Advertisement

ಮೂರು ದಶಕದಿಂದ ಗುಡಿಸಲೇ ಆಶ್ರಯ ತಾಣ

08:23 PM Jan 25, 2020 | Lakshmi GovindaRaj |

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರಗಳು ಭರವಸೆ ನೀಡುತ್ತಿವೆ. ಆದರೆ ತಾಲೂಕಿನ ಶ್ರವಣಬೆಳಗೊಳ ಹೋಬಳಿ ನಾಗಯ್ಯನಕೊಪ್ಪಲು ಗ್ರಾಮದ ಹತ್ತು ಕುಟುಂಬಗಳು 30 ವರ್ಷದಿಂದ ರಸ್ತೆ ಬದಿಯಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವುದು ಶೋಚನೀಯವಾಗಿದೆ.

Advertisement

ಎಲ್ಲವೂ ಇದೆ ಆದರೆ ಮನೆ ಇಲ್ಲ: ಹತ್ತು ಕುಟುಂಬಗಳು ಗಾರೆ ಹಾಗೂ ಇತರ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನಾಗಯ್ಯನಕೊಪ್ಪಲು ಗ್ರಾಮಸ್ಥರೆಂದು ಹೇಳಲು ಅವರ ಬಳಿ ಚುನಾವಣಾ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಪಡಿತರ ಚೀಟಿ ಸೇರಿದಂತೆ ಸರ್ಕಾರದ ದಾಖಲೆಗಳನ್ನು ಹೊಂದಿದ್ದರೂ ಇವರಿಗೆ ವಾಸ ಮಾಡಲು ಮನೆ ಇಲ್ಲ. ಗ್ರಾಮ ಪಂಚಾಯಿತಿ ಇಲ್ಲವೇ ತಾಲೂಕು, ಜಿಲ್ಲಾಡಳಿತ ನಿವೇಶನ ರಹಿತರಿಗೆ ನಿವೇಶನ ನೀಡಿದರೆ ಅವರೇ ಮನೆ ನಿರ್ಮಾಣ ಮಾಡಿಕೊಳ್ಳುತ್ತಾರೆ.

ಶೌಚ, ಸ್ನಾನಕ್ಕೆ ಬಯಲೇ ಆಧಾರ: ಇನ್ನು ಈ ಹತ್ತು ಕುಟುಂಬದಲ್ಲಿ ಇರುವ ಮಹಿಳೆಯರು ಹಾಗೂ ಬಾಲಕಿಯರ ಸ್ಥಿತಿ ಹೇಳತೀರದು. ಇವರಿಗೆ ಸ್ನಾನ, ಶೌಚ ಎಲ್ಲಕ್ಕೂ ಬಯಲೇ ಆಧಾರವಾಗಿದೆ. ಸ್ನಾನಕ್ಕೆ ಜಾಗವಿಲ್ಲ ಎನ್ನುವುದು ಒಂದೆಡೆಯಾದರೆ ಬಹಿರ್ದೇಸೆಗೆ ಬೇಲಿ ಸಂದಿಗೆ ಹೋಗಬೇಕಿದೆ. ಸಂತೆ ಮೈದಾನದ ಸಮೀಪದಲ್ಲಿ ಇವರು ಗುಡಿಸಲು ಹಾಕಿಕೊಂಡು ವಾಸವಿದ್ದಾರೆ. ಅಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ಅಲ್ಲಿ ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳಲು ಅನುಕೂಲವಾಗುತ್ತದೆ.

ಬಯಲಲ್ಲಿ ಒಲೆ ಹಾಕಿ ಅಡುಗೆ: ಗುಡಿಸಲಿನಲ್ಲಿ ಮೂರು ದಶಕದಿಂದ ವಾಸ ಇರುವ ಈ ಕುಟುಂಬಗಳು ರಸ್ತೆ ಬದಿಯಲ್ಲಿ ನಾಲ್ಕೈದು ಕಲ್ಲು ಜೋಡಿಸಿ ಒಲೆ ಹಾಕಿಕೊಂಡಿದ್ದು, ನಿತ್ಯವೂ ಅದರಲ್ಲಿಯೇ ಅಡುಗೆ ತಿಂಡಿ ಮಾಡಿಕೊಳ್ಳುತ್ತಾರೆ. ಗುಡಿಸಲಿನ ಒಳಗೆ ಒಲೆ ಹಾಕಿಕೊಂಡು ಸೌದೆಯಲ್ಲಿ ಅಡುಗೆ ಮಾಡುವುದರಿಂದ ಗುಡಿಸಲು ಅನಾಹುತಕ್ಕೆ ಸಿಲುಕುತ್ತದೆ ಎಂಬ ಮುಂದಾಲೋಚನೆಯಿಂದ ತಮ್ಮ ಗುಡಿಸಲ ಸಮೀಪ ರಸ್ತೆ ಬದಿಯಲ್ಲಿ ಒಲೆ ಹಾಕಿಕೊಂಡು ಅಡುಗೆ ಮಾಡಿಕೊಳ್ಳುತ್ತಾರೆ.

ಮಳೆಗಾಲದಲ್ಲಿ ಉಪವಾಸ: ಎಲ್ಲರ ಬಳಿಯೂ ಬಿಪಿಎಲ್‌ ಕಾರ್ಡ್‌ ಇರುವುದರಿಂದ ಪಡಿತರ ದೊರೆಯುತ್ತಿದೆ. ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಅಡುಗೆ ಮಾಡಿಕೊಳ್ಳು ಯಾವುದೇ ತೊಂದರೆ ಆಗುವುದಿಲ್ಲ. ಮಳೆಗಾಲದಲ್ಲಿ ಮಾತ್ರ ಅಡುಗೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಊಟ ಮಾಡಿಸುವಷ್ಟರಲ್ಲಿ ಬದುಕು ಸಾಕು ಸಾಕೆನಿಸುತ್ತದೆ. ಮಳೆ ಬಂತೆಂದರೆ ಅಡುಗೆ ಒಲೆ ಸಂಪೂರ್ಣ ನೀರಿನಿಂದ ತುಂಬಿರುತ್ತದೆ. ಸೌದೆಗಳು ನೀರಿನಲ್ಲಿ ಒದ್ದೆಯಾಗಿ ಅಡುಗೆ ಮಾಡಲಾಗದೇ ಹಸಿವಿನಿಂದ ಬಳಲುವಂತಾಗಿದೆ.

Advertisement

ಅಡುಗೆ ಮಾಡಲು ಸೌದೆಗೆ ಬರ: ಬಿಪಿಎಲ್‌ದಾರರಿಗೆ ಸರ್ಕಾರ ಉಚಿತವಾಗಿ ಅನಿಲಭಾಗ್ಯ ಯೋಜನೆ ಇದ್ದರೂ ಉಳ್ಳವರ ಪಾಲಾಗುತ್ತಿದೆ. ಇಂತಹ ಕಡು ಬಡವರಿಗೆ ಯೋಜನೆಯ ಲಾಭ ದೊರೆಯುತ್ತಿಲ್ಲ. ಬೇಸಿಗೆಯಲ್ಲಿ ಸೌದೆ ದೊರೆಯುತ್ತಿದೆ. ಉಳಿದ ಕಾಲದಲ್ಲಿ ಅಡುಗೆ ಮಾಡಲು ಸೌದೆಗೆ ಬರ ಇರುವುದರಿಂದ ತೊಂದರೆ ಅನುಭವಿಸುವಂತಾಗಿದೆ.

ಶಾಮಿಯಾನದಿಂದ ಗುಡಿಸಲು ಮುಚ್ಚುತ್ತಾರೆ: ವಿಶ್ವ ವಿಖ್ಯಾತ ಶ್ರವಣಬೆಳಗೊಳಕ್ಕೆ ದೇಶ ಪ್ರಧಾನ ಮಂತ್ರಿ ಮೋದಿ ಆಗಮಿಸಿದಾಗ, ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಮಂತ್ರಿಗಳು ಹಾಗೂ ರಾಜ್ಯದ ಮುಖ್ಯ ಮಂತ್ರಿ ಆಗಮಿಸಿದಾಗ ಗೊಡಿಸಲು ಕಾಣದಂತೆ ತಾಲೂಕು ಆಡಳಿತ ರಸ್ತೆಯ ಬದಿಗೆ ಶಾಮಿಯಾನ ಹಾಕಿಸಿ ಮರೆ ಮಾಡುತ್ತಾರೆ. ಇವರು ಈ ರೀತಿ ಮಾಡುವುದರಿಂದ ನಮ್ಮ ಸಮಸ್ಯೆ ರಾಜಕಾರಣಿಗಳಿಗೆ ತಿಳಿಯುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ

ಗ್ರಾಪಂಗೆ ಅಲೆದರೂ ಪ್ರಯೋಜನವಿಲ್ಲ: ಈ ಹತ್ತು ಕುಟುಂಬದ ಸದಸ್ಯರು ಮೂರು ದಶಕದಿಂದ ಶ್ರವಣಬೆಳಗಬೊಳ ಗ್ರಾಮ ಪಂಚಾಯಿತಿಗೆ ಹತ್ತಾರು ಬಾರಿ ಮನವಿ ಮಾಡಿದ್ದು, ಗ್ರಾಮದ ಸುತ್ತ ಪಾಳು ಬಿದ್ದಿರುವ ಜಾಗದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿಕೊಡುವಂತೆ ಕೇಳಿಕೊಂಡರು ಯಾವುದೇ ಪ್ರಯೋಜವಾಗಿಲ್ಲ. ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಚುನಾವಣೆ ಸಮಯದಲ್ಲಿ ಪೊಳ್ಳು ಭರವಸೆ ನೀಡುತ್ತಾರೆ ಚುನಾವಣೆ ಮುಗಿದ ಮೇಲೆ ಇತ್ತಕಡೆ ತಲೆ ಹಾಕುವುದಿಲ್ಲ ಎಂದು ಗುಡಿಸಲು ವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಗ್ರಾಮ ಪಂಚಾಯಿತಿಯಿಂದ ಹತ್ತು ಕುಟುಂಬಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇವರು ವಾಸವಿರುವ ಜಾಗಕ್ಕೆ ವಿದ್ಯುತ್‌ ಕಂಬ ಹಾಕಿಸಿ ಬೀದಿ ದೀಪ ವ್ಯವಸ್ಥೆ ಕಲ್ಪಿಸಿದ್ದು, ನಿವೇಶನ ನೀಡಲು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ವೇಶನ ನೀಡಿದ ಮೇಲೆ ಆಶ್ರಯಮನೆ ನಿರ್ಮಿಸಲಾಗುತ್ತದೆ.
-ವಾಸು, ಗ್ರಾಮ ಪಂಚಾಯಿತಿ

ನಾವು ವಾಸವಿರುವ ಜಾಗದಲ್ಲಿ ಮದ್ಯದ ಅಂಗಡಿಗಳಿದ್ದು, ತಡರಾತ್ರಿವರೆಗೂ ಮದ್ಯವ್ಯಸನಿಗಳು ಗುಡಿಸಲು ಸಮೀಪದಲ್ಲಿ ಮದ್ಯಸೇವಿಸಿ ಗಲಾಟೆ ಮಾಡುತ್ತಾರೆ. ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಇರುವುದರಿಂದ ಪ್ರತಿನಿತ್ಯ ಮಧ್ಯರಾತ್ರಿಯ ಬರೆಗೂ ಜಾಗರಣೆ ಮಾಡುವಂತಾಗಿದೆ.
-ಭಾಗ್ಯಮ್ಮ, ಗುಡಿಸಲು ವಾಸಿ

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇವೆ. ಅವರು ರಾತ್ರಿ ವೇಳೆ ಓದಿಕೊಳ್ಳಲು ವಿದ್ಯುತ್‌ ದೀಪವಿಲ್ಲದೇ ಬೀದಿ ದೀಪದ ಕೆಳಗೆ ಪವಿದ್ಯುತ್‌ ಕಂಬದ ಕೆಳಗೆ ನಿತ್ಯವೂ ಓದುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಬೆಳಕಿನ ವ್ಯವಸ್ಥೆ ಆಗಬೇಕಿದೆ.
-ಸುನಿತಾ, ಗುಡಿಸಲು ವಾಸಿ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next