ಉಡುಪಿ: ಸಂಗೀತ ಶ್ರೇಷ್ಠವಾದ ಕಲೆ. ಆ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಎಲ್ಲರ ಪ್ರೋತ್ಸಾಹ ಅಗತ್ಯ. ಪ್ರೋತ್ಸಾಹವಿಲ್ಲದಿದ್ದರೆ ಆಸಕ್ತಿ ಕಡಿಮೆಯಾಗುತ್ತದೆ. ದೇವರಿಗೆ ಪ್ರಾರ್ಥನೆ ಸಲ್ಲಿಸಲು ಸಂಗೀತ ಮುಖ್ಯ. ರೋಗಗಳನ್ನು ಗುಣಪಡಿಸುವ ಶಕ್ತಿಯೂ ಸಂಗೀತಕ್ಕಿದೆ. ಸಂಗೀತವಿಲ್ಲದ ಪ್ರಪಂಚವನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ರಿಜಿಸ್ಟ್ರಾರ್
ಡಾ| ನಾರಾಯಣ ಸಭಾಹಿತ್ ಹೇಳಿದರು.
ಭಕ್ತಿಯುಗದ ಸಂತಕವಿಗಳಾದ ವಾದಿರಾಜ ಮತ್ತು ಕನಕದಾಸರ ಕೊಡುಗೆಗಳನ್ನು ನೆನಪಿಸಿಕೊಳ್ಳುವ ವಾದಿರಾಜ ಕನಕದಾಸ ಸಂಗೀತೋತ್ಸವ ಮತ್ತು ವಿಚಾರ ಸಂಕಿರಣವನ್ನು ಡಿ. 15ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಎ. ಈಶ್ವರಯ್ಯ ಮಾತನಾಡಿ, ಕಳೆದ 39 ವರ್ಷಗಳಿಂದ ಸಂಗೀತೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಶ್ರೇಷ್ಠ ಸಂಗೀತಗಾರರು ಇಲ್ಲಿ ಹಾಡಿದ್ದಾರೆ. ಅನೇಕ ಶಿಬಿರಗಳನ್ನು ಆಯೋಜಿಸಲಾಗಿದೆ. 22 ವರ್ಷಗಳಿಂದ ಸಾಕಷ್ಟು ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದೆ. ಮುಂದೆಯೂ ಹೆಚ್ಚಿನ ವೈಭವದಲ್ಲಿ ನಡೆಯಲಿದೆ ಎಂದರು.
ಮಣಿಪಾಲ ಅಕಾಡೆಮಿ ಅಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾದಿರಾಜ -ಕನಕದಾಸರಿಗೂ ಉಡುಪಿಗೂ ಅವಿನಾಭಾವ ಸಂಬಂಧವಿತ್ತು. ಅವರು ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅವರ ಭಾಷಾ ಸೌಂದರ್ಯ, ಸಂಗೀತ ಸಾಹಿತ್ಯದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.
ವಿಚಾರ ಸಂಕಿರಣದಲ್ಲಿ ಉಪನ್ಯಾಸಕರಾಗಿ ಪ್ರೊ| ಕೆ.ಪಿ ರಾವ್, ಪ್ರೊ| ಉದ್ಯಾವರ ಮಾಧವಾಚಾರ್ಯ, ಡಾ| ಪಾದೇಕಲ್ಲು ವಿಷ್ಣು ಭಟ್ಟ, ಪ್ರೊ| ವಿ. ಅರವಿಂದ ಹೆಬ್ಟಾರ್, ಟಿ. ರಂಗ ಪೈ ವಿಚಾರ ಮಂಡಿಸಿದರು. ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ಉಮಾ ಉದಯ್ ಶಂಕರ್ ಉಪಸ್ಥಿತರಿದ್ದರು.
ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಸಂಯೋಜನಾಧಿಕಾರಿ ಪ್ರೊ| ವರದೇಶ ಹಿರೇಂಗಂಗೆ ಸ್ವಾಗತಿಸಿ, ಸಹ ಸಂಯೋಜನಾಧಿಕಾರಿ ಡಾ| ಆಶೋಕ ಆಳ್ವ ವಂದಿಸಿದರು. ಭಾಮರಿ ಶಿವಪ್ರಕಾಶ್ ನಿರೂಪಿಸಿದರು.