Advertisement

ಬಜತ್ತೂರು: ಈ ಮಳೆಗಾಲದಲ್ಲೂ ದಿಗ್ಬಂಧನ?

10:33 PM May 06, 2019 | Team Udayavani |

ಉಪ್ಪಿನಂಗಡಿ: ಚತುಷ್ಪಥ ರಸ್ತೆ ಕಾಮಗಾರಿಯಿಂದ ಮಳೆಗಾಲದಲ್ಲಿ ದಿಗ್ಬಂಧನಕ್ಕೆ ಒಳಗಾಗಿದ್ದ ಬಜತ್ತೂರು ಗ್ರಾಮದ ನೀರಕಟ್ಟೆ ನಿವಾಸಿ ತಿಮ್ಮಪ್ಪ ಗೌಡ ಅವರ ಮನೆಯವರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹತ್ತು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಸ್ತೆ ವಿಸ್ತರಣೆ ವೇಳೆ ಬಾವಿ, ಕೃಷಿ, ಮರಗಳು ವಿಸ್ತರಣೆ ಕಾಮಗಾರಿ ಪಾಲಾಗಿದ್ದು, ಒಟ್ಟು ಒಂದು ಲಕ್ಷ ರೂ. ಪರಿಹಾರ ಒದಗಿತ್ತು. ಇದೇ ವೇಳೆ ಕೇವಲ 10 ಸೆಂಟ್ಸ್‌ ಜಾಗದಲ್ಲಿ ವಾಸದ ಮನೆ ಮಾತ್ರ ಉಳಿದುಕೊಂಡಿತ್ತು.

Advertisement

ಆವರಿಸಿತ್ತು ಮಳೆ ನೀರು
ಕಳೆದ ಮಳೆಗಾಲದಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ಇದೇ ಮನೆ ಸಮೀಪ ಚರಂಡಿ ನಿರ್ಮಿಸಲು ಲಕ್ಷಾಂತರ ರೂ. ವೆಚ್ಚದಲ್ಲಿ ತಡೆಗೋಡೆ ರಚಿಸಲಾಗಿತ್ತು. ಆದರೆ ಮಲೆನಾಡಿನ ಮಳೆಯ ಪ್ರಮಾಣದ ಅಂದಾಜೇ ಇಲ್ಲದೆ ನಿರ್ಮಿಸಿದ ತಡೆಗೋಡೆ ದಿಢೀರ್‌ ಮಳೆಗೆ ಕೊಚ್ಚಿ ಹೋಗಿ ಮಳೆನೀರು ಇದೇ ಮನೆ ಸಮೀಪ ಆವರಿಸಿತ್ತು. ಮಳೆಗಾಲ ಮುಗಿಯುವ ತನಕವೂ ಈ ಮನೆಯ ಜನರು ಮನೆಯಿಂದ ಹೊರಬರಲು ಅಸಾಧ್ಯವಾದ ಸ್ಥಿತಿ ಇತ್ತು. ಇದನ್ನು ಅರಿತ ತಿಮ್ಮಪ್ಪ ಗೌಡರ ಪುತ್ರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ ಬೆನ್ನಲ್ಲೇ ಹೆದ್ದಾರಿ ಇಲಾಖೆಯೊಂದಿಗೆ ಮಾತುಕತೆ ಮೂಲಕ ತತ್‌ಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ಬಂದಿತ್ತು.

ಇತ್ತ ಈ ಸಲದ ಮಳೆಗಾಲ ಆರಂಭವಾಗಲು ಕೇವಲ ಒಂದು ತಿಂಗಳು ಬಾಕಿ ಉಳಿದಿದ್ದರೂ ಆ ಮನೆಯವರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ನಡೆದೇ ಇಲ್ಲ. ಬದಲಿ ವ್ಯವಸ್ಥೆ ಆಗದಿದ್ದರೆ ಈ ಬಾರಿ ಮಳೆಗಾಲವನ್ನು ಕಳೆಯುವುದೇ ಹೇಗೆ ಎಂಬ ಚಿಂತೆ ಮನೆಯವರನ್ನು ಕಾಡುತ್ತಿದೆ.

ಮೂರು ಮನೆಗಳಿಗೆ ಅಪಾಯ
ಚರಂಡಿ ನಿರ್ಮಾಣಕ್ಕಾಗಿ ರಚಿಸಿದ ತಡೆಗೋಡೆಯನ್ನು ಸಂಪೂರ್ಣ ನೆಲಸಮ ಮಾಡಿದ್ದು, ಹೊಸದಾಗಿ ತಡೆಗೋಡೆ ರಚಿಸಬೇಕಷ್ಟೇ. ಆದರೆ, ಭಾರೀ ಗಾತ್ರದ ಚರಂಡಿ ಬಾಯಿ ತೆರೆದು ನಿಂತಿದೆ. ಈ ಬಾರಿ ಮಳೆ ಆರಂಭಗೊಂಡರೆ ತಿಮ್ಮಪ್ಪ ಗೌಡರ ಮನೆ ಸಹಿತ ಅಕ್ಕ-ಪಕ್ಕದ ಮೂರು ಮನೆಗಳು ಮುಳುಗಡೆಯಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ, ಹೆದ್ದಾರಿ ಇಲಾಖೆ ತತ್‌ಕ್ಷಣ ಎಚ್ಚೆತ್ತು ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

 ಗುತ್ತಿಗೆದಾರರೇ ಹೊಣೆ
ಕಳೆದ ವರ್ಷ ಮಳೆ ಪ್ರಮಾಣದಿಂದ ತಿಮ್ಮಪ್ಪ ಗೌಡರ ಮನೆ ಮಂದಿ ದಿಗ್ಬಂಧನಕ್ಕೆ ಒಳಗಾಗಿದ್ದರು. ಇದು ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆಯ ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆದಾರರಿಗೂ ತಿಳಿದಿದೆ. ಮನೆಯ ಮಾಲಕರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರೂ ಭರವಸೆ ಮಾತ್ರ ಈಡೇರಿಲ್ಲ. ಒಂದೊಮ್ಮೆ ಮಳೆಯಿಂದಾಗಿ ಮನೆ ಅಥವಾ ಜನರಿಗೆ ಹಾನಿ, ಅಪಾಯಗಳು ಸಂಭವಿಸಿದರೆ ಗುತ್ತಿಗೆದಾರರನ್ನೇ ಹೊಣೆ ಮಾಡುವ ಅನಿವಾರ್ಯತೆ ಇದೆ.
– ಸಂತೋಷ್‌ ಕುಮಾರ್‌, ಬಜತ್ತೂರು ಗ್ರಾ.ಪಂ. ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next