Advertisement

ಶ್ರಮದಾನದಿಂದ ಆಸ್ಪತ್ರೆ ಆವರಣ ಸುಂದರ

11:54 AM Aug 02, 2019 | Team Udayavani |

ಚನ್ನರಾಯಪಟ್ಟಣ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಶವಾಗಾರದ ಹತ್ತಿರ ಸುಳಿಯಲು ಎಂಥವರ ಮನಸ್ಸಿಗೂ ಕೊಂಚ ಭಯ ಉಂಟಾಗುತ್ತದೆ. ಆದರೆ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿನ ಶವಾಗಾರ ಸುತ್ತಲಿನ ಪರಿಸರ ಜನತೆಯ ಮನಸ್ಸಿಗೆ ನೆಮ್ಮದಿ ತಾಣವಾಗಿ ಮಾರ್ಪಟ್ಟಿದೆ.

Advertisement

ಶತಮಾನದಿಂದ ಶವಾಗಾರ ಕಸದ ಕೊಂಪೆಯಾಗಿತ್ತು, ಈ ಬಗ್ಗೆ ಗಮನ ಹರಿಬೇಕಾಗಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಕೆಲ ತಿಂಗಳ ಹಿಂದೆ ಆಸ್ಪತ್ರೆ ಆಡಳಿತದಲ್ಲಿದ್ದ ವೈದ್ಯಾಧಿಕಾರಿಗಳು ಬದಲಾವಣೆಯಾದರು. ನೂತನ ಅಧಿಕಾರಿಗಳು ತಮ್ಮ ಕೆಲ ಸ್ನೇಹಿತರು ಹಾಗೂ ಆಸ್ಪತ್ರೆ ಸಿಬ್ಬಂದಿ ಸಹಕಾರದೊಂದಿಗೆ ವಾರದಲ್ಲಿ ಆಸ್ಪತ್ರೆ ಸ್ವಚ್ಛತೆ ಮಾಡುವುದನ್ನು ರೂಡಿಸಿಕೊಂಡಿದ್ದಾರೆ.

ಇಚ್ಚಾಶಕ್ತಿಯಿಂದ ಪರಿಸರ ಸೌಂದರ್ಯ: ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಯಾಗಿ ಡಾ.ಮಹೇಶ್‌ ನೇಮಕ ಗೊಂಡ ದಿವಸದಿಂದ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯಬೇಕು ಎಂದು ಹಲವು ಕಾರ್ಯಕ್ರಮ ಆಯೋಜನೆ, ಶುಚಿತ್ವ, ವಿವಿಧ ಯಂತ್ರೋಪಕರಣ ಕೋಡಿಸುವಂತೆ ಶಾಸಕ ಸಿ.ಎನ್‌.ಬಾಲಕೃಷ್ಣರ ಹಿಂದೆ ಬಿದ್ದು ಸಾಕಷ್ಟು ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ಹಲವು ಸಂಘ ಸಂಸ್ಥೆ ಪದಾಧಿಕಾರಿಗಳ ಜೊತೆ ಸೇರಿಸಿಕೊಂಡು ಶ್ರಮದಾನ ಮಾಡುವ ಮೂಲಕ ಆಸ್ಪತ್ರೆ ಆವರಣದಲ್ಲಿ ವಾತಾವರಣ ಬದಲಾವಣೆ ಮಾಡಿದ್ದಾರೆ.

ನುಡಿಮುತ್ತುಗಳು: ನಿರಂತರವಾಗಿ ಸ್ಪಚ್ಚತೆಗೆ ಆದ್ಯತೆ ನೀಡುವ ವೇಳೆ ಶವಾಗಾರಕ್ಕೆ ಕಾಯಕಲ್ಪ ನೀಡು ಆಲೋಚನೆ ಮಾಡಿದ್ದರಿಂದ ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಮಿನಿ ಉದ್ಯಾವನವನ ನಿರ್ಮಾಣ ಮಾಡಿದ್ದರು. ಅಲ್ಲಿ ಸಣ್ಣದಾದ ಫೌಂಟೆನ್‌ ನಿರ್ಮಾಣ ಕೂಡ ಮಾಡಲಾಗಿದೆ. ಇದಲ್ಲದೆ ಶವಾಗಾರದ ಸುತ್ತಲಿನ ಕಾಂಪೌಂಡ್‌ ಗೋಡೆಗೆ ಸುಣ್ಣ ಬಣ್ಣ ಲೇಪನಮಾಡಿ ವಿವಿಧ ಕಲಾಕೃತಿ ಬಿಡಿಸಿರುವುದಲ್ಲದೆ, ನುಡಿಮುತ್ತುಗಳನ್ನು ಬರೆಯಲಾಗಿದ್ದು ನೋಡುಗರನ್ನು ಸೆಳೆಯುತ್ತಿದೆ.

10ಹನಿ ನೀರಾವರಿ: ಅನೇಕ ಬಗೆಯ ಹೂವಿನ ಹಾಗೂ ಆಕರ್ಷಣೀಯ ಅಲಂಕಾರಿಕ ಗಿಡವ‌ನ್ನು ನೆಟ್ಟು ಅವುಗಳ ನಿರ್ವಹಣೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಅಲ್ಲದೇ ಒಂದು ಬದಿಯಲ್ಲಿ ಈಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದು, ಭಕ್ತಿಯ ವಾತಾವರಣ ನಿರ್ಮಾಣವಾಗಿದೆ. ಶವಾಗಾರದ ಅಭಿವೃದ್ಧಿ ಕಾರ್ಯಕ್ಕೆ ಆಸ್ಪತ್ರೆ ಇರುವ ಎಂಟನೇ ವಾರ್ಡಿನ ಪುರಸಭಾ ಸದಸ್ಯ ಸಿ.ಎನ್‌.ಶಶಿಧರ್‌ ವೈಯಕ್ತಿಕವಾಗಿ ಹೆಚ್ಚು ಆಸಕ್ತಿ ತೋರಿದ್ದರಿಂದ ಅಭಿವೃದ್ಧಿ ಕಾಣುವಂತಾಗಿದೆ.

Advertisement

ಕೆಲವರಿಗೆ ಕಡಿವಾಣ ಅಗತ್ಯ: ಶವಾಗಾರದ ಕಾಂಪೌಂಡ್‌ನ‌ ಹೊರ ವ್ಯಾಪ್ತಿಯಲ್ಲಿರುವ ಮನೆಯವರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಂದು ಆಸ್ಪತ್ರೆ ಒಳಭಾಗಕ್ಕೆ ಸುರಿಯುತ್ತಿದ್ದರು, ಇದನ್ನು ತಪ್ಪಿಸಲು ಪುರಸಭೆ ಅಧಿಕಾರಿಗಳು ಎರಡ್ಮೂರು ವಾರಗಳು ಶ್ರಮಿಸಿದ್ದು, ಪ್ರತಿ ಮನೆಗೆ ತೆರಳಿ ತಿಳಿವಳಿಕೆ ನೀಡಿದ್ದರಿಂದ ಆಸ್ಪತ್ರೆ ಒಳಕ್ಕೆ ಕಸ ಹಾಕುವುದು ತಪ್ಪಿದೆ. ದಾರಿಯಲ್ಲಿ ಸಂಚಾರ ಮಾಡುವವರು ಅನುಪಯುಕ್ತ ವಸ್ತುಗಳನ್ನು ಹಾಕುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕಿದೆ.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್‌, ಸಮಾಜ ಸೇವಕ ಕುಮಾರಿ, ಪುರಸಭಾ ಮುಖ್ಯಾಧಿಕಾರಿ ಎಂ.ಕುಮಾರ್‌, ಸದಸ್ಯ ಸಿ.ಎನ್‌.ಶಶಿಧರ್‌ ಶ್ರಮವಹಿಸಿದ್ದರಿಂದ ಆಸ್ಪತ್ರೆ ಆವರಣ ಸ್ವಚ್ಚವಾಗಿದೆ. ಇನ್ನು ಉದ್ಯಾನವನ ನಿರ್ಮಾಣಕ್ಕೆ ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕತ ಸಿ.ಎನ್‌.ಅಶೋಕ್‌ ವಿವಿಧ ಬಗೆಯ ಗಿಡಗಳನ್ನು ಉಚಿತವಾಗಿ ನೀಡುವ ಮೂಲಕ ಶವಾಗಾರದ ಸುತ್ತ ಸುಂದರ ವಾತಾವರಣ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

ಉತ್ತಮ ಪರಿಸರ ಮುಖ್ಯ:

ಸೇವೆ ಸಲ್ಲಿಸುವ ಸರ್ಕಾರಿ ಕಚೇರಿ ಸುತ್ತ ಉತ್ತಮ ಪರಿಸರ ನಿರ್ಮಾಣ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ, ಸರ್ಕಾರಿ ಆಸ್ಪತ್ರೆಯಲ್ಲಿ ಆಶುಚಿತ್ವ ಇರುತ್ತದೆ ವೈದ್ಯರು ಸರಿಯಾಗಿ ಚಿಕಿತ್ಸೆ ನೊಡುವುದಿಲ್ಲ ಎಂಬ ದೂರುಗಳು ಸರ್ವೇಸಾಮಾನ್ಯ ಇದನ್ನು ಹೋಗಲಾಡಿಸಿ ಪ್ರತಿ ರೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡುವುದು ನನ್ನ ಉದ್ದೇಶವಾಗಿದೆ ಹಾಗಾಗಿ ಆಸ್ಪತ್ರೆ ಜನರನ್ನು ಆಕರ್ಷಣೆ ಮಾಡುವ ಉದ್ದೇಶದಿಂದ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್‌ ತಿಳಿಸಿದರು.
● ಶಾಮಸುಂದರ್‌ ಕೆ ಅಣ್ಣೇನಹಳ್ಳಿ
Advertisement

Udayavani is now on Telegram. Click here to join our channel and stay updated with the latest news.

Next