Advertisement

ಕುಸಿಯುವ ಹಂತದಲ್ಲಿದ್ದ ಮನೆಗೆ ಸ್ಥಳೀಯರಿಂದ ಕಾಯಕಲ್ಪ

08:15 AM Aug 08, 2017 | Harsha Rao |

ವಿಟ್ಲ : ವಿಟ್ಲ ಸಮೀಪದ ಕಾಶಿಮಠದಲ್ಲಿ ವಾಸವಿದ್ದ ಬಡಕುಟುಂಬದ ಮನೆ ಮುರಿದುಬೀಳುವ ಅಪಾಯಕಾರಿ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆ ಕುಟುಂಬಕ್ಕೆ ನೂತನ ತಾರಸಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. 
ಕಾಶಿಮಠದಲ್ಲಿ ಈ ಕುಟುಂಬಕ್ಕೆ  8 ಸೆಂಟ್ಸ್‌ ಜಾಗವಿದೆ. ಪುರಂದರ ಗೌಡ, ಅವರ ಅತ್ತೆ ಮತ್ತು ನಾದಿನಿ ವಾಸವಾಗಿದ್ದಾರೆ. ಆದರೆ ಇವರ ಹೆಸರಲ್ಲಿ ಈ ಜಾಗವಿಲ್ಲ. ಪುರಂದರ ಅವರ ಸಹೋದರ ಲಕ್ಷ್ಮಣ ಗೌಡ ಅವರ ಹೆಸರಲ್ಲಿದೆ. ಇದು ಅಕ್ರಮ ಸಕ್ರಮದಲ್ಲಿ ಅವರಿಗೆ ದೊರೆತ ನಿವೇಶನ. ಆದರೆ ಲಕ್ಷ್ಮಣ ಗೌಡ ಅವರು ನಿಧನ ಹೊಂದಿದ್ದಾರೆ. ಆದುದರಿಂದ ಆ 
ಜಾಗ ಪುರಂದರ ಗೌಡ ಅವರ ಹೆಸರಿಗೆ ವರ್ಗಾವಣೆಯಾಗುವುದಿಲ್ಲ. ಅದೇ ಕಾರಣಕ್ಕೆ ಸರಕಾರಿ ಸೌಲಭ್ಯವನ್ನು ಪಡೆಯಲು ಪುರಂದರ ಗೌಡ ಅವರಿಗೆ ಸಾಧ್ಯವಾಗಲಿಲ್ಲ.

Advertisement

ಇವರ ಮನೆ ಬೀಳುವ ಹಂತಕ್ಕೆ ತಲುಪಿತ್ತು. ಪುರಂದರ ಗೌಡ ಅವರು ಕೂಲಿ ಕಾರ್ಮಿಕರು. ಮನೆಯಲ್ಲಿರುವ ಮಹಿಳೆಯರಿಬ್ಬರೂ ಆದಾಯ ಹೆಚ್ಚಿಸುವ ಶಕ್ತಿ ಹೊಂದಿರಲಿಲ್ಲ. ಆದುದರಿಂದ ಮನೆ ನಿರ್ಮಿಸುವ ಅನುಕೂಲವಿರಲಿಲ್ಲ. ಸ್ಥಳೀಯರು ಇದನ್ನು ಗಮನಿಸಿದ್ದರು. ಆದರೆ ನೇತೃತ್ವ ವಹಿಸುವವರಿರಲಿಲ್ಲ. ವಿಟ್ಲ ಜೇಸಿಐ ನಿಕಟಪೂರ್ವ ಅಧ್ಯಕ್ಷ ಬಾಬು ಕೆ.ವಿ. ಅವರು ಇವರಿಗೆ ಮನೆ ನಿರ್ಮಿಸುವ ಕಾರ್ಯಕ್ಕೆ ಮುಂದಾದರು. ಆರ್ಲಪದವು ಸುಬ್ರಹ್ಮಣ್ಯ ಇಲೆಕ್ಟ್ರಿಕಲ್ಸ್‌ನ ಉದಯ ಕುಮಾರ್‌ ಅರಂಬÂ ಮತ್ತು ಹರೀಶ್‌ ಗೌಡ ಅರಂಬÂ ಸಹಕಾರ ನೀಡಿದರು.

ಹಳೆಯ ಮನೆಯನ್ನು ಕೆಡವಿಹಾಕಲಾಯಿತು. ಶ್ರೀ ಕಾಶೀ ಯುವಕ ಮಂಡಲವು 25,000 ರೂ.ಗಳನ್ನು ನೀಡಿತು. ವಿಶ್ವನಾಥ ಮೇಸ್ತ್ರಿ  ಕಬ್ಬಿನಹಿತ್ಲು ಮತ್ತು ಹರೀಶ್‌ ಮೇಸ್ತ್ರಿ  ಕಾಶಿಮಠ ಅವರು ಗಾರೆ ಕೆಲಸ ನಿರ್ವಹಿಸಿದರು. ವಿಶ್ವನಾಥ ಶೆಟ್ಟಿ ಕೊಪ್ಪಳ ಅವರು ಸ್ಲಾಬ್‌ ಕಾಮಗಾರಿ ವೇತನವನ್ನು ಪಡೆದುಕೊಳ್ಳಲೇ ಇಲ್ಲ. ಉದ್ಯಮಿ ಆರ್‌.ಎಸ್‌.ಲಕ್ಷ್ಮಣ ಮತ್ತು ಇತರರು ಧನಸಹಾಯವನ್ನೂ ವಸ್ತುರೂಪದ ಸಹಾಯವನ್ನೂ ಮಾಡಿದರು. ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ.ಅವರು ಉಳಿದ ಮೊತ್ತವನ್ನು ನೀಡಿ, ಮನೆ ನಿರ್ಮಿಸಲಾಯಿತು.

700 ಚದರ ಅಡಿ ಮನೆ ನಿರ್ಮಾಣವಾಗಿದೆ. ಅಡುಗೆಮನೆ, 2 ಬೆಡ್‌ರೂಮ್‌ ಮತ್ತು ಒಂದು ಹಾಲ್‌ ಇರುವ ಸುಂದರ ಮನೆ ಕೇವಲ 66 ದಿನಗಳಲ್ಲಿ ಪುನರ್‌ನಿರ್ಮಾಣವಾಗಿದೆ. ಆ ಬಡ ಕುಟುಂಬ ಆ ಮನೆಗೆ ಲಕ್ಷ್ಮಣ ನಿಲಯ ಎಂದು ಹೆಸರಿಸಿ, ಎಲ್ಲರ ಸಹಕಾರದೊಂದಿಗೆ ಗೃಹಪ್ರವೇಶ ನೆರವೇರಿಸಿದೆ. ಇದೀಗ ಈ ಕುಟುಂಬ ಮನೆಯೊಳಗೆ ಭದ್ರವಾಗಿದೆ. ಭಯವಿಲ್ಲದೇ ಬದುಕುವಂತಾಗಿದೆ.

– ಉದಯಶಂಕರ್‌ ನೀರ್ಪಾಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next