Advertisement
ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಮುರುಘಾ ಮಠದ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ಶರಣ ಮೇಳ-2019ನ್ನು ಉದ್ಘಾಟಿಸಿ ಶರಣರು ಆಶೀರ್ವಚನ ನೀಡಿದರು.
Related Articles
Advertisement
ಸಮಾಜಸುಧಾರಕರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಮ್ಮ ಅರಿವು-ಆಚರಣೆಯಿಂದ ತಿದ್ದಿದ್ದಾರೆ. ಸಂಪ್ರದಾಯದ ಕಂದಕದಿಂದ ಜನಸಾಮಾನ್ಯರನ್ನು ಮೇಲೆತ್ತಿದ್ದಾರೆ. ಸ್ವಪ್ರಯತ್ನ, ಸತತ ಸಾಧನೆ, ದೃಢ ನಿರ್ಧಾರ, ಸ್ಪಷ್ಟವಾದ ಗುರಿ, ಸ್ವಂತ ಭರವಸೆ, ಮಾನವೀಯತೆ ಮತ್ತು ಬದ್ಧತೆ ಮುಂತಾದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಸನ್ಮಾರ್ಗ ತೋರಿಸಿದರು ಎಂದು ಸ್ಮರಿಸಿದರು.
ಬಸವಣ್ಣನವರಿಗಿಂತ ಮುಂಚೆಯೂ ಲಿಂಗ ತಾರತಮ್ಯ ಇತ್ತು. ಬಸವಣ್ಣನವರು ಸಮ ಸಮಾಜಕ್ಕಾಗಿ ಹೋರಾಟ ನಡೆಸಿಮಹಿಳೆಯರಿಗೆ ಧಾರ್ಮಿಕ ಹಕ್ಕು ನೀಡಿದರು. ಅಸ್ಪೃಶ್ಯತೆ ಆಚರಣೆ ಮಿತಿ ಮೀರಿತ್ತು. ಶ್ರೇಣೀಕೃತ ವ್ಯವಸ್ಥೆ ಸಮಾಜವನ್ನು ವಿಭಜಿಸಿತ್ತು. ಬಸವಣ್ಣ ಮತ್ತು ಸಮಕಾಲೀನ ಶರಣರ ಸಾಮೂಹಿಕ ಹೋರಾಟದ ಫಲವಾಗಿ ಸಾಮಾಜಿಕ ಸಮಾನತೆ ಸಾಧ್ಯವಾಯಿತು ಎಂದರು. ಗುವಾಹಟಿ ನ್ಯಾಷನಲ್ ಲಾ ಯುನಿವರ್ಸಿಟಿ ಆ್ಯಂಡ್ ಜ್ಯುಡಿಷಿಯಲ್ ಅಕಾಡೆಮಿ ಕುಲಪತಿ ಡಾ| ಜೆ.ಎಸ್. ಪಾಟೀಲ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಾಮೂಹಿಕ ನಾಯಕತ್ವಕ್ಕೆ ಹೆಚ್ಚು ಒತ್ತು ನೀಡಿದ್ದರು. ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಾನತೆಗಾಗಿ ನಿರಂತರವಾಗಿ ಹೋರಾಡಿದ್ದರು. ಅಸ್ಸಾಂ ಭಾಗದಲ್ಲಿ 16ನೇ ಶತಮಾನದಲ್ಲಿ ಬಂದ ಶಂಕರದೇವರು ಬಸವಣ್ಣನವರ ಹಾಗೆ ಆ ಜನರಿಗೆ ಸಮಾನತೆ ತರಲು ಯಶಸ್ವಿಯಾದರು. ಶಂಕರದೇವರು ಎಂದರೆ ಈ ಭಾಗದ ಜನರಿಗೆ ದೈವಸ್ವರೂಪಿಯಾಗಿದ್ದಾರೆ. ಅವರ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತ. ಬಸವಣ್ಣನವರ ಕಲ್ಯಾಣ ಕ್ರಾಂತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಲಿಲ್ಲ. ಸಾರ್ವತ್ರಿಕವಾಗಿ ಜಗತ್ತಿನಾದ್ಯಂತ ಪಸರಿಸಿತು ಎಂದು ತಿಳಿಸಿದರು. ಸಹಾಯಕ ಪ್ರಾಧ್ಯಾಪಕ ಡಾ| ನೀಲ್ ಮೋಹನ್ ರಾಯ್ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಶಂಕರದೇವರ ಪಾತ್ರ ಮಹತ್ವದ್ದಾಗಿದೆ. ಶಂಕರದೇವರು ಅಸಮಾನತೆಯ ವಿರುದ್ಧ ಹೋರಾಟ ಮಾಡಿ ಸಫಲತೆ ಕಂಡರು ಎಂದು ತಿಳಿಸಿದರು. ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು, ಬಸವ ಶಾಂತಲಿಂಗ ಸ್ವಾಮಿಗಳು, ಬಸವ ಪ್ರಭು ಸ್ವಾಮಿಗಳು, ಬಸವಭೂಷಣ ಸ್ವಾಮಿಗಳು, ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮಿಗಳು, ಬಸವ ಮಡಿವಾಳ ಮಾಚಿದೇವ ಸ್ವಾಮಿಗಳು, ಬಸವ ಮುರುಘಾ ಸಾರಂಗ ದೇಶೀಕೇಂದ್ರ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ಬಸವ ನಿರಂಜನ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಾಜೀವ ಗಾಂಧಿ ಯುನಿವರ್ಸಿಟಿಯ ಗ್ರಂಥಪಾಲಕ ಡಾ| ಮಾಲತೇಶ ಮೋಟೆಬೆನ್ನೂರು, ಗುವಾಹಟಿ ಪಾಂಡು ಕಾಲೇಜಿನ ಪ್ರಾಂಶುಪಾಲ ಡಾ| ಜೋಗೇಶ್ ಕಾಕಥಿ ಇದ್ದರು. ಮೇಘಶ್ರೀ ಸಾಣಿಕೊಪ್ಪ ಪ್ರಾರ್ಥಿಸಿದರು. ಈಶ್ವರ ಸಾಣಿಕೊಪ್ಪ ಸ್ವಾಗತಿಸಿದರು. ಬಸವ ತತ್ವ ಮತ್ತು ಅಸ್ಸಾಂನ ಶಂಕರ ದೇವರ ತತ್ವಗಳಿಗೆ ಹೋಲಿಕೆ ಇದೆ. ಬಸವಣ್ಣನವರು ಕಾಯಕದ ಮೂಲಕ ಜನರನ್ನು ತಲುಪಿದರೆ ಶಂಕರದೇವರು ತಮ್ಮ ತತ್ವಗಳ ಮೂಲಕ ಹಳ್ಳಿಗಳಿಗೆ ಹೋಗಿ ಹಾಡುತ್ತ ಕುಣಿಯುತ್ತ ಜನರನ್ನು ತಲುಪಿದರು. ಅವರದೂ ಭಕ್ತಿಮಾರ್ಗ. ಮಾನವ ಕುಲಕ್ಕೆ ಜ್ಞಾನ ದೀವಿಗೆ ಹಚ್ಚುವಲ್ಲಿ ಯಶಸ್ವಿಯಾದರು.
ಪ್ರೊ| ಅಮಲೆಂದು ಚಕ್ರವರ್ತಿ, ಗುವಾಹಟಿಯ ಪ್ರಾಧ್ಯಾಪಕ