ಅಮರಾವತಿ: ಸಮಾಜದ ಸರ್ವ ವರ್ಗಗಳ ಪ್ರಾತಿನಿಧ್ಯವಿರುವ ಸಂಪುಟ ಎಂದು ತಮ್ಮ ಸಚಿವ ಸಂಪುಟವನ್ನು ಬಣ್ಣಿಸಿರುವ ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ ರೆಡ್ಡಿ, ಅದಕ್ಕೆ ಪೂರಕವಾಗಿ ತಮ್ಮ ಮಂತ್ರಿಮಂಡಲದಲ್ಲಿ 25 ನೂತನ ಸಚಿವರಿಗೆ ಸ್ಥಾನ ಕಲ್ಪಿಸಿದ್ದಾರೆ.
ಜಗನ್ ಸೇರಿ ಇವರ ಸಂಪುಟದಲ್ಲಿ ಸ್ಥಾನ ಪಡೆದವರ ಸಂಖ್ಯೆ 26ಕ್ಕೇರಿದೆ. ಮೊದಲ ಬಾರಿಗೆ ಐವರು ಡಿಸಿ ಎಂಗಳನ್ನು ನೇಮಕ ಮಾಡಿ ಅಚ್ಚರಿ ಮೂಡಿಸಿದ್ದ ಜಗನ್, ಶನಿವಾರ ಮತ್ತೂಂದು ಸರ್‌ಪ್ರೈಸ್ ನೀಡಿದ್ದಾರೆ. ಪ್ರತಿಪಾಡು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮೇಕಥೋಟಿ ಸುಚರಿತ ಎಂಬವರನ್ನು ಗೃಹ ಸಚಿವೆಯಾಗಿ ನೇಮಕ ಮಾಡಿದ್ದಾರೆ.
ಪಾಮುಲ ಪುಷ್ಪ ಶ್ರೀವಾಣಿ (ಎಸ್‌ಟಿ), ಪಿಲ್ಲಿ ಸುಭಾಷ್‌ಚಂದ್ರ ಬೋಸ್ (ಬಿಸಿ), ಅಲ್ಲಾ ಕಾಲಿ ಕೃಷ್ಣಾ ಶ್ರೀನಿವಾಸ್ (ಕಾಪು), ಕೆ. ನಾರಾಯಣ ಸ್ವಾಮಿ (ಎಸ್‌ಸಿ), ಅಮ್ಜಾತ್ ಬಾಷಾ (ಮುಸ್ಲಿಂ) ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.
ಸಹಾಯಧನ ಹೆಚ್ಚಳ: ಶನಿವಾರ ಇಲ್ಲಿನ ಆಡಳಿತ ಶಕ್ತಿ ಕೇಂದ್ರದ ಸಿಎಂ ಕಚೇರಿಯಲ್ಲಿ ಪದಗ್ರಹಣ ಮಾಡಿದ ಸಿಎಂ ಜಗನ್ ರೆಡ್ಡಿ, ತಮ್ಮ ಮೊದಲ ನಿರ್ಧಾರದಲ್ಲೇ ಆಶಾ ಕಾರ್ಯ ಕರ್ತೆಯರ ಮಾಸಾಶನವನ್ನು 3,000 ರೂ.ಗಳಿಂದ 10,000 ರೂ.ಗಳವರೆಗೆ ಹೆಚ್ಚಿಸುವ ಪ್ರಸ್ತಾವನೆಗೆ ಸಹಿ ಹಾಕಿದರು.
ಸರಕಾರಿ ನೌಕರರಿಗೆ ಸಿಹಿ?:
ಜೂ. 10ರಂದು ನಡೆಯಲಿರುವ ತಮ್ಮ ಸಂಪುಟದ ಮೊದಲ ಸಭೆಯಲ್ಲಿ, ಸರಕಾರಿ ನೌಕರರಿಗೆ ಶೇ. 27ರಷ್ಟು ಮಧ್ಯಂತರ ಭತ್ಯೆ ನೀಡುವ ಹಾಗೂ ಕಾಂಟ್ರಿ ಬ್ಯೂಟರಿ ಪಿಂಚಣಿ ಯೋಜನೆ ರದ್ದುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.