Advertisement

ದಯಾಳ್‌ಗೆ ಕಾಡಿದ ನಾಯಕಿಯ “ರಂಗ’ಪ್ರವೇಶ

10:05 AM Oct 28, 2019 | Lakshmi GovindaRaju |

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದರ ಹಿಂದೊಂದರಂತೆ ಸಾಲು ಸಾಲು ಚಿತ್ರಗಳಲ್ಲಿ ಬಿಝಿಯಾಗಿರುವ ನಿರ್ದೇಶಕರಲ್ಲಿ ದಯಾಳ್‌ ಪದ್ಮನಾಭನ್‌ ಹೆಸರು ಮೊದಲಿಗೆ ನಿಲ್ಲುತ್ತದೆ. ಸದ್ಯ ದಯಾಳ್‌ ಪದ್ಮನಾಭನ್‌ ತಮ್ಮ ಬಹುನಿರೀಕ್ಷಿತ “ರಂಗನಾಯಕಿ’ ಚಿತ್ರವನ್ನು ತೆರೆಗೆ ತರೋದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಇದರ ನಡುವೆಯೇ ಲೂಸ್‌ಮಾದ ಯೋಗಿ ಅಭಿನಯದಲ್ಲಿ “ಒಂಬತ್ತನೇ ದಿಕ್ಕು’ ಚಿತ್ರವನ್ನೂ ಶುರು ಮಾಡಿದ್ದಾರೆ.

Advertisement

ಒಟ್ಟಾರೆ ಬಿಡುವಿಲ್ಲದೆ ಸಿನಿಮಾ ಕೆಲಸಗಳಲ್ಲಿ ತೊಡಗಿರುವ ದಯಾಳ್‌ಗೆ ಈ ಬಾರಿ “ರಂಗನಾಯಕಿ’ ಡಬಲ್‌ ಖುಷಿಗೆ ಕಾರಣವಾಗಿದ್ದಾಳೆ. ಅದು ಹೇಗೆ ಅನ್ನೋದನ್ನ ದಯಾಳ್‌ ಅವರೆ ವಿವರಿಸುತ್ತಿದ್ದಾರೆ. “ನಾನು ಇಲ್ಲಿಯವರೆಗೆ ಮಾಡಿರುವ ಚಿತ್ರಗಳು ಒಂದು ಶೈಲಿಯಲ್ಲಿದ್ದಾರೆ, “ರಂಗನಾಯಕಿ’ ಬೇರೆಯದ್ದೇ ಶೈಲಿಯಲ್ಲಿದೆ. ನನ್ನ ಪ್ರಕಾರ ಇದೊಂದು ಪ್ರಯೋಗಾತ್ಮಕ ಚಿತ್ರ. ನನಗೆ ತಿಳಿದಿರುವಂತೆ ಕನ್ನಡದಲ್ಲಿ ಈ ಥರದ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಬಂದಿರುವುದು, ಸಿನಿಮಾ ಮಾಡುವವರು ಎರಡೂ ಕಡಿಮೆ.

ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯ ಘಟನೆ ನನ್ನನ್ನು ಯಾವಾಗಲೂ ಕಾಡುತ್ತಿತ್ತು. ಆ ಘಟನೆಯಲ್ಲಿ ಸಂತ್ರಸ್ತ ಹುಡುಗಿ ಬದುಕಿದ್ದರೆ, ಈ ಸಮಾಜದಲ್ಲಿ ಏನೆಲ್ಲ ಸವಾಲುಗಳನ್ನು ಎದುರಿಸುತ್ತಿದ್ದಳು, ಈ ಸಮಾಜ ಅವಳನ್ನು ಹೇಗೆ ನೋಡುತ್ತಿತ್ತು, ತನ್ನ ಮೇಲಾದ ಅಂಥದ್ದೊಂದು ಪೈಶಾಚಿಕ ಕೃತ್ಯಕ್ಕೆ ಆಕೆ ಹೇಗೆ ಪ್ರತಿಕಾರ ತೆಗೆದುಕೊಳ್ಳಬಹುದಿತ್ತು ಎಂಬ ಅಂಶಗಳನ್ನು ಇಟ್ಟುಕೊಂಡು ಮೊದಲಿಗೆ “ರಂಗನಾಯಕಿ’ಗೆ ಕಾದಂಬರಿಗೆ ರೂಪ ಕೊಟ್ಟೆ.

ಅದಾದ ನಂತರ “ರಂಗನಾಯಕಿ’ಯನ್ನು ಚಿತ್ರರೂಪದಲ್ಲಿ ತರಲಾಯಿತು. ಇದೊಂದು ಸೂಕ್ಷ್ಮ ವಿಚಾರವಾಗಿದ್ದರಿಂದ, ನೋಡುಗರಿಗೆ ಅರ್ಥ ಮಾಡಿಸುವುದು ತುಂಬ ದೊಡ್ಡ ಸವಾಲಿನ ಕೆಲಸ. ಹಾಗಾಗಿಯೇ “ರಂಗನಾಯಕಿ’ಯ ಮೇಲೆ ಹತ್ತಾರು ಬಾರಿ ಸ್ಕ್ರಿಪ್ಟ್ ಮಾಡಲಾಗಿತ್ತು. ಸಾಕಷ್ಟು ತಿದ್ದುಪಡಿಗಳಾದ ನಂತರ ಅಂತೂ ಈಗ “ರಂಗನಾಯಕಿ’ ಪ್ರೇಕ್ಷಕರ ಮುಂದೆ ಬರುತ್ತಿದ್ದಾಳೆ. ಚಿತ್ರಕ್ಕೆ ಹಾಕಿರುವ ಪರಿಶ್ರಮಕ್ಕೆ ಫ‌ಲ ಸಿಗುವ ನಿರೀಕ್ಷೆ ಇದೆ.

ಇತ್ತೀಚೆಗಷ್ಟೇ “ರಂಗನಾಯಕಿ’ ರಿಲೀಸ್‌ಗೂ ಮುನ್ನವೇ “ಗೋವಾ ಇಂಟರ್‌ ನ್ಯಾಶನಲ್‌ ಫಿಲಂ ಫೆಸ್ಟಿವಲ್‌-2019’ಕ್ಕೆ ಪನೋರಮಾ ವಿಭಾಗದಲ್ಲಿ ಕನ್ನಡದಿಂದ ಏಕಮಾತ್ರ ಚಿತ್ರವಾಗಿ ಆಯ್ಕೆಯಾಗಿ, ಪ್ರದರ್ಶನವಾಗಿದೆ. ಚಿತ್ರವನ್ನು ನೋಡಿದವರು ಕೂಡ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಇದೇ ನವೆಂಬರ್‌ 1ಕ್ಕೆ “ರಂಗನಾಯಕಿ’ ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎನ್ನುತ್ತಾರೆ. ಇನ್ನು ದಯಾಳ್‌ ಅವರನ್ನು ಬಹುವಾಗಿ ಕಾಡಿದ “ರಂಗನಾಯಕಿ’ಯ ಪಾತ್ರದಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

Advertisement

ಉಳಿದಂತೆ ಶ್ರೀನಿ, ತ್ರಿವಿಕ್ರಮ್‌, ಸುಚೇಂದ್ರ ಪ್ರಸಾದ್‌, ಸಿಹಿಕಹಿ ಚಂದ್ರ, ಸುಂದರ್‌ ರಾಜ್‌, ರವಿಭಟ್‌ ಮೊದಲಾದವರು “ರಂಗನಾಯಕಿ’ಯ ಇತರೆ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. “ಇಲ್ಲಿಯವರೆಗೆ ಕಥೆಯಾಗಿ ನನ್ನನ್ನು ಕಾಡಿದ “ರಂಗನಾಯಕಿ’ ತೆರೆಗೆ ಬಂದ ಮೇಲೆ ಪ್ರೇಕ್ಷಕರನ್ನು ಕಾಡಲಿದ್ದಾಳೆ’ ಎನ್ನುವ ಭರವಸೆಯ ಮಾತುಗಳನ್ನಾಡುತ್ತಾರೆ ದಯಾಳ್‌. ಈ ಚಿತ್ರವನ್ನು ಎಸ್‌ವಿ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಎಸ್‌.ವಿ.ನಾರಾಯಣ್‌ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next