ಬೆಂಗಳೂರು/ಮಣಿಪಾಲ: ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕರಾವಳಿಯ ಬಹುತೇಕ ಎಲ್ಲೆಡೆ, ಉತ್ತರ ಒಳನಾಡಿನ ಹಲವೆಡೆ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಯಿತು. ಗೋಕರ್ಣದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 14 ಸೆಂ.ಮೀ. ಮಳೆ ಸುರಿಯಿತು.
ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು(ಸೆಂ.ಮೀ.ಗಳಲ್ಲಿ): ಹೊನ್ನಾವರ, ಕಾರವಾರ, ಮಂಕಿ ತಲಾ 13, ಅಂಕೋಲಾ 11, ಕುಮಟಾ 10, ಭಟ್ಕಳ, ಕದ್ರಾ ತಲಾ 9, ಗೇರುಸೊಪ್ಪಾ 6, ಪುತ್ತೂರು, ಕಾರ್ಕಳ, ಕುಂದಾಪುರ, ಕಿರವತ್ತಿ ತಲಾ 5, ಬಂಟ್ವಾಳ, ಕೋಟ, ಸೈದಾಪುರ, ಆಗುಂಬೆ ತಲಾ 4, ಮಾಣಿ, ಕೊಲ್ಲೂರು, ಕೃಷ್ಣರಾಜ ಸಾಗರ, ದಾವಣಗೆರೆ,
ಹರಪನಹಳ್ಳಿ ತಲಾ 3, ಪಣಂಬೂರು, ಮೂಡುಬಿದಿರೆ, ಬೆಳ್ತಂಗಡಿ, ಯಲ್ಲಾಪುರ, ಕಲಘಟಗಿ, ಹಿರೆಕೆರೂರು, ಸಿಂಧನೂರು, ಭಾಗಮಂಡಲ, ಸಾಗರ, ತ್ಯಾಗರ್ತಿ, ಹೊಸನಗರ, ಹುಂಚದಕಟ್ಟೆ, ಕಮ್ಮರಡಿ, ನರಸಿಂಹರಾಜಪುರ ತಲಾ 2, ಧರ್ಮಸ್ಥಳ, ಸುಬ್ರಹ್ಮಣ್ಯ, ಸುಳ್ಯ, ಬನವಾಸಿ, ಶಿಕಾರಿಪುರ, ಶೃಂಗೇರಿ, ನೆಲಮಂಗಲ, ಚನ್ನಗಿರಿ, ರಾಮಗಿರಿ, ಬರಗೂರು, ಮಾಗಡಿ, ಹಡಗಲಿ ತಲಾ 1 ಸೆಂ.ಮೀ.ಮಳೆಯಾಗಿದೆ.
ಬುಧವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಯಾಗುವ ಸಂಭವ: ಕರ್ನಾಟಕ ಮತ್ತು ಕೇರಳ ಕರಾವಳಿಯಿಂದಾಚೆ ಅರಬೀ ಸಮುದ್ರದಲ್ಲಿ ಕೆಲವು ದಿನಗಳಿಂದ ಸೃಷ್ಟಿಯಾಗಿರುವ ಮಳೆ ಮೋಡಗಳ ಒಟ್ಟುಗೂಡುವಿಕೆಗೆ ಅನುಕೂಲಕರ ವಾತಾವರಣ ಮುಂದುವರಿದಿದೆ. ಇದೇವೇಳೆ ಕರ್ನಾಟಕ ಕರಾವಳಿಯಿಂದ ಸುಮಾರು 5.8 ಕಿ.ಮೀ. ದೂರ ಪೂರ್ವ ಮಧ್ಯ ಅರಬೀ ಸಮುದ್ರದಲ್ಲಿ ಸುಳಿಗಾಳಿ ಉಂಟಾಗಿದೆ.
ಈ ಎರಡೂ ವಿದ್ಯಮಾನಗಳಿಂದಾಗಿ ಮುಂದಿನ ಐದಾರು ದಿನಗಳ ಕಾಲ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಆಸುಪಾಸಿನ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಈ ಸಂಬಂಧ ಜು.19ರ ವರೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇದೇವೇಳೆ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿಯೂ ಬೀಸಲಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.