Advertisement

ಯೋಧರ ಜೀವನ ತಿಳಿದು ಗೌರವ-ಹೆಮ್ಮೆ ಇನ್ನೂ ಹೆಚ್ಚಿದೆ

03:54 PM Oct 22, 2018 | Team Udayavani |

ಹರಪನಹಳ್ಳಿ: “ಸಿಯಾಚೀನ್‌ ಸೈನಿಕ್‌ ದಳದ ಕ್ಯಾಂಪ್‌ಗೆ ತೆರಳುವಾಗ ಚೀನಾ ಗಡಿ ಭಾಗಕ್ಕೆ ಹೊಂದಿರುವ ಲಢಾಕ್‌ ಪ್ರದೇಶದಲ್ಲಿ 15 ದಿನಗಳ ಕಾಲ ಫೋನ್‌ ಸಂಪರ್ಕವಿರಲಿಲ್ಲ,

Advertisement

ಮೈನಸ್‌ 10-12 ಡಿಗ್ರಿ ವಾತಾವರಣ ಇರುತ್ತಿತ್ತು. ಆಮ್ಲಜನಕ ಕೊರತೆಯಿಂದ ದಣಿವು ಹೆಚ್ಚಾಗುತ್ತಿತ್ತು. ಅಲ್ಲಿ 15 ದಿನಗಳ ಕಾಲ ಕಳೆದು ವಾಪಸ್‌ ಬಂದಿದ್ದು ಮಾತ್ರ ನನ್ನ ಜೀವನದಲ್ಲಿ ಮರೆಯಲಾಗದ ಅನುಭವ..” ಇದು ದೇಶದ ಗಡಿಯಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಿರುವ ಯೋಧರನ್ನು ಖುದ್ದಾಗಿ ಕಂಡು ಅವರಿಗೆ ಸಲಾಂ ಹೇಳಿ ಬಂದ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಪಟ್ಟಣದ ಎಂ.ಟೆಕ್‌ ಪದವೀಧರ ಕೆ.ರಾಹುಲ್‌ ಮಾತು.

ಸಿಯಾಚಿನ್‌ಗೆ ತೆರಳಲು ಸರಿಯಾದ ರಸ್ತೆಗಳಿಲ್ಲ. ದುರ್ಗಮ ಹಾದಿಯಲ್ಲೇ ಸಾಗಬೇಕು. ಊಟದ ಸಮಸ್ಯೆ ಹೆಚ್ಚಾಗಿ ಕಾಡಿತು. ಅಲ್ಲೊಂದು, ಇಲ್ಲೊಂದು ಟೆಂಟ್‌ ಗಳಲ್ಲಿ ಮ್ಯಾಗಿ ಮತ್ತು ಬಿಸ್ಕೆಟ್‌ ಮಾತ್ರ ಸಿಗುತ್ತಿತ್ತು. ಬೈಕ್‌ನಲ್ಲಿ ಏಕಾಂಕಿಯಾಗಿ ಮೂರು ತಿಂಗಳ ಕಾಲ ಒಟ್ಟು 14 ಸಾವಿರ ಕಿ.ಮೀ ಪ್ರಯಣ ಮಾಡಿದ್ದೇನೆ. ರಾಜಸ್ತಾನ್‌, ವಾಘಾ, ಕಾರ್ಗಿಲ್‌, ಸಿಯಾಚೀನ್‌ ಸೈನಿಕರ ಕ್ಯಾಂಪ್‌ಗ್ಳಿಗೆ ತೆರಳಿ ಅವರ ದೇಶ ಸೇವೆಗೆ ಧನ್ಯವಾದ ಹೇಳಿ ಸಿಹಿ ವಿತರಿಸಿದ್ದೇನೆ. ನಿಮ್ಮ ಜೊತೆ ನಾವಿದ್ದೇವೆ ಎಂದು ನಾನು ಹೇಳಿದಾಗ, ನಮಗೋಸ್ಕರ ದೂರದಿಂದ ಬಂದಿರುವುದು ಖುಷಿ ಎನ್ನಿಸುತ್ತದೆ ಎಂದು ಸೈನಿಕರು ಸಂತೋಷಪಟ್ಟರು. ನಮ್ಮ ತಮ್ಮನನ್ನು ನೋಡಿದಂತೆ ಆಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿ, ಅಲ್ಲಿನ ಪರಿಸ್ಥಿಯ ಬಗ್ಗೆ ವಿವರವಾಗಿ ಹೇಳಿದರು. ಯೋಧರ ಮಾತುಗಳನ್ನು ಕೇಳಿ ನಾನು ಹೋಗಿದ್ದು ಸಾರ್ಥಕವಾಯ್ತು ಅಂತ ಅನಿಸಿತು.

ರಾಜಸ್ತಾನ ಬಾರ್ಡ್‌ರ್‌ನಲ್ಲಿ 40ರಿಂದ 45 ಡಿಗ್ರಿ ಬಿಸಿಲು ಇದ್ದರೆ ಜಮ್ಮ-ಕಾಶ್ಮೀರ ಮತ್ತು ಸಿಯಾಚೀನ್‌ನಲ್ಲಿ ತುಂಬಾ ಚಳಿ ಇರುತ್ತದೆ. ಸಿಯಾಚೀನ್‌ಲ್ಲಿ ಒಟ್ಟು 3 ಕ್ಯಾಂಪ್‌ಗ್ಳಿದ್ದು, ನಾನು 3ನೇ ಹಂತದ ಕ್ಯಾಂಪ್‌ಗೆ ಹೋಗಿದ್ದೆ. ಒಟ್ಟು 50-60 ಸೈನಿಕರನ್ನು ಭೇಟಿ ಮಾಡಿದ್ದೇನೆ. ಸ್ವಾತಂತ್ರೊತ್ಸವದಂದು ವಾಘಾ ಬಾರ್ಡ್‌ ರ್‌ನಲ್ಲಿದ್ದು, ಅಲ್ಲಿನ ಧ್ವಜಾರೋಣದಲ್ಲಿ ಭಾಗವಹಿಸಿದ್ದೆ ಎಂದು ಹೇಳುತ್ತಾ ರೋಮಾಂಚನಗೊಂಡರು.

ಪ್ರತಿನಿತ್ಯ ಕನಿಷ್ಠ 200ರಿಂದ 550 ಕಿ.ಮೀ ಪ್ರಯಾಣ ಮಾಡುತ್ತಿದ್ದೆ. ಸುಜುಕಿ ಬೈಕ್‌ ಕಂಪನಿಯವರು ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ ನೋಡಿ 4 ಕಡೆಗಳಲ್ಲಿ ಉಚಿತವಾಗಿ ಸರ್ವಿಸ್‌ ಮಾಡಿಸಿಕೊಟ್ಟರು. ಕೆಲವು ಕಡೆ ಪೆಟ್ರೋಲ್‌ ಸಿಗುವುದು ಅಪರೂಪವಾದ್ದರಿಂದ ಬ್ಲಾಕ್‌ನಲ್ಲಿ 200 ರೂ. ಕೊಟ್ಟು 1 ಲೀಟರ್‌ ಖರೀದಿಸಿದ್ದೇನೆ. ಎಲ್ಲಿಯೂ ಆರೋಗ್ಯ ಹದಗೆಟ್ಟಿಲ್ಲ, ಹೋಟೆಲ್‌ಗ‌ಳಲ್ಲಿ ವಾಸ್ತವ್ಯ ಮಾಡಿದ್ದೇನೆ. ಲಢಾಕ್‌ನಲ್ಲಿ ಮಾತ್ರ ಟೆಂಟ್‌ನಲ್ಲಿ ವಾಸ ಮಾಡಬೇಕಾಯಿತು ಎಂದು ತಮ್ಮ ಪ್ರವಾಸದ ಕುರಿತು ಮಾಹಿತಿ ಹಂಚಿಕೊಂಡರು.

Advertisement

ಕಳೆದ ಜೂ. 16ರಂದು ತೆರಳಿದ್ದ ಕೆ.ರಾಹುಲ್‌ ಅ. 15ರಂದು ಬೆಳಿಗ್ಗೆ 11 ಗಂಟೆಗೆ ಹರಪನಹಳ್ಳಿ ಪಟ್ಟಣಕ್ಕೆ ಆಗಮಿಸಿದಾಗ ತಂದೆ, ನಿವೃತ್ತ ಶಿಕ್ಷಕ ಕೃಷ್ಣಪ್ಪ ಮತ್ತು ತಾಯಿ ಪ್ರಭಾವತಿ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.

ಕುಟುಂಬ ಮತ್ತು ಪ್ರಾಣದ ಹಂಗು ತೊರೆದು ದೇಶವನ್ನು ಕಾಯುವ ಮೂಲಕ ಸೈನಿಕರು ನಮ್ಮನ್ನು ಸುಖವಾಗಿರಿಸಿದ್ದಾರೆ. ಅಂತಹ ಸೈನಿಕರನ್ನು ಮಗ ಭೇಟಿ ಮಾಡಿ ವಾಪಸ್‌ ಬಂದಿರುವುದು ಖುಷಿಯಾಗಿದೆ ಎಂದು ರಾಹುಲ್‌ ತಂದೆ ಕೃಷ್ಣಪ್ಪ ತಿಳಿಸಿದರು. 

ಎಲ್ಲಿಂದ ಎಲ್ಲಿಗೆ ಪಯಣ ಹರಪನಹಳ್ಳಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಪುಣೆ, ಮುಂಬೈ, ಅಹಮದಾಬಾದ್‌, ಉದಯಪುರ್‌, ಜೋಧಪುರ್‌, ಜೈಸಲ್‌ಮೇರ್‌, ಜೈಪುರ್‌, ದೆಹಲಿ, ಅಮೃತಸರ್‌, ವಾಘಾ, ಜಮ್ಮು, ಶ್ರೀನಗರ, ಕಾರ್ಗಿಲ್‌, ಲಢಾಕ್‌ ನಂತರ ಸಿಯಾಚಿನ್‌ ಸೈನಿಕ್‌ ಕ್ಯಾಂಪ್‌ಗೆ ಭೇಟಿ.

ಯೋಧರನ್ನು ಖುದ್ದಾಗಿ ಕಂಡು ಅವರ ಜೊತೆ ಮಾತನಾಡಿದ್ದು, ನನ್ನಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ. ಸೈನಿಕ್‌ ಕ್ಯಾಂಪ್‌ಗ್ಳಿಗೆ ತೆರಳಿದಾಗ ಯೋಧರು ಪ್ರೀತಿ ತೋರಿಸಿದರು. ಅಲ್ಲಿನ ಭೀಕರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇದರಿಂದ ಸೈನಿಕರ ಕರ್ತವ್ಯದ ಬಗ್ಗೆ ಹೆಮ್ಮೆ ಇನ್ನೂ ಹೆಚ್ಚಾಯಿತು.
 ಕೆ.ರಾಹುಲ್‌

ಮಗ ಒಬ್ಬನೇ ಹೊರಟಿದ್ದರಿಂದ ಎಲ್ಲಿ ಏನಾಗುತ್ತದೋ ಎಂಬ ಭಯ ಕಾಡುತ್ತಿತ್ತು. ಲಢಾಕ್‌ ಪ್ರದೇಶದಲ್ಲಿ 15 ದಿನಗಳ ಕಾಲ ಮಗ ಸಂಪರ್ಕಕ್ಕೆ ಸಿಗಲಿಲ್ಲ, ಆಗ ಆತಂಕಗೊಂಡಿದ್ದೇವೆ. ಏನೂ ತೊಂದರೆ ಆಗದಂತೆ ಮರಳಿ ಬಂದಿರುವುದು ಸಂತೋಷ ತಂದಿದೆ.
 ಪ್ರಭಾವತಿ ಕೃಷ್ಣಪ್ಪ, ರಾಹುಲ್‌ ತಾಯಿ

„ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next