Advertisement

ಅಪಾಯ ಆಹ್ವಾನಿಸುತ್ತಿವೆ ಹೆದ್ದಾರಿ ಬದಿಯ ಮರಗಳು

08:41 PM May 08, 2019 | Team Udayavani |

ಬೆಳ್ತಂಗಡಿ: ಮಳೆಗಾಲ ಇನ್ನೇನು ಸಮೀಪಿಸಿ ರುವಂತೆ ವಾಹನ ಸವಾರರಿಗೆ ಹೆದ್ದಾರಿ ಸಂಚಾರ ಆತಂಕವನ್ನು ಸೃಷ್ಟಿ ಮಾಡಿದೆ. ಉಜಿರೆಯಿಂದ ಕೊಕ್ಕಡ ರಾಜ್ಯ ಹೆದ್ದಾರಿ, ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಾ. ಹೆ. ಅಕ್ಕಪಕ್ಕ ಒಣಗಿದ ಮರಗಳು ಹಾಗೂ ರೆಂಬೆಗಳು ಹೆದ್ದಾರಿಗೆ ವಾಲಿ ನಿಂತಿವೆ. ಮಳೆ ಗಾಳಿ ಸಂದರ್ಭ ದುರ್ಘ‌ಟನೆ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Advertisement

ತೆರವಿಗೆ ಇಲಾಖೆ ಹಿಂದೇಟು
ಅಪಾಯಕಾರಿ ಮರದ ಕೊಂಬೆ ತೆರವಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಿಂದ ಸೂಚನೆ ಬಂದರೂ ಪ್ರಸ್ತುತ ಮೆಸ್ಕಾಂ ಇಲಾಖೆ ಒಪ್ಪಿಗೆ ನೀಡಿಲ್ಲ. ಮೆಸ್ಕಾಂ ಇಲಾಖೆ ಹೈಟೆನ್ಶನ್‌ ಲೈನ್‌ ತೆರವುಗೊಳಿಸದೆ ಮರ ಕಟಾವು ಅಸಾಧ್ಯ. ಎರಡು ಇಲಾಖೆಗಳ ಶೀತಲ ಸಮರದಿಂದ ಪ್ರಯಾಣಿಕರು ಆತಂಕದಲ್ಲಿ ಓಡಾಡುವಂತಾಗಿದೆ.

ಎಪ್ರಿಲ್‌ ನಲ್ಲಿ ಮೂರು ಮರ ಧರೆಗೆ
ಎ. 27ರಂದು ಸಂಜೆ ಸುರಿದ ಮಳೆಗೆ ಧರ್ಮಸ್ಥಳ – ಬೆಂಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ಕುದ್ರಾಯದಲ್ಲಿ ರಸ್ತೆಗೆ ಮರ ಬಿದ್ದು ಒಂದು ತಾಸಿಗೂ ಹೆಚ್ಚುಕಾಲ ವಾಹನ ಸಾಲು ನಿಂತಿತ್ತು. ಚಾರ್ಮಾಡಿ ಉಜಿರೆ ರಸ್ತೆಯ ಮುಂಡಾಜೆ ಪಿಲಿತಡ್ಕ ಸಮೀಪ ಸಂಜೆ ರಸ್ತೆಗೆ ಮರ ಬಿದ್ದು ಅರ್ಧ ತಾಸು ಸಮಸ್ಯೆಯಾಗಿತ್ತು. ಮೇ 4ರಂದು ಚಲಿಸುತ್ತಿದ್ದ ಕಾರಿಗೆ ಬುಡ ಸಮೇತ ಮರ ಬಿದ್ದು ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದರು. ಇಂತಹಾ ದುರ್ಘ‌ಟನೆ ಮರುಕಳಿಸದಂತೆ ರಸ್ತೆ ಸಮೀಪವಿರುವ ಮರದ ರೆಂಬೆ ತೆರವುಗೊಳಿಸಬೇಕಾಗಿದೆ.

ಈಗಾಗಲೇ ಅರಣ್ಯ ಇಲಾಖೆ ನಾವೂರು, ಕನ್ಯಾಡಿ, ಗೇರುಕಟ್ಟೆ, ಪುಂಜಾಲಕಟ್ಟೆ, ಮುಂಡಾಜೆ ರಸ್ತೆ ಸಮೀಪದ ಮರಗಳ ರೆಂಬೆ ಕಟಾವು ಕಾರ್ಯ ನಡೆಸಿದೆ. ಆದರೂ ಉಜಿರೆಯಿಂದ ಧರ್ಮಸ್ಥಳ ಸಾಗುವ ರಸ್ತೆ, ಉಜಿರೆ ಬೆಳ್ತಂಗಡಿ, ಮುಂಡಾಜೆ ಚಾರ್ಮಾಡಿ ರಸ್ತೆಗಳಲ್ಲಿ ಬೃಹದಾಕಾರದ ಮರಗಳು ರಸ್ತೆಗೆ ವಾಲಿ ನಿಂತಿರುವುದು ಅಪಾಯವನ್ನು ಆಹ್ವಾನಿಸುವಂತಿದೆ.

ಭೂಗತ ವಿದ್ಯುತ್‌ ಕೇಬಲ್‌
ಮರಗಳಿರುವ ಪ್ರದೇಶದಲ್ಲೇ ವಿದ್ಯುತ್‌ ತಂತಿಗಳು ಹಾದುಹೋಗಿದ್ದು, ಮರ ಬಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವದಲ್ಲದೆ, ಅಪಾರ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಆದರೂ ಮೆಸ್ಕಾಂ ಭೂಗತ ವಿದ್ಯುತ್‌ ತಂತಿ ಅಳವಡಿಕೆಗೆ ಕ್ರಮ ಕೈಗೊಂಡಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

Advertisement

ಅರಣ್ಯ ಇಲಾಖೆಯಲ್ಲಿ ರಾತ್ರಿ ಹಾಗೂ ಹಗಲು ಪಾಳಿಯಲ್ಲಿ 7 ಜನ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಮರ ಕಟಾವಿನ 3 ಮೆಷಿನ್‌ ತರಿಸಲಾಗಿದೆ. ರಸ್ತೆಗೆ ಮರ ಬಿದ್ದು ಸಂಚಾರ ಸಮಸ್ಯೆಯಾದರೆ ತುರ್ತು ಸ್ಪಂದನೆಗೆ ಸಿಬಂದಿ ಸಹಕರಿಸಲಿದ್ದಾರೆ ಎಂದು ಅರಣ್ಯ ಇಲಾಖೆ ಸಿಬಂದಿ ತಿಳಿಸಿದ್ದಾರೆ.

 ಗೆಲ್ಲು ತೆರವಿಗೆ ಅಗತ್ಯ ಕ್ರಮ
ನಾವೂರು, ಕಿಲ್ಲೂರು ಸಹಿತ ರಸ್ತೆ ಅಂಚಿನಲ್ಲಿರುವ ಮರ ತೆರವಿಗೆ ಆದೇಶವಿದೆ. ಮೆಸ್ಕಾಂ ವಿದ್ಯುತ್‌ ತಂತಿ ತೆರವುಗೊಳಿಸಿದರೆ ರೆಂಬೆ ಕಟಾವಿಗೆ ಸಹಕಾರಿಯಾಗಲಿದೆ. ಅಪಾಯಕಾರಿ ಮರದ ಗೆಲ್ಲು ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
– ಸುಬ್ಬಯ್ಯ ನಾಯ್ಕ, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ

 ತಂತಿ ತೆರವು
ಮೆಸ್ಕಾಂನಿಂದ ಬಂಗಾಡಿ, ಮನ್ನಡ್ಕ, ನಾವೂರ ಗೇರುಕಟ್ಟೆ ಪ್ರದೇಶಗಳಲ್ಲಿ ತಂತಿಗಳು ಇದ್ದಲ್ಲಿ ಟ್ರೀ ಕಟ್ಟಿಂಗ್‌ ಕೆಲಸ ಮಾಡಲಾಗಿದೆ. ಮರ ತೆರವು ಇರುವಲ್ಲಿ ಅರಣ್ಯ ಇಲಾಖೆ ಮನವಿ ನೀಡಿದಲ್ಲಿ ತಂತಿ ತೆರವು ಮಾಡಿ ಅನುವು ಮಾಡಿಕೊಡಲಾಗುವುದು.
– ಶಿವಶಂಕರ್‌, ಎಇ ಮೆಸ್ಕಾಂ ಬೆಳ್ತಂಗಡಿ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next