ಜೇನು ಸಾಕಾಣಿಕೆ ಎಂಬುದು ರೈತರ ಪಾಲಿಗೆ ಸಂಜೀವಿನಿಯಾಗಿದ್ದು, ಜೇನು ಕೃಷಿಯಿಂದ ಆರ್ಥಿಕ ಲಾಭ ಗಳಿಸಲು ಸಾಧ್ಯವಿದೆ.
Advertisement
ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ಪ್ರಗತಿಪರ ರೈತ ಅನಿಲಕುಮಾರ್ ಹಾಗೂ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ರೈತ ನಿಂಗಪ್ಪ ಜೇನು ಕೃಷಿಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅಲ್ಲದೆ ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯಲ್ಲಿ ಮೊದಲ ಜೇನು ಕೃಷಿಕರ ಎಂಪ್ಯಾನಲ್ ಸಂಘವನ್ನೂ ಸಹ ಸ್ಥಾಪಿಸಿ, ತೋಟಗಾರಿಕೆ ಇಲಾಖೆಯ ನೆರವು ಪಡೆಯುತ್ತಿದ್ದಾರೆ. ಸಂಘದಲ್ಲಿ ಈಗಾಗಲೇ 25 ರೈತರು ಸದಸ್ಯರಿದ್ದು, ಎಲ್ಲರೂ ಈ ಜೇನು ಕೃಷಿಯಲ್ಲಿ ಆಸಕ್ತಿ ತೋರಿದ್ದಾರೆ.
ಗಂಗಾವತಿ ತಾಲೂಕು ಬಸಾಪಟ್ಟಣದ ರೈತ ಅನಿಲಕುಮಾರ್, ಮೇಟಿಕುರ್ಕೆಯಲ್ಲಿ ಶಾಂತವೀರಯ್ಯನರಿಂದ ಜೇನು ಕೃಷಿಯ ತರಬೇತಿ ಪಡೆದು, ಅವರಿಂದಲೇ 2 ಜೇನು ಪೆಟ್ಟಿಗೆ ಪಡೆದುಕೊಂಡು, ತಮ್ಮ ತೋಟದಲ್ಲಿ ಜೇನು ಸಾಕಾಣಿಕೆ ಪ್ರಾರಂಭಿಸಿಯೇ ಬಿಟ್ಟರು. 20 ಎಕರೆ ಜಮೀನು ಹೊಂದಿರುವ ಇವರು, ಮಾವು, ಪಪ್ಪಾಯಿ, ಭತ್ತ ಸೇರಿದಂತೆ ಹಲವು ಬೆಳೆಯನ್ನೂ ಬೆಳೆಯುತ್ತಾರೆ. ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿರುವ ಇವರು ತಮ್ಮ ತೋಟದಲ್ಲಿ 40 ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನಿಟ್ಟು, ಜೇನು ಕೃಷಿ ಮಾಡುತ್ತಿದ್ದಾರೆ. ಹೈದ್ರಾಬಾದ್-ಕರ್ನಾಟಕ ಪ್ರದೇಶದ ಹಲವು ಜಿಲ್ಲೆಗಳ ರೈತರು ಸ್ವಯಂ ಪ್ರೇರಿತರಾಗಿ ಇವರಲ್ಲಿ ಬಂದು ಜೇನು ಸಾಕಾಣಿಕೆಯ ತರಬೇತಿ ಪಡೆದುಕೊಂಡು ಹೋಗುತ್ತಾರೆ.
Related Articles
Advertisement
ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ರಾಸಾಯನಿಕ ಹಾಗೂ ಕೀಟನಾಶಕ ಬಳಕೆಯಿಂದಾಗಿ ಜೇನು ಹುಳುಗಳ ಪೀಳಿಗೆ ಸಂಕಷ್ಟದಲ್ಲಿದೆ. ಜೇನು ಹುಳುಗಳ ಕಣ್ಮರೆಯಿಂದ ಇಡೀ ಕೃಷಿ ಚಟುವಟಿಕೆಯೇ ಆತಂಕಕ್ಕೆ ಸಿಲುಕಿದೆ ಎನ್ನುತ್ತಾರೆ ಅನಿಲಕುಮಾರ್.
ಜೇನು ಸಾಕಾಣಿಕೆಯನ್ನು ಇತರೆ ರೈತರಿಗೂ ಪರಿಚಯಿಸುವ ಉದ್ದೇಶದಿಂದ ಕೊಪ್ಪಳ ತೋಟಗಾರಿಕೆ ಇಲಾಖೆಯು ಇಂದರಗಿ ಗ್ರಾಮದ ರೈತ ನಿಂಗಪ್ಪರನ್ನು ಜೇನು ಕೃಷಿ ಪ್ರೇರಕರನ್ನಾಗಿ ನೇಮಿಸಿದೆ. ನಿಂಗಪ್ಪ ಹೇಳುವಂತೆ ಒಂದು ಆರೋಗ್ಯವಂತ ರಾಣಿ ಜೇನು ನಿತ್ಯ 500 ರಿಂದ 1000 ಮೊಟ್ಟೆಗಳನಿಡುತ್ತದೆ. ಪ್ರತಿ ರಾಣಿ ಜೇನಿನ ಜೀವಿತಾವಧಿ 2 ರಿಂದ 3 ವರ್ಷವಾಗಿದ್ದು, ಇತರೆ ಜೇನು ಹುಳುಗಳು ಸುಮಾರು ಒಂದು ಕಿ.ಮೀ. ವಿಸ್ತೀರ್ಣದಲ್ಲಿ ಸಂಚರಿಸಿ, ಮಕರಂದವನ್ನು ಹೀರಿ ತರುತ್ತವೆ. ಒಂದು ಜೇನು ಪೆಟ್ಟಿಗೆಯಲ್ಲಿ 8 ಸೂಪರ್ ಫ್ರೆàಮ್ ಹಾಗೂ 8 ಇತರೆ ಫ್ರೆàಮ್‌ಗಳನ್ನು ಇರಿಸಲಾಗುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ತೇಜನ ನೀಡುತ್ತಿದೆ. ಮಧು ಮೇಳವನ್ನು ಆಯೋಜಿಸಿ, ಜೇನು ಕೃಷಿ ಬಗ್ಗೆ ರೈತರಿಗೆ ಮಾಹಿತಿ ಹಾಗೂ ಶುದ್ಧ ಜೇನು ತುಪ್ಪ ಮಾರಾಟ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಜೇನು ಪೆಟ್ಟಿಗೆಗೆ ಸಾಮಾನ್ಯ ರೈತರಿಗೆ 1,800 ಹಾಗೂ ಪ.ಜಾತಿ/ಪ.ಪಂಗಡದವರಿಗೆ ರೂ. 3,600 ಸಹಾಯಧನ ನೀಡಲಾಗುತ್ತಿದೆ. ಅಲ್ಲದೆ ಜೇನು ಸಾಕಾಣಿಕೆಯನ್ನು ಹೆಚ್ಚಿಸಿಕೊಂಡು ಮಧುವನ ಮಾಡಿಕೊಳ್ಳಲು ಬಯಸುವವರಿಗೆ 50 ಸಾವಿರ ರೂ. ಸಹಾಯಧನವನ್ನು ನೀಡಲಾಗುವುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ.
ಮಾಹಿತಿಗೆ 9900440777
– ತುಕಾರಾಂರಾವ್ ಬಿ.