ಮಲ್ಪೆ: ಕೋವಿಡ್ ಸೋಂಕು ಸಮುದಾಯ ಹರಡುವಿಕೆಯ ಅಪಾಯದ ಹಿನ್ನಲೆಯಲ್ಲಿಯೂ ತಮ್ಮ ಜೀವದ ಹಂಗು ತೊರೆದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಜಿಲ್ಲೆಯ ಆಶಾ ಕಾರ್ಯಕರ್ತರು, ವೈದ್ಯರು, ದಾದಿಯರಿಗೆ ವರಮಹಾಲಕ್ಷ್ಮೀ ಪೂಜೆಯ ಸಂದರ್ಭ ಜಿಲ್ಲಾ ಆರೋಗ್ಯ ಇಲಾಖೆಯ 1,100, ಟಿಎಂಎ ಪೈ ಆಸ್ಪತ್ರೆಯ 221, ಕುಂದಾಪುರ ಕೋವಿಡ್ ಆಸ್ಪತ್ರೆಯ 91, ಕಾರ್ಕಳ ಕೋವಿಡ್ ಆಸ್ಪತ್ರೆಯ 48 ಮಂದಿ ಮಹಿಳಾ ವಾರಿಯರ್ಸ್‌ಗಳಿಗೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 15 ಲಕ್ಷ ರೂ. ವಿನಿಯೋಗಿಸಿ ಗೌರವ ಸಮರ್ಪಣೆಯ ಕಾರ್ಯಕ್ರಮ ಶುಕ್ರ ವಾರ ನಡೆಯಿತು.
ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸಾಂಕೇತಿಕವಾಗಿ ಆಶಾ ಕಾರ್ಯಕರ್ತೆಯರಿಗೆ ಕಚೇರಿಯಲ್ಲಿ ಗೌರವ ಸಮರ್ಪಿಸಿದರು. ಈ ಸಂದರ್ಭ ಮಾತನಾಡಿದ ಜಿ. ಶಂಕರ್ ಅವರು ಕೋವಿಡ್ ಎಂಬ ಅಸುರನಿಂದ ಸಮಾಜವನ್ನು ರಕ್ಷಿಸುವಲ್ಲಿ ನಮ್ಮ ಕೊರೊನಾ ವಾರಿಯರ್ಸ್‌ನವರು ಮಹತ್ವದ ಪಾತ್ರ ವಹಿಸಿದ್ದಾರೆ. ವರಮಹಾಲಕ್ಷ್ಮೀ ಪೂಜೆಯಲ್ಲಿ ಅವರಿಗೆ ಗೌರವ ಸಮರ್ಪಿಸುವ ಮೂಲಕ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದೇವೆ ಎಂದರು.
ಟ್ರಸ್ಟ್‌ನ ಸದಸ್ಯರಾದ ಶಿವ ಎಸ್.ಕರ್ಕೇರ ಮಾತನಾಡಿ ಜಿ. ಶಂಕರ್ ಅವರು ಕೊರೊನಾ ನಿರ್ವಹಣೆಗಾಗಿ ಉಡುಪಿ, ದ.ಕ. ಮತ್ತು ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ 3 ಕೋ. ರೂ. ಅಧಿಕ ವೆಚ್ಚದ ರಕ್ಷಣಾ ಪರಿಕರಗಳನ್ನು ನೀಡಿದ್ದಾರೆ ಎಂದರು. ಟ್ರಸ್ಟ್‌ನ ಯೋಗೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಉಭಯ ಜಿಲ್ಲೆಗಳಿಗೆ 6 ವೆಂಟಿಲೇಟರ್
ಕೋವಿಡ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ 4 ಮತ್ತು ದ.ಕ. ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ 2 ವೆಂಟಿಲೇಟರ್‌ಗಳನ್ನು ಸುಮಾರು 56 ಲಕ್ಷ ರೂಪಾಯಿ ವೆಚ್ಚದಲ್ಲಿ ಆಗಸ್ಟ್ ತಿಂಗಳಿನೊಳಗೆ ಟ್ರಸ್ಟ್ ವತಿಯಿಂದ ನೀಡಲಾಗುವುದು.
– ಡಾ| ಜಿ. ಶಂಕರ್, ಪ್ರವರ್ತಕರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್