ಬೆಂಗಳೂರು: ಐದು ವರ್ಷದ ಕಾನೂನು ಪದವಿಯ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆಫ್ ಲೈನ್ ಮೂಲಕ ನಡೆಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹೊರಡಿಸಿದ್ದ ಸುತ್ತೋಲೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಕಾನೂನು ವಿವಿ ಡಿ.1ರಂದು ಹೊರಡಿಸಿದ ಸುತ್ತೋಲೆ ರದ್ದು ಕೋರಿ ಕೆ.ಪಿ. ಪ್ರಭುದೇವ್ ಸೇರಿ ಹಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತು.
ಸಾಕಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗೆ ಹಾಜರಾಗಲು ಲ್ಯಾಪ್‌ಟಾಪ್, ಡೆಸ್ಕ್ಟಾಪ್ ಮತ್ತು ಇಂಟರ್‌ನೆಟ್ ಸೇರಿ ಇತರೆ ಅಗತ್ಯ ಸೌಲಭ್ಯಗಳು ಇರಲಿಲ್ಲ. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಶಿಕ್ಷಣ ದೊರೆತಿಲ್ಲ. ಇದೇ ಕಾರಣಕ್ಕೆ ಮೂರು ವರ್ಷದ ಕಾನೂನು ಪದವಿಯ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರಿಕ್ಷೆ ನಡೆಸಲು ವಿಶ್ವವಿದ್ಯಾಲಯ ಹೊರಡಿಸಿದ ಅಧಿಸೂಚನೆಯನ್ನು ರದ್ದುಪಡಿಸಿ 2021ರ ಡಿ.14ರಂದು ಧಾರವಾಡ ಹೈಕೋರ್ಟ್ ಪೀಠ ಆದೇಶಿಸಿದೆ. ಅದೇ ಮಾದರಿಯಲ್ಲಿ ಐದು ವರ್ಷದ ಕಾನೂನು ಪದವಿಯ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯನ್ನು ರದ್ದುಪಡಿಸಬೇಕು. ಐದು ಮತ್ತು ಮೂರು ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳು ನಡುವೆ ತಾರತಮ್ಯ ಮಾಡಬಾರದು ಎಂದು ಅರ್ಜಿದಾರರು ಮನವಿ ಮಾಡಿದರು.
ಕಾನೂನು ವಿವಿ ಪರ ವಕೀಲರು ವಾದ ಮಂಡಿಸಿ, ಡಿ.15ರಿಂದ ಪರೀಕ್ಷೆ ಆರಂಭವಾಗಿರುವ ಪರೀಕ್ಷೆಗೆ ಶೇ.70ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪರೀಕ್ಷೆ ನಡೆಸದಿದ್ದರೆ ವಿದ್ಯಾರ್ಥಿಗಳ ಪದವಿಯನ್ನು ಭಾರತೀಯ ವಕೀಲರ ಪರಿಷತ್ ಪರಿಗಣಿಸುವುದಿಲ್ಲ. ಕಾಲೇಜುಗಳು ನಡೆಸಿರುವ ಆನ್‌ಲೈನ್ ತರಗತಿಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಪ್ರೀಂ ಕೊರ್ಟ್ ತೀರ್ಪು ಆಧರಿಸಿ ಯಾವುದಾದರೂ ವಿಧಾನದಲ್ಲಿ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿ ಭಾರತೀಯ ವಕೀಲರ ಪರಿಷತ್ ಸುತ್ತೋಲೆ ಹೊರಡಿಸಿತ್ತು. ಧಾರವಾಡ ಹೈಕೋರ್ಟ್ ಪೀಠವು ಭಾರತೀಯ ವಕೀಲರ ಪರಿಷತ್ ಸುತ್ತೋಲೆಯನ್ನು ರದ್ದುಪಡಿಸಿಲ್ಲ. ಬದಲಿಗೆ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಹೇಳಿದೆ. ಹೀಗಾಗಿ, ಯಾವುದಾದರೂ ವಿಧಾನದಲ್ಲಿ ವಿಶ್ವವಿದ್ಯಾಲಯ ಪರೀಕ್ಷೆ ನಡೆಸಬೇಕಿದೆ ಎಂದು ತಿಳಿಸಿದ್ದರು.
ವಿವಿ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ ಈ ಆದೇಶ ಮಾಡಿದೆ.