ಕಲಬುರಗಿ: ಭಾರತದ ದೇವತೆಗಳಂತೆಯೇ ಇಲ್ಲಿನ ಮನುಷ್ಯರು ಕೂಡ ನಾಲ್ಕು ತಲೆಗಳು, ಹತ್ತಾರು ಕೈ-ಕಾಲುಗಳು, ಎಂಟು ಭುಜ ಹೊಂದಿದ್ದಾರೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳ ಸಾಮಾನ್ಯ ಜನತೆ ಭಾವಿಸಿದ್ದರು ಎಂದು ಬೆಂಗಳೂರು ನಾಸಾದ ಖ್ಯಾತ ಸಂಶೋಧಕ, ಇತಿಹಾಸ ತಜ್ಞ ಡಾ| ಎಸ್. ಶೆಟ್ಟರ ಹೇಳಿದರು.
ನಗರದ ಮಾತೋಶ್ರೀ ನೀಲಗಂಗಮ್ಮ ಗು. ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ 2016 ಮತ್ತು 2017ನೇ ಸಾಲಿನ “ದೃಶ್ಯಭೂಷಣ” ಪ್ರಶಸ್ತಿ ಪ್ರದಾನ ಮತ್ತು ಕಲಾವಿದರ ಕೃತಿಗಳ ಪ್ರದರ್ಶನ ಉದ್ಘಾಟಿಸಿದ ಅವರು, ನಂದಕುಮಾರಸ್ವಾಮಿ ಮತ್ತು ಶಿಲ್ಪಕಲೆ ಕುರಿತು ಉಪನ್ಯಾಸ ನೀಡಿದರು.
ಭಾರತೀಯ ಕಲೆ ಹಾಗೂ ಸಂಸ್ಕೃತಿಗೆ ಪುರಾತನ ಇತಿಹಾಸವಿದ್ದು, ಭಾರತೀಯ ಕಲೆ ಹಾಗೂ ಸಂಸ್ಕೃತಿಯನ್ನು ಆನಂದ ಕುಮಾರಸ್ವಾಮಿ 19ನೇ ಶತಮಾನದಲ್ಲಿ ಹೊರಜಗತ್ತಿಗೆ ಪರಿಚಯಿಸಿದ ಮೊದಲಿಗರು. ನಂತರ ಪಾಶ್ಚಿಮಾತ್ಯ ರಾಷ್ಟ್ರಗಳ ವಿದ್ಯಾವಂತರು ಮತ್ತು ಕಲಾಸಕ್ತರ ಅಧ್ಯಯನದಿಂದ ಭಾರತದ ಬಹು ಸಂಸ್ಕೃತಿ ಹೊರಗಡೆ ಬಂತು. ಪಾಶ್ಚಿಮಾತ್ಯ ದೇಶಗಳ ಸಾಮಾನ್ಯ ನಾಗರಿಕರು ಭಾರತದ ದೇವತೆಗಳಂತೆ ಇಲ್ಲಿನ ಮನುಷ್ಯರಿಗೂ ಹಲವು ತಲೆಗಳು, ಕೈ-ಕಾಲುಗಳು, ಭುಜಗಳಿವೆ ಎಂದು ತಿಳಿದುಕೊಂಡಿದ್ದರು. ಭಾರತೀಯ ಕಲೆಯಲ್ಲೇ ದೈವಿಶಕ್ತಿ ಇದೆ ಎಂದು ಹೇಳಿದರು. ಕಲಾವಿದರು ದೊಡ್ಡ ಪ್ರತಿಭಾವಂತರಾದರೂ ಒಬ್ಬರನ್ನು ಮತ್ತೂಬ್ಬರು ಮೆಚ್ಚುವುದಿಲ್ಲ. ಅವರೊಬ್ಬರು ಜಗಳಗಂಟರು ಎಂದು ಡಾ| ಶೆಟ್ಟರ ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ದಿ| ಐಡಿಯಲ್ ಫೈನ್ ಸೊಸೈಟಿ ಕಾರ್ಯದರ್ಶಿ ಮತ್ತು ಖ್ಯಾತ ಕಲಾವಿದ ಡಾ| ವಿ.ಜಿ. ಅಂದಾನಿ ಮಾತನಾಡಿ, ಕಲಾವಿದರಿಗೆ ಕೆಲವೇ ಕೆಲವು ಪ್ರಶಸ್ತಿಗಳು ಸೀಮಿತವಾಗಿದೆ. ಹೀಗಾಗಿ ಎಲೆಮರೆ ಕಾಯಿಯಂತೆ ಇರುವ
ಕಲಾವಿದರನ್ನು ಗುರುತಿಸಿ ಅವರಿಗೆ ಸಂಸ್ಥೆಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಹಿರಿಯ ಕಲಾವಿದ ಎಂ.ಬಿ. ಪಾಟೀಲ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಮರಣಿಕೆ ಹಾಗೂ 10,000 ರೂ. ನೀಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಬೆಂಗಳೂರಿನ ಕಲಾವಿದ ಕೆ.ಎಸ್.ಅಪ್ಪಾಜಯ್ಯ ಅವರಿಗೆ 2016ನೇ ಸಾಲಿನ ಹಾಗೂ ಬೀದರ ಜಿಲ್ಲೆಯ ಹುಮನಾಬಾದನ ಎಂ.ವಿ. ಕಂಬಾರ ಅವರಿಗೆ 2017ನೇ ಸಾಲಿನ “ದೃಶ್ಯಭೂಷಣ” ಪ್ರಶಸ್ತಿಯನ್ನು ಡಾ| ಎಸ್.
ಶೆಟ್ಟರ ವಿತರಿಸಿ ಸನ್ಮಾನಿಸಿದರು. ಪ್ರಾಂಶುಪಾಲ ಶೇಷಿರಾವ್ ಬಿರಾದಾರ, ರಾಜಶೇಖರ ಎಸ್., ಡಾ| ಸತೀಶ ವಲ್ಲೆಪೂರೆ ಇದ್ದರು. ವಿದ್ಯಾರ್ಥಿ ಅನುಷಾ ಪ್ರಾರ್ಥನೆ ಗೀತೆ ಹಾಡಿದರು. ಎಚ್.ವಿ. ಮಂತಟ್ಟಿ ನಿರೂಪಿಸಿದರು.