ಕಾರವಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಲಂಡನ್ ಬ್ರಿಜ್ ಬಳಿ ಪ್ಲೈ ಓವರ್ ಸಂಪರ್ಕಿಸುವ ಸುರಂಗ ಸುರಕ್ಷಿತವಾಗಿದ್ದು, ಅದನ್ನು ವಾಹನ ಸಂಚಾರಕ್ಕೆ ಪುನಃ ಪ್ರಾರಂಭಿಸಿ ಎಂದು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಎರಡು ದಿನದೊಳಗೆ ಸುರಂಗ ಮಾರ್ಗ ಮುಕ್ತವಾಗುವ ಸಾಧ್ಯತೆಗಳಿವೆ.
ಸುರಂಗ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾದರೆ, 4 ಕಿಮೀ ಬಿಣಗಾ ಘಟ್ಟ ಸುತ್ತಿ ಬಳಸಿ ಕಾರವಾರ ತಲುಪುವ ಕಷ್ಟ ತಪ್ಪಲಿದೆ.
ಸುರಂಗ ಮಾರ್ಗ ಸುರಕ್ಷತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಅನುಮಾನ ವ್ಯಕ್ತಪಡಿಸಿದ್ದರು. ಈ ನಂತರ ಪುಣೆಯ ಟೆಕ್ನಾಲಜಿ ಯುನಿವರ್ಸಿಟಿ ಸುರಂಗ ಸುರಕ್ಷಿತವಾಗಿದೆ ಎಂದು ವರದಿ ನೀಡಿತ್ತು. ಜಿಲ್ಲಾಡಳಿತಕ್ಕೆ ವರದಿ ತಲುಪಿದೆ ಎನ್ನಲಾಗಿದ್ದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸುರಂಗ ಮಾರ್ಗ ತೆರೆಯಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಇತ್ತ ಸುರಂಗ ಮಾರ್ಗದ ದಾರಿಗೆ ಐಆರ್ ಬಿ ಹಾಕಿದ್ದ ಜಲ್ಲಿಕಲ್ಲು ಗೋಡೆಯನ್ನು ಮಂಗಳವಾರ ತೆರವು ಮಾಡಿದ್ದು, ಬ್ಯಾರಿಕೇಡ್ ಮಾತ್ರ ಇಟ್ಟಿದೆ. ಯಾವುದೇ ಕ್ಷಣದಲ್ಲಿ ಸುರಂಗ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ.
ಸುರಂಗ ಮಾರ್ಗ ಮುಕ್ತ ಮಾಡದಿದ್ದರೆ, ಸೆ. 29 ರಂದು ಹೋರಾಟ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದ್ದರು. ಅಲ್ಲದೆ ಸುರಂಗ ಮಾರ್ಗವನ್ನು ಬಲವಾದ ಕಾರಣ ಇಲ್ಲದೆ ಮುಚ್ಚಲಾಗಿದೆ. ಇದರಿಂದ ವಾಹನ ಸವಾರರ ಕಷ್ಟ ಇಮ್ಮಡಿಸಿವೆ ಎಂದು ಉದಯವಾಣಿ ಸೆ. 22 ರಂದು ವರದಿ ಮಾಡಿದ್ದು ಇಲ್ಲಿ ಸ್ಮರಣೀಯ.