Advertisement

ಹೈಟೆಕ್‌ ಆಗಲಿದೆ ಯಶವಂತಪುರ ನಿಲ್ದಾಣ

06:23 AM Feb 17, 2019 | Team Udayavani |

ಬೆಂಗಳೂರು: ಯಶವಂತಪುರ-ದೇವನಹಳ್ಳಿ ನಡುವಿನ ಡೆಮು ರೈಲು (ಸಂಖ್ಯೆ 06595/ 06596) ಸೇವೆ ಇನ್ಮುಂದೆ ಚಿಕ್ಕಬಳ್ಳಾಪುರದವರೆಗೆ ಸಂಚರಿಸಲಿದೆ. ಇದರೊಂದಿಗೆ ಯಶವಂತಪುರ ರೈಲು ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ ಸಿಗಲಿದೆ.

Advertisement

ಡೆಮು ರೈಲಿನ ಪ್ರಾಯೋಗಿಕ ಸೇವೆಗೆ ಶನಿವಾರ ಚಾಲನೆ ನೀಡಲಾಯಿತು. ಈ ವಿಸ್ತರಿಸಿದ ಮಾರ್ಗವು ಆವತಿಹಳ್ಳಿ, ವೆಂಕಟಗಿರಿ ಕೋಟೆ, ನಂದಿಬೆಟ್ಟ ನಿಲ್ದಾಣದ ಮೂಲಕ ಚಿಕ್ಕಬಳ್ಳಾಪುರ ತಲುಪಲಿದೆ. ಇದು ಬಹುದಿನಗಳ ಬೇಡಿಕೆ ಆಗಿತ್ತು. ಇದರಿಂದ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು, ಸುತ್ತಲಿನ ರೈತರು ತಮ್ಮ ಉತ್ಪನ್ನಗಳನ್ನು ಯಶವಂತಪುರ, ಯಲಹಂಕ ಮಾರುಕಟ್ಟೆಗಳಿಗೆ ಸಾಗಿಸಲು ಅನುಕೂಲ ಆಗಲಿದೆ. 

ಈ ರೈಲು ನಿತ್ಯ ದೇವನಹಳ್ಳಿ ನಿಲ್ದಾಣದಿಂದ ಬೆಳಗ್ಗೆ 11.10ಕ್ಕೆ ಹೊರಟು, ಮಧ್ಯಾಹ್ನ 12.15ಕ್ಕೆ ಚಿಕ್ಕಬಳ್ಳಾಪುರ ತಲುಪಲಿದೆ. ಅದೇ ರೀತಿ, ಮಧ್ಯಾಹ್ನ 12.40ಕ್ಕೆ ಚಿಕ್ಕಬಳ್ಳಾಪುರದಿಂದ ಹೊರಟು, 1.08ಕ್ಕೆ ದೇವನಹಳ್ಳಿ ತಲುಪುವುದು ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಕಚೇರಿ ಮಾಹಿತಿ ನೀಡಿದೆ. 

ಯಶವಂತಪುರ ನಿಲ್ದಾಣ ಮರುಅಭಿವೃದ್ಧಿ: ಯಶವಂತಪುರ ರೈಲು ನಿಲ್ದಾಣವನ್ನು 16.45 ಕೋಟಿ ರೂ. ವೆಚ್ಚದಲ್ಲಿ ಮರುಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದರಡಿ ಮೆಟ್ರೋಗೆ ಸಂಪರ್ಕ ಸೇತುವೆ, ಸೆಲ್ಫಿ ಸ್ಥಳ, ಸುಗಮ ಸಂಚಾರಕ್ಕಾಗಿ ಕಾರು, ಆಟೋ, ಬಸ್‌, ದ್ವಿಚಕ್ರ ವಾಹನಗಳಿಗೆ ನಿರ್ದಿಷ್ಟ ಲೈನ್‌ಗಳು, ಪ್ಲಾಟ್‌ಫಾರ್ಮ್ ಅಭಿವೃದ್ಧಿ, ಕಾಂಕ್ರೀಟ್‌ ಹಾಸಿನ ಹಳಿಗಳ ಬದಿಯ ಚರಂಡಿಗಳಿಗೆ ಹೊದಿಕೆ, ಕಸ ವಿಲೇವಾರಿ ಹೆಚ್ಚುವರಿ ಸೌಲಭ್ಯ, ಚಾಲನಾ ಹಾದಿ, ಸಾರ್ವಜನಿಕ ರಸ್ತೆ, ಸೌಂದಯೀìಕರಣಗೊಂಡ ಪಾದಚಾರಿ ರಸ್ತೆ, ಪಾದಚಾರಿ ಮೇಲ್ಸೇತುವೆ, ಬಸ್‌ ನಿಲ್ದಾಣ ಬರಲಿವೆ.

ಕೆಳಸೇತುವೆಗಳ ಲೋಕಾರ್ಪಣೆ: ಬಂಗಾರಪೇಟೆ-ಮಾರಿಕುಪ್ಪಂ ಮತ್ತು ಚಿಕ್ಕಬಳ್ಳಾಪುರ ಕೋಲಾರ ನಡುವೆ ಬರುವ ಆರು ರೈಲ್ವೆ ಕೆಳಸೇತುವೆಗಳ ಲೋಕಾರ್ಪಣೆ ಮಾಡಲಾಯಿತು. ಬಂಗಾರಪೇಟೆ ಮತ್ತು ಬಿಎಎಂಎಲ್‌ ನಿಲ್ದಾಣಗಳ ಬಳಿ ಕೆಳಸೇತುವೆ ನಂ.4 ಮತ್ತು 4ಎ, ಕೋರಮಂಡಲ್‌ ಹಾಗೂ ಊರುಗುಂ ಕೆಳಸೇತುವೆ ನಂ.5, ಚಾಂಪಿಯನ್‌ ಹಾಗೂ ಹುಣಸೇನಹಳ್ಳಿಯ ಕೆಳಸೇತುವೆ ನಂ.10 ಹಾಗೂ ಸಿದ್ದಘಟ್ಟ ಮತ್ತು ಹುಣಸೇನಹಳ್ಳಿ ನಡುವೆ ನಂ.82ರ ಕೆಳಸೇತುವೆಯನ್ನು ಸೇವೆಗೆ ಮುಕ್ತಗೊಳಿಸಲಾಯಿತು. 

Advertisement

ಬೆಂಗಳೂರು ವಿಭಾಗದಲ್ಲಿ ಬರುವ 95 ನಿಲ್ದಾಣಗಳಲ್ಲಿ ದಿವ್ಯಾಂಗರಿಗಾಗಿ 99 ಶೌಚಾಲಯಗಳನ್ನು ನಿರ್ಮಿಸಿದ್ದು, ಅವುಗಳ ಲೋಕಾರ್ಪಣೆ ಮಾಡಲಾಯಿತು. ಸಿಟಿ ರೈಲು ನಿಲ್ದಾಣದ ನಂ.9/10ರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣಕ್ಕೆ ಪಾದಚಾರಿ ಮೇಲ್ಸೇತುವೆ ಸಂಪರ್ಕ ಕಲ್ಪಿಸಲಾಗಿದೆ. ರೈಲು ನಿಲ್ದಾಣ ಪ್ರವೇಶಿಸುವ ಮುನ್ನ ಟಿಕೆಟ್‌ ಖರೀದಿಗೆ ಈ ಮೇಲ್ಸೇತುವೆಯಲ್ಲಿ ಕೌಂಟರ್‌ ಒಂದನ್ನು ತೆರೆಯಲಾಗಿದೆ. 

ನಗರದ 80 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ಆಟೋಮ್ಯಾಟಿಕ್‌ ಸಿಗ್ನಲಿಂಗ್‌ ವ್ಯವಸ್ಥೆ ಅಳವಡಿಸಲು ಉದ್ದೇಶಿಸಿದ್ದು, ಈ ಪೈಕಿ ಮೊದಲ ಹಂತದಲ್ಲಿ 20 ಕಿ.ಮೀ. ಉದ್ದದ ಬೆಂಗಳೂರು ಸಿಟಿ-ಕಂಟೋನ್‌ಮೆಂಟ್‌ ರೈಲು ನಿಲ್ದಾಣ-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವೆ ಬಹುತೇಕ ಪೂರ್ಣಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಬೆಂಗಳೂರಿನಿಂದ ಹೊಸೂರು, ತುಮಕೂರು, ಮೈಸೂರು, ಇಂದುಪುರ ಮತ್ತಿತರ ಮಾರ್ಗಗಳಲ್ಲೂ ಆಟೋಮ್ಯಾಟಿಕ್‌ ಸಿಗ್ನಲಿಂಗ್‌ ಅಳವಡಿಸಲು ಉದ್ದೇಶಿಸಿದ್ದು, ಉಪನಗರ ರೈಲು ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next