Advertisement

ಚಿಣ್ಣರನ್ನು ಚಿಗುರಿಸಿದ ರಜಾ ರಂಗು

06:05 PM Jun 27, 2019 | mahesh |

ವಿಂಶತಿ ಸಂಭ್ರಮದಲ್ಲಿರುವ ಯಶಸ್ವಿ ಕಲಾವೃಂದ ಮತ್ತು ಕೈಲಾಸ ಕಲಾಕ್ಷೇತ್ರ ಟ್ರಸ್ಟ್‌, ತೆಕ್ಕಟ್ಟೆ ರಜಾ ರಂಗು-2019 ಎಂಬ ಬೇಸಿಗೆ ಶಿಬಿರವೊಂದನ್ನು ಅಚ್ಚರಿ ಮೂಡುವಂತೆ 30 ದಿನ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿತು. 8ರಿಂದ 18ರ ವಯಸ್ಸಿನ ಸುಮಾರು 130 ವಿದ್ಯಾರ್ಥಿಗಳನ್ನು ಜಾಲತಾಣ ಮತ್ತಿತರ ಪ್ರಚಾರದ ಮೂಲಕ ಸೇರಿಸಿಕೊಳ್ಳಲಾಯಿತು. ಅದರಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಸಿದ್ಧಾಪುರ ಭಾಗದ 30 ವಿದ್ಯಾರ್ಥಿಗಳು ವಸತಿ ಸೌಕರ್ಯದಡಿಯಲ್ಲಿ ಪಾಲ್ಗೊಂಡಿರುವುದು ವಿಶೇಷ.

Advertisement

ದೈಹಿಕ ಮತ್ತು ಬೌದ್ಧಿಕ ವಿಕಸನದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿದಿನ 30ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಕಾರ್ಯಾಗಾರಗಳ ಆಯೋಜನೆ, ದೇಸಿ ಆಟಗಳು ಮತ್ತು ಶಿಬಿರದ ಕೊನೆಯಲ್ಲಿ ಪ್ರದರ್ಶಿಸುವ ನಾಟಕ, ಯಕ್ಷಗಾನಗಳ ಅಭ್ಯಾಸ. ಇದಕ್ಕಾಗಿ ಜೂನಿಯರ್‌, ಸೀನಿಯರ್‌ ಮತ್ತು ಯಕ್ಷಗಾನ ತಂಡಗಳಾಗಿ ಪ್ರತ್ಯೇಕಿಸಿ ತರಬೇತಿ ನೀಡಲಾಗುತ್ತಿತ್ತು. ಶಿಬಿರದ ಅಚ್ಚುಕಟ್ಟಾದ ಯೋಜನೆಗಳನ್ನು ಕಾರ್ಯರೂಪಗೊಳಿಸಲು ಮಕ್ಕಳನ್ನೇ ತಯಾರು ಮಾಡಿ, ಅತಿಥಿಗಳ ಸ್ವಾಗತ, ರಂಗಗೀತೆ, ನಿರೂಪಣೆ, ವಂದನಾರ್ಪಣೆ, ಸ್ವಚ್ಚತೆ ಮುಂತಾದವುಗಳೂ ಕಲಿಕೆಯ ಭಾಗವಾಗಿತ್ತು. ರೋಹಿತ್‌ ಎಸ್‌. ಬೈಕಾಡಿ, ನಾಗೇಶ್‌, ಪ್ರಶಾಂತ್‌ ಉದ್ಯಾವರ, ರಂಗಶಿಬಿರಗಳ ನಿರ್ದೇಶಕರಾಗಿ ಮತ್ತು ಸೀತಾರಾಮ ಶೆಟ್ಟಿ ಕೊಕೂರು ಯಕ್ಷಗುರುಗಳಾಗಿ ಮಧ್ಯಾಹ್ನದ ಅಭ್ಯಾಸ ಮೇಲ್ವಿಚಾರಣೆಯನ್ನು ಹೊತ್ತಿದ್ದರು.

ಖ್ಯಾತ ಸ್ಯಾಂಡ್‌ ಆರ್ಟಿಷ್ಟ್ ಹರೀಶ್‌ ಸಾಗ ಅವರಿಂದ ಕಡಲ ತೀರದಲ್ಲಿ ಮರಳು ಶಿಲ್ಪ ರಚನೆ ಪ್ರಾತ್ಯಕ್ಷಿಕೆ ಮಕ್ಕಳನ್ನು ಆಟದ ಜತೆಗೆ ಮರುಳು ಮಾಡಿದವು.
ಭರತನಾಟ್ಯದ ಬಗ್ಗೆ ವಿ| ವಿದ್ಯಾ ಸಂದೇಶ್‌ ಮತ್ತು ಸುಪ್ರೀತಾ ವೈದ್ಯ, ಕಥೆ, ನಾಟಕದಲ್ಲಿ ನಾನು ಎಂಬ ವಿಷಯದ ಬಗ್ಗೆ ಸಾಹಿತಿ ಅಭಿಲಾಷ ಹಂದೆ, ಕಥೆ ಹೇಳುವೆ ನಾ… ದಲ್ಲಿ ರಂಗ ಸಾಹಿತಿ ಸುಧಾ ಅಡುಕುಳ, ಚಿತ್ರ-ಚಿತ್ತಾರ ಬಣ್ಣಗಳ ಮೋಡಿ ಮಾಡಿದ ಕಾರ್ಯಾಗಾರದಲ್ಲಿ ರಾಘವೇಂದ್ರ ಚಾತ್ರಮಕ್ಕಿ, ಕುಂದಗನ್ನಡದಲ್ಲಿ ಹಾಸ್ಯ ಹರಿಬಿಟ್ಟವರು ಮನು ಹಂದಾಡಿ, ನವರಸಾಭಿನಯ ತೋರಿ ಯಕ್ಷಗಾನದ ಎಲ್ಲಾ ಆಯಾಮಗಳನ್ನು ಸರಳವಾಗಿ ತಿಳಿಸಿ ಭಾಗವತಿಕೆ, ಮುಖವರ್ಣಿಕೆಯ ತಂಡದೊಂದಿಗೆ ಯಕ್ಷ ಲೋಕವನ್ನು ಪ್ರಸ್ತುತ ಪಡಿಸಿದವರು ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯೆ ಅಶ್ವಿ‌ನಿ ಕೊಂಡದಕುಳಿ, ಇಂದ್ರಜಾಲ – ಮಾಯದ್ವೀಪ ಎಂಬ ಮ್ಯಾಜಿಕ್‌ ಕಾರ್ಯಾಗಾರದಲ್ಲಿ ಮಂಗಳೂರಿನ ಮುಬಿನ ಪರ್ವಿನ್‌ ತಾಜ್‌, ರೇಖೆಗಳೊಂದಿಗೆ ಆಟ ಆಡಿಸಿದವರು ಉಡುಪಿಯ ಕಾಟೂìನಿಸ್ಟ್‌ ಜೀವನ್‌ ಶೆಟ್ಟಿ, ಛಾಯಾಚಿತ್ರ ಲೋಕಕ್ಕೆ ಕರೆದೊಯ್ದವರು ಹಿರಿಯ ಅನುಭವಿ ಫೊಟೊಗ್ರಾಫ‌ರ್‌ ಯಜ್ಞ ಆಚಾರ್ಯ, ಕಸದಿಂದ ರಸ ಮೂಲಕ ಗೊಂಬೆಗಳನ್ನು ತಯಾರಿಸಿದವರು ನೀನಾಸಂ ಪದವೀಧರ ಸತ್ಯನಾ ಕೊಡೇರಿ, ಆಶು ಅಭಿನಯ- ಯಕ್ಷ ಹೆಜ್ಜೆ- ಗೆಜ್ಜೆ- ಬಣ್ಣದ ಕಮ್ಮಟಗಳ ಮುಖ್ಯ ಸಂಪನ್ಮೂಲ ವ್ಯಕ್ತಿ ಸುಜಯೀಂದ್ರ ಹಂದೆ, ಸ್ಮರಣ ಶಕ್ತಿ ಮತ್ತು ಸುಂದರ ಅಕ್ಷರಗಳ ಬಗ್ಗೆ ಕಲಾಚಿಂತಕ ಅಶೋಕ್‌ ತೆಕ್ಕಟ್ಟೆ, ಜನಪದ ಹೆಜ್ಜೆಹಾಕಿಸಿದವರು ಖ್ಯಾತ ಜಾನಪದ ನೃತ್ಯಕಲಾವಿದ ಶಂಕರ ಚೆಂಡ್ಕಳ, ಜಲವರ್ಣ ಮತ್ತು ಕೊಲ್ಯಾಜ್‌ ಪೆಂಟಿಂಗ್‌ ಪ್ರಾತ್ಯಕ್ಷಿಕೆ ನೀಡಿದವರು ಗಣೇಶ್‌ ಆಚಾರ್ಯ ಗುಂಪಲಾಚೆ, ಟೆರ್ರಾಕೋಟಾ ಕಲಾಕೃತಿ ಮತ್ತು ಟ್ರೆçಬರ್‌ ಮಾಸ್ಕ್ ತಯಾರಿಯನ್ನು ತಮ್ಮ ತಂಡದೊಂದಿಗೆ ತಿಳಿಸಿದವರು ವೆಂಕಿ ಪಲಿಮಾರು. ರಂಗಗೀತೆಗಳ ಮೂಲಕ ಅಭಿನಯದ ಪಾತ್ರಪೋಷಣೆಯ ಮಾಹಿತಿ ನೀಡಿದವರು ದಿಶಾ ಮಂಡ್ಯ ರಮೇಶ್‌ ಮತ್ತು ಮೇಘ ಸಮೀರ. ರಂಗ ಸಂವಾದ ನಡೆಸಿಕೊಟ್ಟವರು ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ.

ಕೊನೆಯ ಮೂರು ದಿನಗಳ ರಂಗ ಪ್ರದರ್ಶನದಲ್ಲಿ ಕದನ ಕಲ್ಯಾಣ ಯಕ್ಷಗಾನ, ನಾಣಿಯ ಸ್ವರ್ಗದ ಕನಸು ಮತ್ತು ಕಂಸಾಯನ ನಾಟಕ ಹಾಗೂ ಎಚ್ಚೆಸ್ವಿಯವರ ಹಕ್ಕಿಮರಿ ರೂಪಕಗಳು ಶಿಬಿರಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೂ ಸಾಕ್ಷಿಯಾದವು.

ಜೀವನ್‌ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next