Advertisement

ಮನೆಗಳು ಜಲಾವೃತ; ಉಡುಪಿಯಲ್ಲಿ ಇಂದೂ ಶಾಲೆ ರಜೆ, ದ.ಕ. ಇಲ್ಲ

01:56 AM Jul 24, 2019 | sudhir |

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಭೀತಿ ಮೂಡಿಸಿದೆ. ನಗರದ ರಾಜ ಕಾಲುವೆ ಆಗಿರುವ ಕಲ್ಸಂಕ ತೋಡು ಸೋಮವಾರ ತಡರಾತ್ರಿಯೇ ಹಲವೆಡೆ ಉಕ್ಕಿ ಹರಿದ ಪರಿಣಾಮ ಆಸುಪಾಸಿನ ಅನೇಕ ಮನೆಗಳು ಜಲಾವೃತವಾದವು.

Advertisement

ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲ ಸರಕಾರಿ, ಖಾಸಗಿ, ಅನುದಾನಿತ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಜು. 24ರಂದು ರಜೆ ಘೋಷಿಸಲಾಗಿದೆ.

ಮೂಡನಿಡಂಬೂರು, ಕಲ್ಸಂಕ ಗುಂಡಿಬೈಲು, ಬೈಲಕೆರೆ, ಮೊದಲಾ ದೆಡೆ ನೆರೆ ಸ್ಥಿತಿ ಉಂಟಾಗಿದೆ. ಬನ್ನಂಜೆ- ಮೂಡನಿಡಂಬೂರು – ನಿಟ್ಟೂರು ರಸ್ತೆ ಜಲಾವೃತವಾಗಿದ್ದು, ಸಂಚಾರ ನಿಷೇಧಿಸಲಾಗಿದೆ.

ಮೂಡನಿಡಂಬೂರಿನ ನಾಲ್ಕು ಮನೆಯವರು ನೆರೆಯ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಇಲ್ಲಿ 8 ಮನೆಗಳ ಅಂಗಳಕ್ಕೆ, 4 ಮನೆಗಳ ಒಳಗೆ ನೀರು ನುಗ್ಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ತಹಶೀಲ್ದಾರ್‌ ತಿಳಿಸಿದ್ದಾರೆ.

ಗುಂಡಿಬೈಲಿನಲ್ಲಿ ಕಲ್ಸಂಕ ತೋಡಿನ ಸಮೀಪದ 15ರಷ್ಟು ಮನೆಗಳು ಭೀತಿ ಎದುರಿಸುತ್ತವೆ. ಬೈಲಕೆರೆಯಲ್ಲಿ 10ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ.

Advertisement

ವಿದ್ಯುತ್‌ ಕಂಬಗಳಿಗೆ ಹಾನಿ
ಗಾಳಿ-ಮಳೆಗೆ ಮಲ್ಪೆ ಕಲ್ಮಾಡಿಯಲ್ಲಿ 4, ಅಂಬಲಪಾಡಿಯಲ್ಲಿ 3 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಮಣಿಪಾಲದಲ್ಲಿ ಮರ, ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್‌ ವ್ಯತ್ಯಯ ಉಂಟಾಯಿತು. ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಹೆಬ್ರಿ, ಬೆಳ್ಮಣ್ಣು, ಕೊಲ್ಲೂರು, ಕೋಟೇಶ್ವರ, ಬೀಜಾಡಿ, ಪಡುಬಿದ್ರಿ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗಿದೆ.

ಮೂಡುಬಿದಿರೆ: ಮನೆಯ ಗೋಡೆ ಕುಸಿತ
ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ವಠಾರದಲ್ಲಿರುವ ಶಾಂತಮ್ಮ ಹರಿಶ್ಚಂದ್ರ ಆಚಾರ್ಯ ಅವರ ಮನೆಯ ನೈಋತ್ಯ ಭಾಗವು ಮಂಗಳವಾರ ಮಧ್ಯಾಹ್ನ ಕುಸಿದುಬಿದ್ದಿದೆ.

ಮನೆಯಲ್ಲಿದ್ದವರು ಹೊರಗೆ ಬಂದಿದ್ದ ಸಮಯ ನಡೆದ ಈ ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ. ಕಳೆದ ಮಳೆಗಾಲದ ವೇಳೆ ಈ ಮನೆಯ ಅಡುಗೆ ಕೋಣೆ ಕುಸಿದುಬಿದ್ದಿತ್ತು. ಆ ಬಳಿಕ ಪುಟ್ಟ ನಿವಾಸವೊಂದನ್ನು ನಿರ್ಮಿಸಲು ಶಾಂತಮ್ಮ ಅವರು ಮುಂದಾಗಿದ್ದು ಅದರ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಾಗಿದೆ.

ಗೋಡೆ ಬಿದ್ದಾಗ ಮಣ್ಣು, ಕಲ್ಲುಗಳು ನಿರ್ಮಾಣ ಹಂತದ ಮನೆ ಗೋಡೆಗೂ ಅಪ್ಪಳಿಸಿ ಕೊಂಚ ಹಾನಿಯಾಗಿದೆ. ಶಾಂತಮ್ಮ, ಅವರ ಪುತ್ರಿ (ವಿವಾಹಿತೆ)ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next