Advertisement
ಚುನಾವಣೆ ಮುಗಿದು 16 ದಿನಗಳಾಗಿವೆ. ಮತದಾರರಿಗೆ ಕೃತಜ್ಞತೆ ಹೇಳುವುದಕ್ಕೆ ರಾಜಕಾರಣಿಗಳು ಬಂದು ಹೋಗಿದ್ದೆಷ್ಟೋ ಅಷ್ಟೇ. ಆನಂತರ ಮದುವೆ ಹೆಸರಿನಲ್ಲಿ ಜಿಲ್ಲೆಗೆ ಹೀಗೆ ಬಂದು ಹಾಗೆ ಹೋದರು. ಸದಾಕಾಲ ಜನರೊಟ್ಟಿಗೆ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ, ಜನರ ಮಧ್ಯೆ ಇರುತ್ತೇವೆ ಎಂದವರೆಲ್ಲರೂ ಈಗ ಜನರನ್ನು ಬಿಟ್ಟು ರಾಜಧಾನಿ ಸೇರಿಕೊಂಡಿದ್ದಾರೆ.
Related Articles
Advertisement
ಚುನಾವಣೆ ಮುಗಿದ ಬಳಿಕ ಯಾರೂ ರೈತರು ಹಾಗೂ ಜನಸಾಮಾನ್ಯರ ಕಷ್ಟದ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲೆಗೆ ಭೇಟಿ ನೀಡಿ ಜನರ ಕಷ್ಟ-ಸುಖಗಳನ್ನು ವಿಚಾರಿಸಿದ್ದರೆ ಭವಿಷ್ಯದ ರಾಜಕೀಯ ನಾಯಕರಾಗಲು ತುದಿಗಾಲಲ್ಲಿ ನಿಂತಿರುವವರ ಬಗ್ಗೆ ಜನರಿಗೆ ಹೊಸ ಭರವಸೆ ಮೂಡುತ್ತಿತ್ತು. ರಾಜಕೀಯ ಬದಲಾವಣೆಯ ಗಾಳಿ ಬೀಸಿದ ಅನುಭವವಾಗುತ್ತಿತ್ತು. ಅಂತಹ ಪ್ರಯತ್ನಗಳನ್ನೇ ನಡೆಸದೆ ಸುಮಲತಾ ಹಾಗೂ ನಿಖೀಲ್ ಚುನಾವಣಾ ಸಮಯದಲ್ಲಿ ಹೇಳುವಂತೆ ಚುನಾವಣಾ ಗಿಮಿಕ್ ಮಾತುಗಳನ್ನಾಡಿದರೇ ಎಂಬ ಅನುಮಾನಗಳು ಜನರನ್ನು ಕಾಡಲಾರಂಭಿಸಿವೆ.
ನೀರಿಗೆ ಹಾಹಾಕಾರ: ಬೇಸಿಗೆ ಅವಧಿಯಲ್ಲಿ ನಾಗಮಂಗಲ ಹಾಗೂ ಕೆ.ಆರ್.ಪೇಟೆಯಲ್ಲಿ ಕುಡಿಯುವ ನೀರಿಗೆ ಎಲ್ಲಿಲ್ಲದ ಹಾಹಾಕಾರ ಸೃಷ್ಟಿಯಾಗಿದೆ. ಕೆರೆ-ಕಟ್ಟೆಗಳೆಲ್ಲವೂ ಬತ್ತಿಹೋಗಿವೆ. ಜನ-ಜಾನುವಾರುಗಳು ನೀರಿಲ್ಲದೆ ಪರಿತಪಿಸುತ್ತಿವೆ. ರೇಷ್ಮೆ ಬೆಳೆಗಾರರು ಉತ್ತಮ ಬೆಲೆ ಕಾಣದೆ ಕಂಗಾಲಾಗಿದ್ದಾರೆ. ರೈತರ ಆತ್ಮಹತ್ಯೆ ಕೊನೆಯಾಗಿಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಜನರನ್ನು ಬಾಧಿಸುತ್ತಿದ್ದರೂ ಅವರತ್ತ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲ.
ಚುನಾವಣಾ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅಂಬರೀಶ್ ಅಪಘಾತಕ್ಕೀಡಾದ ಅಭಿಮಾನಿಯೊಬ್ಬರ ಯೋಗಕ್ಷೇಮ ವಿಚಾರಿಸುವ ಹಾಗೂ ಬೆಂಬಲಿಗರ ಮದುವೆ ಸಮಾರಂಭಗಳಿಗೆ ಬಂದು ಹೋಗುವ ಸುಮಲತಾ ಅಂಬರೀಶ್ ಅವರು ಸಂಕಷ್ಟಕ್ಕೊಳಗಾಗಿರುವ ಜನರನ್ನು ಭೇಟಿ ಮಾಡಿ ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನೂ ಮಾಡಲಿಲ್ಲ.
ಸೌಜನ್ಯ ತೋರಲಿಲ್ಲ: ಯುವ ರಾಜಕೀಯ ನಾಯಕರಾಗುವ ಮಹತ್ವಾಕಾಂಕ್ಷೆ ಹೊಂದಿರುವ ನಿಖೀಲ್ ಜನರ ಬಗ್ಗೆ ಅವರಿಗಿರುವ ಪ್ರೀತಿ, ಅಭಿಮಾನ ತೋರ್ಪಡಿಸುವುದಕ್ಕೆ ಒಂದು ಅವಕಾಶವಿತ್ತು. ಅವರೂ ಗ್ರಾಮೀಣ ಜನರು ಅನುಭವಿಸುತ್ತಿರುವ ನೋವುಗಳಿಗೆ ಸಮಾಧಾನ ಹೇಳುವ ಕಿಂಚಿತ್ ಸೌಜನ್ಯವನ್ನೂ ತೋರ್ಪಡಿಸಲಿಲ್ಲ. ಮುಂದಿನ ಜನಪ್ರತಿನಿಧಿಗಳಾಗುವವರು ಹೀಗೆ ವರ್ತಿಸಿದರೆ ಅವರ ಬಗ್ಗೆ ಜನರಿಗೆ ನಂಬಿಕೆ, ವಿಶ್ವಾಸ ಮೂಡುವುದಾದರೂ ಹೇಗೆ ಎನ್ನುವುದು ಜನ ಸಾಮಾನ್ಯರು ಕೇಳುತ್ತಿರುವ ಪ್ರಶ್ನೆಯಾಗಿದೆ.
● ಮಂಡ್ಯ ಮಂಜುನಾಥ್