Advertisement

ಬಿಳಿ ಬಂಗಾರ ನಂಬಿದ ರೈತರ ನಿರೀಕ್ಷೆ ಹುಸಿ; ಸಣ್ಣ ರೈತರು ಹೈರಾಣು

10:23 AM Nov 25, 2022 | Team Udayavani |

ರಾಯಚೂರು: ಕೃಷಿ ಉತ್ಪನ್ನಗಳ ಬೆಲೆ ಕೂಡ ಷೇರು ಮಾರುಕಟ್ಟೆಗಿಂತ ಚಂಚಲವಾಗಿದೆ. ಕಳೆದ ಬಾರಿ ಬಂಪರ್‌ ಬೆಲೆಗೆ ಮಾರಾಟವಾಗಿದ್ದ ಹತ್ತಿಗೆ ಈ ಬಾರಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಮೊದಲ ಹಂತದ ಹತ್ತಿ ಮಾರುಕಟ್ಟೆ ಸೇರಿದ್ದು, ಈವರೆಗೂ 10 ಸಾವಿರ ರೂ. ಗಡಿ ದಾಟದಿರುವುದು ರೈತರಿಗೆ ನಿರಾಸೆ ಮೂಡಿಸಿದೆ.

Advertisement

ಒಂದೆರಡು ವರ್ಷಗಳ ಹಿಂದೆ ಈರುಳ್ಳಿ ವಿಚಾರದಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿ ಈ ಬಾರಿ ಹತ್ತಿಗೆ ಬಂದೊದಗಿದೆ. ಅತಿವೃಷ್ಟಿಯಿಂದ ಸರಿಯಾದ ಇಳುವರಿ ಬಾರದಿದ್ದ ಕಾರಣಕ್ಕೆ ಈರುಳ್ಳಿ ಕ್ವಿಂಟಲ್‌ಗೆ 17 ಸಾವಿರ ರೂ.ಗೆ ಮಾರಾಟವಾಗಿತ್ತು. ಬರುವ ವರ್ಷ ಇದೇ ಉತ್ಸಾಹದಲ್ಲಿ ಈರುಳ್ಳಿ ಬೆಳೆದ ರೈತ ಬೆಲೆ ಸಿಗದೆ ನಷ್ಟ ಅನುಭವಿಸಿದ್ದ. ಈ ಬಾರಿ ಹತ್ತಿಗೂ ಅಂಥದ್ದೇ ಸನ್ನಿವೇಶ ಇದೆ. ಕಳೆದ ಬಾರಿ 14-15 ಸಾವಿರ ರೂ.ಗೆ ಕ್ವಿಂಟಲ್‌ ಮಾರಾಟವಾಗಿದ್ದ ಹತ್ತಿ ಈ ಬಾರಿ 8-9 ಸಾವಿರ ರೂ. ಆಸುಪಾಸು ಮಾರಾಟವಾಗುತ್ತಿದೆ. ಗುರುವಾರ ಮಾರುಕಟ್ಟೆಯಲ್ಲಿ ಕನಿಷ್ಟ ದರ 8500 ನಿಗದಿಯಾಗಿದ್ದರೆ, ಗರಿಷ್ಠ ದರ 9400 ರೂ. ಇತ್ತು. ಮಾದರಿ ಬೆಲೆ 9 ಸಾವಿರ ಇತ್ತು.

ಈ ಬಾರಿ ಹತ್ತಿ ಬೆಳೆಯುವ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ರೈತರು ಖರ್ಚು ಕೂಡ ಹೆಚ್ಚು ಮಾಡಿದ್ದರು. ಈ ಬಾರಿಯೂ ಕಳೆದ ಬಾರಿಯಂತೆ ಉತ್ತಮ ಬೆಲೆ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ಈಗಿರುವ ಮಾರುಕಟ್ಟೆ ಪರಿಸ್ಥಿತಿ ನೋಡಿದರೆ ದರದಲ್ಲಿ ಭಾರೀ ವ್ಯತ್ಯಾಸ ಕಂಡು ಬರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ವರ್ತಕರು.

ಇಳುವರಿಯೂ ಕುಸಿತ: ಈ ಬಾರಿ ಅತಿವೃಷ್ಟಿಗೆ ಸಿಲುಕಿ ಹತ್ತಿ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಎಕರೆಗೆ 8-10 ಕ್ವಿಂಟಲ್‌ ಇಳುವರಿ ಬರ ಬೇಕಿದ್ದು, ಈಗ 4-5 ಬಂದರೆ ಕಷ್ಟ ಎನ್ನುವಂ ತಾಗಿದೆ. ಆದರೆ, ಬಿತ್ತನೆ ಬೀಜದಿಂದ ಹಿಡಿದು, ಗೊಬ್ಬರ, ಕ್ರಿಮಿನಾಶಕ, ಕಳೆ ಕೀಳುವುದು, ಹತ್ತಿ ಬಿಡಿಸುವವರೆಗೆ ಪ್ರತಿ ಹೆಜ್ಜೆ ರೈತ ಸಾವಿರಾರು ಖರ್ಚು ಮಾಡಿಕೊಂಡಿದ್ದಾನೆ. ಎಕರೆಗೆ ಏನಿಲ್ಲವೆಂ ದರು 30-40 ಸಾವಿರ ರೂ. ಖರ್ಚು ಮಾಡಲಾಗಿದೆ.

ಖರೀದಿ ಕೇಂದ್ರ ಆರಂಭಿಸಲಿ: ಕಳೆದ ಬಾರಿ ಜಿಲ್ಲೆಯಲ್ಲಿ 1.40 ಲಕ್ಷ ಹೆಕ್ಟೇರ್‌ ಹತ್ತಿ ಬಿತ್ತನೆ ಮಾಡಿದ್ದ ರೈತರು, ಈ ಬಾರಿ 2 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಬಿತ್ತನೆ ಮಾಡಿದ್ದಾರೆ. ಆದರೆ, ಸತತ ಮಳೆಯಿಂದ ಹತ್ತಿ ಕಾಂಡ ಕೊಳೆತು ಇಳುವರಿ ಬರಲಿಲ್ಲ. ಆದರೂ ದರ ಹೋಲಿಕೆ ಮಾಡಿದರೆ ಕಳೆದ ಬಾರಿಗಿಂತ ಅತಿ ಕಡಿಮೆ ದರ ಸಿಗುತ್ತಿದೆ.ಈಗ ಅರ್ಧದಷ್ಟು ರೈತರು ಹತ್ತಿ ಮಾರಾಟ ಮಾಡಿದ್ದು, ಇನ್ನೂ ಕೆಲವೆಡೆ ಈಗ ಬಿಡಿಸಲು ಆರಂಭಿಸಲಾಗಿದೆ. ಹೀಗಾಗಿ ಸರ್ಕಾರವೇ ಖರೀದಿ
ಕೇಂದ್ರಗಳನ್ನು ಆರಂಭಿಸಿ 12-15 ಸಾವಿರ ರೂ. ದರ ನಿಗದಿ ಮಾಡಲಿ ಎಂಬುದು ರೈತರ ಒತ್ತಾಯವಾಗಿದೆ.

Advertisement

ಸಣ್ಣ ರೈತರು ಹೈರಾಣು
ಹೇಳಿ ಕೇಳಿ ವಾಣಿಜ್ಯ ಬೆಳೆಯಾಗಿರುವ ಹತ್ತಿ ಬೆಳೆದ ರೈತರ ಪಾಡು ಹೇಳತೀರದಾಗಿದೆ. ಹೆಜ್ಜೆ ಹೆಜ್ಜೆಗೂ ಖರ್ಚು ಮಾಡಬೇಕಿರುವ ಕಾರಣ ಸಣ್ಣ ರೈತರು ಹೈರಾಣವಾಗಿದ್ದಾರೆ. ಕನಿಷ್ಟ ನಾಲ್ಕೈದು ಬಾರಿ ಕ್ರಿಮಿನಾಶಕ ಸಿಂಪರಣೆ ಮಾಡಿದ್ದಾರೆ. ಈ ಬಾರಿ ಸತತ ಮಳೆಯಿಂದಾಗಿ ಸಿಂಪರಣೆ ಮಾಡಿದ್ದ ಕ್ರಿಮಿನಾಶಕವೆಲ್ಲ ತೊಳೆದು ಹೋಗಿದ್ದು, ಮತ್ತೂಮ್ಮೆ ಹೆಚ್ಚುವರಿಯಾಗಿ ಮಾಡಬೇಕಾಯಿತು. ಇನ್ನೂ ಕೂಲಿಕಾರ್ಮಿಕರು ಸಿಗದ ಕಾರಣಕ್ಕೆ ಆಂಧ್ರ, ತೆಲಂಗಾಣದಿಂದ ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದಾರೆ. ಅವರಿಗೆ ಇರಲು ತಾತ್ಕಾಲಿಕ ಶೆಡ್‌ಗಳನ್ನು ಹಾಕಿ ಕೊಟ್ಟಿದ್ದಾರೆ. ಊಟ, ವಸತಿ ಜತೆಗೆ ಚಿಕಿತ್ಸೆ ಕೂಡ ನೀಡಬೇಕಿದೆ.

ಸಾಮಾನ್ಯವಾಗಿ ದರ ಹೆಚ್ಚಾಗಬೇಕು. ಆದರೆ, ಈವರೆಗೂ 10 ಸಾವಿರ ರೂ. ಗಡಿ ದಾಟಿಲ್ಲ. ಮಧ್ಯವರ್ತಿಗಳು ಏನೋ ಗೋಲ್‌ಮಾಲ್‌ ಮಾಡುತ್ತಿರುವ ಶಂಕೆ ಇದೆ. ಈಗಾಗಲೇ ಬಹುತೇಕ ರೈತರು ಮೊದಲ ಹಂತದ ಹತ್ತಿ ಮಾರಾಟ ಮಾಡಿದ್ದಾರೆ. ಸರ್ಕಾರ ಕೂಡಲೇ ಹತ್ತಿ ಖರೀದಿಗೆ ಕೇಂದ್ರಗಳನ್ನು ಆರಂಭಿಸಿ ಕ್ವಿಂಟಲ್‌ಗೆ 12-15 ರೂ. ದರ ನಿಗದಿ ಮಾಡಿ ಖರೀದಿಸಲು ಮುಂದಾದರೆ ಮುಕ್ತ ಮಾರುಕಟ್ಟೆಯಲ್ಲಿಯೂ ದರ ಹೆಚ್ಚಾಗುವ ಸಾಧ್ಯತೆಗಳಿವೆ.
ಲಕ್ಷ್ಮಣಗೌಡ ಕಡಗಂದೊಡ್ಡಿ,
ರೈತ ಸಂಘದ ಮುಖಂಡ

*ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next