ಕಾಪು: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ದೇಶಕ್ಕೇ ಮಾದರಿಯಾಗಿವೆ. ರಾಜ್ಯದ ಜನತೆಗೆ ಹಲವು ಭಾಗ್ಯಗಳ ಸುರಿಮಳೆಯನೇ° ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀಡಿದ್ದು, ಇವೆಲ್ಲವನ್ನು ಜನತೆಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ನಡೆಯಬೇಕಿದೆ ಎಂದು ಕಾಂಗ್ರೆಸ್ ಕಾಪು ಕ್ಷೇತ್ರ ಉಸ್ತುವಾರಿ ಮತ್ತು ಕುಮಟಾ ಜಿ. ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯ್ಕ ಹೇಳಿದರು.
ಕಾಪು ಪುರಸಭಾ ವ್ಯಾಪ್ತಿಯಲ್ಲಿ ನಡೆದ ಕಾಂಗ್ರೆಸ್‌ನ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಮುಂದಿನ ದಿನಗಳಲ್ಲಿ ಅನಿಲ ಭಾಗ್ಯ, ಆರೋಗ್ಯ ಭಾಗ್ಯ ಕಾರ್ಯಕ್ರಮವನ್ನು ನೀಡಲಿದೆ. ಬಿ. ಪಿ. ಎಲ್ ಕಾರ್ಡುದಾರರಿಗೆ ಸರಕಾರಿ ಯಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತಹ ಕಾರ್ಯಕ್ರಮ, ಎ. ಪಿ. ಎಲ್ ಕಾರ್ಡುದಾರರಿಗೆ ವರ್ಷಕ್ಕೆ 300ರೂ. ಪಾವತಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು. ಎರಡೂ ಯೋಜನೆಗಳನ್ನು ರಾಜ್ಯದಾದ್ಯಂತ ನ. 15ರಿಂದ ಜಾರಿಮಾಡಲಾಗುವುದು ಎಂದರು. ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯಾ ಸಂಜೀವ, ಉಪಾಧ್ಯಕ್ಷ ಎಚ್. ಉಸ್ಮಾನ್, ಪಕ್ಷದ ಮುಖಂಡರಾದ ಎಚ್. ಅಬ್ದುಲ್ಲಾ, ಮನಹರ್ ಇಬ್ರಾಹಿಂ, ಪ್ರಭಾಕರ ಉಳಿಯಾರಗೋಳಿ, ಫರ್ಜಾನಾ, ಶೋಭಾ ಬಂಗೇರ, ಸರೋಜಿನಿ, ಅಶ್ವಿನಿ, ಹರೀಶ್ ನಾಯಕ್, ಸತೀಶ್ ಶೆಟ್ಟಿ, ಜಾಕೀರ್ ಹುಸೇನ್, ಸುರೇಂದ್ರ ಶೆಟ್ಟಿ, ಇಮ್ರಾನ್, ಮಾಲಿನಿ, ಲೀಲಾ, ಸುಲೋಚನಾ ಬಂಗೇರ, ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಪ್ರಸ್ತಾವನೆಗೈದರು. ಕಾಪು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ್ ಸುವರ್ಣ ಸ್ವಾಗತಿಸಿ, ವಂದಿಸಿದರು.