ಬದಿಯಡ್ಕ: ಕತೆಗಾರ ಜನಾರ್ದನ ಎರ್ಪಕಟ್ಟೆಯವರ ಕತೆಗಳು ದಲಿತ ಸಂಸ್ಕೃತಿಯನ್ನು ಚಿತ್ರಿಸಿರುವುದರ ಜೊತೆಗೆ, ಆವುಗಳಲ್ಲಿ ಹರಿಯುವ ಮಾನವಾಂತಃಕರಣದ ಸ್ರೋತ ಅವರ ಕತೆಗಳನ್ನು ಅನನ್ಯವಾಗಿಸಿದೆ. ಎರ್ಪಕಟ್ಟೆ ಕತೆಗಳು ಕಾಸರಗೋಡಿನ ಕಥಾಸಾಹಿತ್ಯಕ್ಕೆ ಮೌಲಿಕ ಕೊಡುಗೆ ಎಂದು ಉಪನ್ಯಾಸಕ, ಕವಿ ಬಾಲಕೃಷ್ಣ ಬೇರಿಕೆ ಅಭಿಪ್ರಾಯಪಟ್ಟರು.
ಅವರು ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕದ ನಿರಂತರ ಕಲಿಕಾ ಕೇಂದ್ರದಲ್ಲಿ ಆಯೋಜಿಸಿದ “ಏರ್ಪಕಟ್ಟೆ ಸಂಸ್ಮರಣೆ – ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ “ಎರ್ಪಕಟ್ಟೆ ಕಥೆಗಳು’ ಕೃತಿ ಸಮೀಕ್ಷೆ ನಡೆಸಿ ಮಾತನಾಡಿದರು.
ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮೃದು ಸ್ವಭಾವದ ಸ್ವಭಾವದ ಎರ್ಪಕಟ್ಟೆಯವರ ಅರ್ಹತೆಗೆ ಸಿಗಬೇಕಾಗಿದ್ದ ಸ್ಥಾನಮಾನ ಗೌರವಗಳು ಸಿಗಲೇ ಇಲ್ಲ ಎಂದು ಅವರು ವಿಷಾದಿಸಿದರು. ಅವರ ಸಾಹಿತ್ಯದ ಕುರಿತ ಅಧ್ಯಯನ ಲೇಖನ, ಕೃತಿಗಳು ಹೊರಬರಬೇಕಾದ ಅಗತ್ಯವಿದೆ ಎಂದೂ ಅವರು ತಿಳಿಸಿದರು.
ಕವಿಗಳಾದ ದಯಾನಂದ ರೈ ಕಳುವಾಜೆ, ವನಜಾಕ್ಷಿ ಚೆಂಬ್ರಕಾನ, ಸಂದೀಪ್ ಬದಿಯಡ್ಕ, ಶರ್ಮಿಳಾ ಬಜಕೂಡ್ಲು, ಶ್ರೀನಿವಾಸ ಪರಿಕ್ಕಾನ, ಶ್ವೇತಾ ಕಜೆ, ತೇಜಸ್ವಿನಿ ಕೂಡ್ಲು, ನಿರ್ಮಲಾ ಶೇಷಪ್ಪ, ಸುಭಾಷ್ ಪೆರ್ಲ ಮೊದಲಾದವರು ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು.ಅಂಬೇಡ್ಕರ್ ವಿಚಾರ ವೇದಿಕೆಯ ಕಾರ್ಯದರ್ಶಿ ಸುಂದರ ಬಾರಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷ ರಾಮ ಪಟ್ಟಾಜೆ ವಂದಿಸಿದರು.