ಲಂಡನ್: ಭಾರತೀಯ ಸ್ಟಾರ್ ಆಲ್ ರೌಂಡರ್ ದೀಪ್ತಿ ಶರ್ಮಾ (Deepti Sharma) ಅವರು ದಿ ಹಂಡ್ರೆಡ್ (The Hundred) ಕೂಟದಲ್ಲಿ ಮಿಂಚಿದ್ದಾರೆ. ಕೊನೆಯ ಕ್ಷಣದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ದೀಪ್ತಿ ಶರ್ಮಾ ಲಂಡನ್ ಸ್ಪಿರಿಟ್ ವುಮೆನ್ ತಂಡದ ಗೆಲುವಿಗೆ ಕಾರಣರಾದರು. ಈ ಮೂಲಕ ಹೀದರ್ ನೈಟ್ ನಾಯಕತ್ವದ ಲಂಡನ್ ಸ್ಪಿರಿಟ್ ವುಮೆನ್ ತಂಡವು ಹಂಡ್ರೆಡ್ ಚಾಂಪಿಯನ್ ಆಯಿತು.
ಲಾರ್ಡ್ಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಲ್ಶ್ ಫೈರ್ ತಂಡವು 8 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಗುರಿ ಬೆನ್ನತ್ತಿದ್ದ ಲಂಡನ್ ಸ್ಪಿರಿಟ್ ವುಮೆನ್ ತಂಡ 98 ಎಸೆತಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ವೆಲ್ಶ್ ಫೈರ್ ತಂಡದಲ್ಲಿ ಜೊನಾಸೆನ್ 54 ರನ್ ಗಳಿಸಿದರು. ಉಳಿದಂತೆ ಹೀಲಿ ಮ್ಯಾಥ್ಯೂಸ್ 22 ರನ್ ಮತ್ತು ನಾಯಕಿ ಬ್ಯೂಮಂಟ್ 21 ರನ್ ಮಾಡಿದರು. ಲಂಡನ್ ಸ್ಪಿರಿಟ್ ಪರ ಇವಾ ಗ್ರೇ ಮತ್ತು ಸರಾಹ್ ಗ್ಲೆನ್ ತಲಾ ಎರಡು ವಿಕೆಟ್ ಕಿತ್ತರೆ, ದೀಪ್ತಿ ಶರ್ಮಾ ಮತ್ತು ತಾರಾ ನೊರಿಸ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಲಂಡನ್ ಸ್ಪಿರಿಟ್ ತಂಡಕ್ಕೆ ವಿಕೆಟ್ ಕೀಪರ್ ಜಾರ್ಜಿಯಾ ರೆಡ್ಮಾಯನೆ 34 ರನ್ ಗಳಿಸಿ ನೆರವು ನೀಡಿದರು. ನಾಯಕಿ ಹೀದರ್ ನೈಟ್ 24 ರನ್, ಗಿಬ್ಸನ್ 22 ರನ್ ಮಾಡಿದರು. ಕೊನೆಯಲ್ಲಿ ದೀಪ್ತಿ ಶರ್ಮಾ 16 ರನ್ ಗಳಿಸಿದರು.
98ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ದೀಪ್ತಿ ಶರ್ಮಾ ತಂಡವನ್ನು ಗೆಲುವಿನ ದಡ ಸೇರಿದರು. ದೀಪ್ತಿ ಬಾರಿಸಿದ ಸಿಕ್ಸರ್ ಬೌಂಡರಿ ಗೆರೆ ದಾಟುತ್ತಿದ್ದಂತೆ ಲಂಡನ್ ಸ್ಪಿರಿಟ್ ಆಟಗಾರ್ತಿಯರು ಓಡಿ ಬಂದು ಸಂಭ್ರಾಮಾಚರಣೆ ಮಾಡಿದರು.