಂ. ಚಂದ್ರಶೇಖರ್ ಅವರ ಕನ್ನಡ ಅನುವಾದಿತ ಕೃತಿ ‘ಮೋದಿ ಮೆಚ್ಚಿದ ಯೋಗಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಧರ್ಮ ಆಮ್ಲಜನಕವಿದ್ದ ಹಾಗೆ, ಆಮ್ಲಜನಕ ಇಲ್ಲವಾದರೆ ಮನುಷ್ಯ ಹೇಗೆ ಸಾಯುತ್ತಾನೋ ಅದೇ ರೀತಿ ಧರ್ಮ ಇಲ್ಲದಿದ್ದರೆ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಧರ್ಮ ಪರಂಪರೆಯಲ್ಲಿ ಬಂದವರು ಯೋಗಿ ಆದಿತ್ಯನಾಥರು. ಅಲ್ಲದೇ, 1,800 ವರ್ಷಗಳ ಇತಿಹಾಸವಿರುವ ಗೋರಖ್‌ಪುರದ ನಾಥ ಪರಂಪರೆಯ ಹಿನ್ನಲೆ ಹೊಂದಿದ್ದಾರೆ. ಇಂತಹ ಮಹಾನ್ ಸನ್ಯಾಸಿ ಕುರಿತು ಪುಸ್ತಕ ಬಂದಿದ್ದು, ಎಲ್ಲರೂ ಓದಿ ತಿಳಿಯಬೇಕು ಎಂದರು.
ಯದುಗಿರಿಯ ಯತಿರಾಜ ಮಠಾಧ್ಯಕ್ಷರಾದ ಯದು ಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಮಾತನಾಡಿ, ಸಮಾಜಮುಖೀ ಹಾದಿಯಲ್ಲಿಯೇ ಸನ್ಯಾಸಿ ಜೀವನ ಸಾರ್ಥಕತೆ ಅಡಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿದ್ದು, ನಮ್ಮೆಲ್ಲ ಸಂತರಿಗೆ ಸಂಭ್ರಮ ತಂದಿದೆ. ಅಲ್ಲಿ ಅಧ್ಯಾತ್ಮ ವಾತಾವರ ಣವಿದ್ದು, ರಾಜಕೀಯ ಶಕ್ತಿಯ ಮೂಲಕ ದೀನ ದಲಿತರಿಗೆ ಬಡವರಿಗೆ ದಾರಿ ದೀಪವಾಗಬಹುದು ಎಂದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಒಂದು ಕಾಲದಲ್ಲಿ ಜಂಗಲ್ ರಾಜ್ಯವಾಗಿದ್ದ ಉತ್ತರ ಪ್ರದೇಶವನ್ನು ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಸಾಕಷ್ಟು ಬದಲಾವಣೆ ತರುವ ಮೂಲಕ ನಿರ್ಭೀತ ರಾಜ್ಯವಾಗಿಸಿದ್ದಾರೆ. ಯೋಗಿ ಆದಿತ್ಯನಾಥ ಅವರು ನಮ್ಮ ಆದಿಚುಂಚನಗಿರಿ ಪರಂಪರೆಯಿಂದ ಬಂದವರು. ಗೋರಖ್‌ಪುರ ಅವರಿಗೆ ಎರಡನೇ ಮಠ. ಅವರು ಉತ್ತರ ಪ್ರದೇಶದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾದರಿ ರಾಜ್ಯವನ್ನಾಗಿಸುವ ಕನಸು ಹೊಂದಿದ್ದಾರೆ ಎಂದರು.
ಸುಚಿತ್ರ ಫಿಲಂ ಸೊಸೈಟಿ ಅಧ್ಯಕ್ಷ ಕೆ.ವಿ.ಆರ್. ಟ್ಯಾಗೂರ್ ಅವರು ಪುಸ್ತಕ ಪರಿಚಯಿಸಿದರು. ಕೃತಿ ಅನುವಾದಕ ಹಾಗೂ ಸಿಲಿಕಾನ್ ಸಿಟಿ ಕಾಲೇಜು ಅಧ್ಯಕ್ಷ ಡಾ. ಎಚ್.ಎಂ. ಚಂದ್ರಶೇಖರ್, ಹಿರಿಯರಂಗ ಕರ್ಮಿ ಟಿ.ಎಸ್.ನಾಗಾಭರಣ ಹಾಜರಿದ್ದರು.
ಯೋಗಿ ಊಟ ನೆನೆದ ಶ್ರೀಗಳು
ಯೋಗಿ ಆದಿತ್ಯನಾಥರು ಮುಖ್ಯಮಂತ್ರಿ ಸ್ಥಾನಕ್ಕೇರಿದರೂ ಸನ್ಯಾಸ, ಅದರ ರೀತಿ ನೀತಿ ಕೈಬಿಟ್ಟಿಲ್ಲ. ಊಟ, ತಿಂಡಿ, ಆಚಾರ-ವಿಚಾರ, ವಸ್ತ್ರ ಎಲ್ಲದರಲ್ಲೂ ಇಂದಿಗೂ ಸನ್ಯಾಸಿ ಜೀವನದ ಸರಳತೆಯನ್ನೆ ಮೈಗೂಡಿಸಿಕೊಂಡಿದ್ದಾರೆ. ನಿತ್ಯ ಗಂಜಿ, ಮೊಳಕೆ ಕಾಳು, ಹಣ್ಣುಗಳನ್ನು ಸೇವಿಸುತ್ತಾರೆ. ಅವರೊಟ್ಟಿಗೆ ಮಾತುಕತೆಗೆ ಹೋದವರಿಗೂ ಇದೇ ಆಹಾರವನ್ನು ಕೊಡುತ್ತಾರೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥರು ನೆನಪಿಸಿಕೊಂಡರು.