ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ 2013ರಲ್ಲಿ ರೂಪಿಸಿರುವ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತಿದೆಯೇ ಅಥವಾ ಮುಖ್ಯಮಂತ್ರಿಗಳ ಆದೇಶ ಪಾಲಿಸುತ್ತಿದೆಯೇ ? ಎಂಬುದನ್ನು ಸ್ಪಷ್ಟಪಡಿಸುವಂತೆ ರಾಜ್ಯದ ಅಡ್ವೋಕೇಟ್ ಜನರಲ್‌ಗೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಅಲ್ಲದೆ, ಮುಖ್ಯಮಂತ್ರಿಗಳ ಶಿಫಾರಸು ಮೇರೆಗೆ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ವಿಭಾಗದ ಸಬ್ ರಿಜಿಸ್ಟ್ರಾರ್ ಹುದ್ದೆಯನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಶಿಫಾರಸು ಮೇರೆಗೆ ತಮ್ಮ ಹುದ್ದೆಗೆ ಮತ್ತೂಬ್ಬ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ದಾಸನಪುರ ವಿಭಾಗದ ಸಬ್ ರಿಜಿಸ್ಟ್ರಾರ್ ಆಗಿದ್ದ ಎಸ್.ದಿನೇಶ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಯಂತ್ ಪಟೇಲ್ ಮತ್ತು ನ್ಯಾ.ಎ.ವಿ.ವೇಣುಗೋಪಾಲ ಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ದಾಸನಪುರ ವಿಭಾಗದ ಸಬ್ ರಿಜಿಸ್ಟ್ರಾರ್ ಹುದ್ದೆಗೆ ಅರ್ಜಿದಾರರಾದ ಎಸ್.ದಿನೇಶ್ ಮತ್ತು ಲಲಿತಾ ಅಮೃತೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಲಲಿತಾ ಅಮೃತೇಶ್ ಈ ವರ್ಗಾವಣೆಯಲ್ಲಿ ರಾಜಕೀಯ ಒತ್ತಡವಿದ್ದು, ಸರ್ಕಾರಿ ನೌಕರರ ವರ್ಗಾವಣೆ ನಿಯಮಗಳು ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ. ಹೀಗಾಗಿ, ನ್ಯಾಯಾಲಯವು ಈ ಹುದ್ದೆಯನ್ನು ಅಮಾನತ್ತಿನಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿದೆ.
ಪ್ರಕರಣವೇನು?:
ಸಬ್ ರಿಜಿಸ್ಟ್ರಾರ್ ಆದ ಎಸ್ ದಿನೇಶ್ ಅವರನ್ನು 2016ರ ಜೂ.10ರಂದು ನಾಗರಭಾವಿ ಉಪ ನೋಂದಣಿ ಕಚೇರಿಯಿಂದ ನಗರದ ಕೇಂದ್ರ ಉಪ ನೋಂದಣಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಅವರನ್ನು ದಾಸನಪುರ ಉಪ ನೋಂದಣಿ ಕಚೇರಿಗೆ ವರ್ಗಾಯಿಸಲಾಗಿತ್ತು. ಸಾಲದೇ ದಿನೇಶ್ ಸ್ಥಾನಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ
ನೋಂದಣಾಧಿಕಾರಿ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಲಲಿತಾ ಅಮೃತೇಶ್ ಅವರನ್ನು ವರ್ಗಾಯಿಸಲಾಗಿತ್ತು.
ಇದರಿಂದ ದಿನೇಶ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ(ಕೆಎಟಿ) ಮೆಟ್ಟಿಲೇರಿದ್ದರು. ಕೆಎಟಿ ಅವರ ಅರ್ಜಿ ವಜಾಗೊಳಿಸಿತ್ತು. ಹೀಗಾಗಿ, ದಿನೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.