ಹಿಂದೆ ಬಂದಿರುವ ಸಕ್ಸಸ್‌ಫುಲ್ ಚಿತ್ರಗಳ ಟೈಟಲ್ ಇಟ್ಟುಕೊಂಡು ಹೊಸ ಚಿತ್ರಗಳು ತೆರೆಗೆ ಬರುವುದು ಕನ್ನಡದಲ್ಲಿ ಹೊಸತೇನಲ್ಲ. ಈಗಾಗಲೇ ಅಂಥ ಅನೇಕ ಚಿತ್ರಗಳು ಬಂದು ಹೋಗಿವೆ. ಈಗ ಅಂಥದ್ದೇ ಮತ್ತೂಂದು ಚಿತ್ರ “ರಂಗನಾಯಕಿ’ ಈ ವಾರ ತೆರೆಗೆ ಬಂದಿದೆ. ಬಹುಶಃ ಇಂದಿಗೂ ಅನೇಕರಿಗೆ “ರಂಗನಾಯಕಿ’ ಅನ್ನೋ ಹೆಸರು ಕೇಳುತ್ತಿದ್ದಂತೆ, ನಿರ್ದೇಶಕ ಪುಟ್ಟಣ್ಣ ಕಣಗಾಲ್, ಆರತಿ ಎಂಬ ಅಪ್ರತಿಮ ಕಲಾವಿದೆಯ ಮನೋಜ್ಞ ಅಭಿನಯ ನೆನಪಾಗುತ್ತದೆ.
ಅಂದಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ “ರಂಗನಾಯಕಿ’ ಟೈಟಲ್ ಇಟ್ಟುಕೊಂಡು ನಿರ್ದೇಶಕ ದಯಾಳ್ ಪದ್ಮನಾಭನ್ ಹೊಸ “ರಂಗನಾಯಕಿ’ಯನ್ನು ಈ ವಾರ ತೆರೆಗೆ ತಂದಿದ್ದಾರೆ. ಇನ್ನು ಹೆಸರೇ ಹೇಳುವಂತೆ “ರಂಗನಾಯಕಿ’ ಹುಡುಗಿಯೊಬ್ಬಳ ಸುತ್ತ ನಡೆಯುವ ಚಿತ್ರ. ಜೀವನದಲ್ಲಿ ಎಲ್ಲರನ್ನೂ ಕಳೆದುಕೊಂಡರೂ, ಆತ್ಮವಿಶ್ವಾಸದಿಂದ ಧೈರ್ಯವಾಗಿ ಬದುಕುತ್ತಿರುವ “ರಂಗನಾಯಕಿ’ಯ ಮೇಲೆ ನಡೆಯುವ ದೌರ್ಜನ್ಯವೊಂದು ಆಕೆಯನ್ನು ಒಂಟಿಯಾಗಿ ನಿಲ್ಲುವಂತೆ ಮಾಡುತ್ತದೆ.
ಇಂಥ ಸನ್ನಿವೇಶದಲ್ಲಿ ಆ ಹುಡುಗಿ ಏನೆಲ್ಲ ಸವಾಲುಗಳನ್ನು ಎದುರಿಸುತ್ತಾಳೆ, ಕಾನೂನು ವ್ಯಾಪ್ತಿಯಲ್ಲೇ ಹೇಗೆ ಹೋರಾಡಿ ಗೆಲುವು ಪಡೆಯುತ್ತಾಳೆ ಅನ್ನೋದು “ರಂಗನಾಯಕಿ’ ಚಿತ್ರದ ಕಥಾಹಂದರ. ಹಾಗಂತ ಚಿತ್ರದ ಕಥೆಯಲ್ಲಿ ಹೊಸದೇನನ್ನು ಹುಡುಕುವಂತಿಲ್ಲ. ನಮ್ಮ ಸುತ್ತಮುತ್ತ ಆಗಾಗ್ಗೆ ಕೇಳುತ್ತಿರುವ ನೈಜ ಘಟನೆಗಳನ್ನೇ ಆಧರಿಸಿ ದಯಾಳ್ ಪದ್ಮನಾಭನ್ ಅದಕ್ಕೊಂದು ಚಿತ್ರ ರೂಪ ಕೊಟ್ಟಿದ್ದಾರೆ.
ಆದರೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಘಟನೆಗಳಲ್ಲಿ ಸಂತ್ರಸ್ತರ ನೋವು ಹೇಗಿರಬಹುದು ಅನ್ನೋದನ್ನ ನಿರ್ದೇಶಕ ದಯಾಳ್ ಪರಿಣಾಮಕಾರಿಯಾಗಿ, ಮನಮುಟ್ಟುವಂತೆ “ರಂಗನಾಯಕಿ’ಯ ಮೂಲಕ ತೋರಿಸಿದ್ದಾರೆ. ಚಿತ್ರದ ಮೊದಲರ್ಧ ಮಂದಗತಿಯಲ್ಲಿ ಸಾಗುತ್ತ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿದರೂ, ದ್ವಿತೀಯಾರ್ಧ ತಾಳ್ಮೆಯಿಂದ ಕುಳಿತಿದ್ದಕ್ಕೂ ಸಾರ್ಥಕ ಎಂಬ ಭಾವ ಮೂಡಿಸುತ್ತದೆ. ಚಿತ್ರದ ಮೊದಲರ್ಧಕ್ಕೆ ಒಂದಷ್ಟು ಕತ್ತರಿ ಪ್ರಯೋಗ ಮಾಡಿದ್ದರೆ, “ರಂಗನಾಯಕಿ’ ಇನ್ನಷ್ಟು ಮೊನಚಾಗಿ ಕಾಣುತ್ತಿದ್ದಳು.
ಅದನ್ನು ಹೊರತುಪಡಿಸಿದರೆ, ಇಡೀ ಚಿತ್ರದಲ್ಲಿ “ರಂಗನಾಯಕಿ’ಯ ಪಾತ್ರದಲ್ಲಿ ನಟಿ ಅದಿತಿ ಪ್ರಭುದೇವ ಅಭಿನಯ ಗಮನ ಸೆಳೆಯುತ್ತದೆ. ಸಂತ್ರಸ್ತ ಹೆಣ್ಣಿನ ನೋವು, ಆಕ್ರಂದನ, ಆಕ್ರೋಶ, ಮಿಡಿತ ಎಲ್ಲವನ್ನೂ ತನ್ನ ಅಭಿನಯದಲ್ಲಿ ಕಟ್ಟಿಕೊಟ್ಟಿರುವ ಅದಿತಿ “ರಂಗನಾಯಕಿ’ಯಾಗಿ ಫುಲ್ ಮಾರ್ಕ್ಸ್ ತೆಗೆದುಕೊಳ್ಳುತ್ತಾರೆ. ಇನ್ನು ಇಬ್ಬರು ನಾಯಕರಾದ ಶ್ರೀನಿ ಮತ್ತು ತ್ರಿವಿಕ್ರಮ್ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಉಳಿದಂತೆ ಇತರೆ ಕಲಾವಿದರದ್ದು, ಪರವಾಗಿಲ್ಲ ಎನ್ನಬಹುದಾದ ಅಭಿನಯ. ಇನ್ನು ತಾಂತ್ರಿಕವಾಗಿ ಹೇಳುವುದಾದರೆ, ಚಿತ್ರದ ಛಾಯಾಗ್ರಹಣ ಚೆನ್ನಾಗಿದೆ. ಸಂಕಲನ ಕೊಂಚ ಹರಿತವಾಗಿರಬೇಕಿತ್ತು. ಚಿತ್ರದ ಮೂರು ಹಾಡುಗಳು ಚೆನ್ನಾಗಿ ಮೂಡಿಬಂದಿದೆ. ಹಿನ್ನೆಲೆ ಸಂಗೀತಕ್ಕೆ ನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು. ಕೆಲವೊಂದು ಲೋಪಗಳನ್ನು ಬದಿಗಿಟ್ಟು ನೋಡಿದರೆ, “ರಂಗನಾಯಕಿ’ ಇತ್ತೀಚಿನ ದಿನಗಳಲ್ಲಿ ಬಂದ ಹೊಸತರದ, ಹೊಸ ಪ್ರಯೋಗದ ಚಿತ್ರ ಎನ್ನಲು ಅಡ್ಡಿಯಿಲ್ಲ.
ಚಿತ್ರ: ರಂಗನಾಯಕಿ
ನಿರ್ದೇಶನ: ದಯಾಳ್ ಪದ್ಮನಾಭನ್
ನಿರ್ಮಾಣ: ಎಸ್.ವಿ ನಾರಾಯಣ್
ತಾರಾಗಣ: ಅದಿತಿ ಪ್ರಭುದೇವ, ಶ್ರೀನಿ, ತ್ರಿವಿಕ್ರಮ್, ಸುಂದರ ರಾಜ್, ಶಿವರಾಮ್, ಸುಚೇಂದ್ರ ಪ್ರಸಾದ್ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್