Advertisement

ಮಂಗಳೂರಿಗೂ ಬರಲಿ ಹೈಕೋರ್ಟ್‌ ಸಂಚಾರಿ ಪೀಠ

11:19 AM Jun 02, 2019 | Sriram |

ಮಂಗಳೂರಿನ ಜನತೆ ಕಾನೂನು ಸಂಬಂಧಿಸಿ ಕೆಲಸಗಳಿಗೆ ದೂರದ ಬೆಂಗಳೂರಿಗೆ ಹೋಗಬೇಕಾಗಿರುವುದು ಸಮಸ್ಯೆ. ಹೈಕೋರ್ಟ್‌ ಸಂಚಾರಿ ಪೀಠ ಈಗಾಗಲೇ ಧಾರಾವಾಡ ಮತ್ತು ಕಲ್ಬುರ್ಗಿಗಳಲ್ಲಿ ಸ್ಥಾಪನೆಯಾಗಿದೆ. ಆದರೆ ಈ ಪೀಠವಿನ್ನೂ ಮಂಗಳೂರಿಗೆ ಆಗಮಿಸಿಲ್ಲ. ಕರಾವಳಿ ಭಾಗದಲ್ಲೂ ಈ ಪೀಠ ಸ್ಥಾಪನೆಯಾಗಬೇಕೆಂಬುದು ಇಲ್ಲಿನ ಜನರ ಬಹು ದಿನಗಳ ಬೇಡಿಕೆ. ಒಂದು ವೇಳೆ ಈ ಭಾಗದಲ್ಲಿ ಸಂಚಾರಿ ಪೀಠ ಆರಂಭವಾದರೇ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದ 5 ಜಿಲ್ಲೆಗಳಿಗೆ ಸಹಕಾರಿಯಾಗಲಿದೆ ಎಂಬುದು ನ್ಯಾಯವಾದಿಗಳ ಲೆಕ್ಕಾಚಾರ.

Advertisement

ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಮಂಗಳೂರಿನಲ್ಲಿ ಸ್ಥಾಪನೆಯಾಗಬೇಕು. ಇದು ಕರಾವಳಿ ಭಾಗದ ಜನರ, ನ್ಯಾಯವಾದಿಗಳ ಹಲವು ವರ್ಷದ ಬೇಡಿಕೆ. ದೂರದ ಬೆಂಗಳೂರಿಗೆ ಹೋಗಲು ಸಾಧ್ಯವಾಗದೆ ಆರ್ಥಿಕ ಅಶಕ್ತರ ಪಾಲಿಗೆ ಮಂಗಳೂರಿನಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ವರದಾನ ಕೂಡ. ಆಡಳಿತ ವ್ಯವಸ್ಥೆಯ ವಿಕೇಂದ್ರೀಕರಣದ ನಿಟ್ಟಿನಲ್ಲೂ ಇದು ಪೂರಕ ಕ್ರಮವಾಗಲಿದೆ.

ಉತ್ತರ ಕರ್ನಾಟಕದ ಎರಡು ಕಡೆ ಅಂದರೆ ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ಈಗಾಗಲೇ ಹೈಕೋರ್ಟ್‌ ಸಂಚಾರಿ ಪೀಠ ಕಾರ್ಯಾಚರಿಸುತ್ತಿದೆ. ಇದೇ ಹಾದಿಯಲ್ಲಿ ಮಂಗಳೂರಿನಲ್ಲೂ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪಿಸಬೇಕು ಎಂಬ ಬೇಡಿಕೆ ಹುಟ್ಟಿಕೊಂಡಿತ್ತು. ಜತೆಗೆ ಹಲವು ವರ್ಷಗಳಿಂದ ಆಗಾಗ ಇದು ಪ್ರಸ್ತಾವನೆಯಾಗುತ್ತಲೇ ಬರುತ್ತಿವೆ. ನ್ಯಾಯವಾದಿಗಳ ಸಂಘಟನೆಗಳು, ಸಾಮಾಜಿಕ ಸಂಘಟನೆಗಳಿಂದ ನಿರಂತರ ಆಗ್ರಹ ವ್ಯಕ್ತವಾಗಿವೆ. ಇದೀಗ ಬೇಡಿಕೆ ಹೋರಾಟದ ಹಾದಿಯನ್ನು ಹಿಡಿಯುವತ್ತ ಸಿದ್ದತೆಗಳು ನಡೆಯುತ್ತಿವೆ.

ಕೆಲವು ವರ್ಷಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ಜರಗಿದ್ದ ದ.ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವಕೀಲರ ಸಮಾವೇಶದಲ್ಲಿ ಮಂಗಳೂರಿನಲ್ಲಿ ರಾಜ್ಯ ಹೈಕೋರ್ಟ್‌ ಸಂಚಾರಿ ಪೀಠವನ್ನು ಸ್ಥಾಪಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ಇದಕ್ಕಾಗಿ ಹೋರಾಟವನ್ನು ತೀವ್ರಗೊಳಿಸುವ ಮುನ್ಸೂಚನೆಯನ್ನು ಈ ಭಾಗದ ನ್ಯಾಯವಾದಿ ಸಮೂಹ ನೀಡಿತ್ತು. ಇತ್ತೀಚೆಗೆ ಸಾಮಾಜಿಕ ಸಂಘಟನೆಗಳ ಒಕ್ಕೂಟಗಳು ಕೂಡ ಮಂಗಳೂರಿನಲ್ಲಿ ಹೈಕೋರ್ಟ್‌ ಸಂಚಾರಿ ಪೀಠದ ಬೇಡಿಕೆಯನ್ನು ಇಟ್ಟಿದ್ದು ಈ ನಿಟ್ಟಿನಲ್ಲಿ ಪೂರಕ ಸ್ಪಂದನೆಗಳು ದೊರೆಯದಿದ್ದರೆ ಹೋರಾಟವನ್ನು ಆರಂಭಿಸುವುದಾಗಿ ಹೇಳಿವೆ.

5 ಜಿಲ್ಲೆಗಳಿಗೆ ಸಹಕಾರಿ
ಮಂಗಳೂರಿನಲ್ಲಿ ಹೈಕೋರ್ಟ್‌ ಸಂಚಾರಿಪೀಠ ಸ್ಥಾಪನೆಯಾದರೆ ಕರಾವಳಿಯ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಜನತೆಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ನ್ಯಾಯವಾದಿಗಳು ಹಾಗೂ ಜನರಿಂದ ವ್ಯಕ್ತವಾಗಿದೆ. ಈ ಭಾಗದ ಜನರಿಗೆ ಬೆಂಗಳೂರು ಹೋಲಿಸಿದರೆ ಮಂಗಳೂರು ಹತ್ತಿರವಾಗಿದೆ . ಬೆಂಗಳೂರು ಚಿಕ್ಕಮಗಳೂರಿನಿಂದ 240 ಕಿ.ಮಿ, ಸಿರ್ಸಿಯಿಂದ 405 ಕಿ.ಮೀ. ಉಡುಪಿಯಿಂದ 403 ಕಿ.ಮೀ., ಮಂಗಳೂರಿನಿಂದ 352 ಕಿ.ಮೀ., ( ರೈಲ್ನಲ್ಲಿ 446 ಕಿ.ಮೀ.) ಮಡಿಕೇರಿಯಿಂದ 249 ಕಿ.ಮೀ. ದೂರವಿದೆ. ಆದರೆ ಮಂಗಳೂರು ನಗರ ಚಿಕ್ಕಮಗಳೂರಿನಿಂದ 150 ಕಿ.ಮೀ., ಸಿರ್ಸಿಯಿಂದ 262 ಕಿ.ಮೀ. , ಮಡಿಕೇರಿಯಿಂದ 137 ಕಿ.ಮೀ. ದೂರವಿದೆ. ಇದನ್ನು ಅವಲೋಕಿಸಿದಾಗ ಮಂಗಳೂರು ನಿಕಟವಾಗಿರುತ್ತದೆ ಮಾತ್ರವಲ್ಲದೆ ವೆಚ್ಚದ ದೃಷ್ಟಿಯಿಂದಲೂ ಕಡಿಮೆ.ಆದುದರಿಂದ ಮಂಗಳೂರಿನಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆ ಈ 5 ಜಿಲ್ಲೆಗಳ ಜನರ ಪಾಲಿಗೆ ಹೆಚ್ಚು ಪ್ರಯೋಜನಕಾರಿ ಎಂಬುದು ಬೇಡಿಕೆಗೆ ಹಿಂದಿರುವ ಮಹತ್ವದ ಪ್ರತಿಪಾದನೆ.

Advertisement

ಅನುಕೂಲಗಳೇನು?
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಭಾಗದ ಜನತೆ ಹೈಕೋರ್ಟ್‌ನ ನ್ಯಾಯದ ಸೌಲಭ್ಯ ಪಡೆಯಲು ದೂರದ ಬೆಂಗಳೂರನ್ನು ಅವಲಂಬಿಸಿದ್ದಾರೆ. ಕರಾವಳಿ ಭಾಗದ ಜನರಿಗೆ ಅದರಲ್ಲೂ ವಿಶೇಷವಾಗಿ ಬಡ ಜನರಿಗೆ ದೂರದ ಬೆಂಗಳೂರಿಗೆ ನ್ಯಾಯವನ್ನು ಅರಸಿ ಹೋಗುವುದು ಸುಲಭದ ಮಾತಲ್ಲ. ಯಾವುದೇ ವ್ಯಾಜ್ಯ ನಿಮಿತ್ತ ಬೆಂಗಳೂರಿಗೆ ಹೋಗಬೇಕಿದ್ದರೆ ಪ್ರಯಾಣ ಖರ್ಚು, ವಕೀಲರ ಖರ್ಚು ಉಳಿದುಕೊಳ್ಳುವ ಖರ್ಚು ಮತ್ತು ನ್ಯಾಯಾಲಯದ ಇತರ ಖರ್ಚನ್ನು ನಿಭಾಯಿಸುವುದು ಜನಸಾಮಾನ್ಯರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಹೊರೆಯಾಗುತ್ತದೆ. ಇದರಿಂದಾಗಿ ಹೈಕೋರ್ಟ್‌ನ್ನು ಸಂಪರ್ಕಿಸಲು ಸಾಧ್ಯವಾಗದೆ ನ್ಯಾಯ ಪಡೆಯಲಾಗದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದುದರಿಂದ ಈ ಪ್ರದೇಶದ ಅತ್ಯಂತ ಕಡುಬಡವರು ಕೂಡ ಹೈಕೋರ್ಟ್‌ನಿಂದ ನ್ಯಾಯ ಪಡೆಯುವಂತಾಗಲು ಮಂಗಳೂರಿನಲ್ಲಿ ಸಂಚಾರಿ ಪೀಠ ಪ್ರಾರಂಭಿಸುವುದು ಅತೀ ಸೂಕ್ತವಾಗಿರುತ್ತದೆ ಎನ್ನುವುದು ಕಕ್ಷಿದಾರರು ಅಭಿಮತ.

ಸಂಚಾರಿ ಪೀಠ ಸ್ಥಾಪನೆಗೆ ಹೋರಾಟ ಅಗತ್ಯ

ಮಂಗಳೂರಿನಲ್ಲಿ ಹೈಕೋರ್ಟ್‌ ನ ಸಂಚಾರಿ ಪೀಠದ ಆವಶ್ಯಕತೆ ಇದೆ. ಕರಾವಳಿಯ 3 ಜಿಲ್ಲೆಗಳು ಹಾಗೂ ಪಕ್ಕದ ಕೊಡಗು, ಚಿಕ್ಕ್ಕಮಗಳೂರು ಸೇರಿದಂತೆ 5 ಜಿಲ್ಲೆಗಳಿಂದ ರಾಜ್ಯ ಹೈಕೋರ್ಟ್‌ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವ್ಯಾಜ್ಯಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳ ಎಲ್ಲ ವಕೀಲರ ಸಂಘಗಳು ಒಟ್ಟು ಸೇರಿ ಒಕ್ಕೂಟ ರಚಿಸಿಕೊಂಡು ಸಂಚಾರಿ ಪೀಠ ಸ್ಥಾಪನೆಯಾಗುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಸುವುದು ಅಗತ್ಯವಿದೆ.ಜತೆಗೆ 5 ಜಿಲ್ಲೆಗಳಿಂದ ರಾಜ್ಯ ಹೈಕೋರ್ಟ್‌ಗೆ ಸಲ್ಲಿಕೆಯಾಗುವ ವ್ಯಾಜ್ಯಗಳ ಅಂಕಿಅಂಶಗಳ ಡಾಟಾವನ್ನು ಕೂಡ ಸಂಗ್ರಹಿಸಬೇಕು. ನನ್ನ ಪ್ರಕಾರ ಸಂಚಾರಿ ಪೀಠ ಸ್ಥಾಪನೆಗೆ ಅವಶ್ಯವಿರುವಷ್ಟು ವ್ಯಾಜ್ಯಗಳು ಈ 5 ಜಿಲ್ಲೆಗಳಲ್ಲಿವೆ.
– ಎಂ.ಆರ್‌. ಬಲ್ಲಾಳ್‌, ಅಧ್ಯಕ್ಷರು, ಮಂಗಳೂರು ವಕೀಲರ ಸಂಘ

ಮಂಗಳೂರು ನಿಕಟ

·ಚಿಕ್ಕಮಗಳೂರಿನಿಂದ ಬೆಂಗಳೂರು 240 ಕಿ.ಮೀ.; ಮಂಗಳೂರಿಗೆ 150 ಕಿ.ಮೀ. ·ಶಿರಸಿ: ಬೆಂಗಳೂರು-405 ಕಿ.ಮೀ.ಮಂಗಳೂರು-262 ಕಿ.ಮೀ.·ಮಡಿಕೇರಿ: ಬೆಂಗಳೂರು- 249 ಕಿ.ಮೀ. ಮಂಗಳೂರು-137 ಕಿ.ಮೀ.·ಉಡುಪಿ: ಬೆಂಗಳೂರು -403ಕಿ.ಮೀ. ಮಂಗಳೂರು: 50 ಕಿ.ಮೀ.
-ಕೇಶವ ಕುಂದರ್‌
Advertisement

Udayavani is now on Telegram. Click here to join our channel and stay updated with the latest news.

Next