Advertisement

ರೈತರ ಆತ್ಮಹತ್ಯೆಗೆ ಮಿಡಿದ 16ರ ಪೋರನ ಹೃದಯ

06:00 AM Jul 29, 2018 | Team Udayavani |

ಬೆಂಗಳೂರು: ಆತ 16 ವರ್ಷದ ಪೋರ. ಹುಟ್ಟಿ ಬೆಳೆದಿದ್ದೆಲ್ಲ ನಗರ ಪ್ರದೇಶದಲ್ಲಾದರೂ ಬಾಲಕನ ಹೃದಯ ಮರುಗಿದ್ದು ಮಾತ್ರ ರೈತರ ಆತ್ಮಹತ್ಯೆ ಪ್ರಕರಣಗಳಿಗೆ.

Advertisement

ಬಡ ರೈತನಿಗೆ ತನ್ನಿಂದ ಕಿಂಚಿತ್‌ ಆದರೂ ಸಹಾಯವಾಗಲಿ ಎಂಬ ಕಾರಣಕ್ಕಾಗಿ ಇದೀಗ ಬೆಳಗಾವಿ ಮೂಲದ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ವಿದ್ಯುತ್‌ ಶಕ್ತಿ ಸಹಾಯವಿಲ್ಲದೆ ಕೃಷಿ ಬೆಳೆಗಳಿಗೆ ನೀರುಣಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾನೆ.

ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಸೈಂಟ್‌ ಮೇರಿಸ್‌ ಹೈಸ್ಕೂಲ್‌ನ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಯಶ್‌ ಕಣºರ್ಗಿ, ಬಳಕೆಗೆ ಬಾರದ ಸೈಕಲ್‌ ಪರಿಕರಗಳನ್ನು ಮರುಬಳಕೆ ಮಾಡಿಕೊಂಡು ಅನ್ನದಾತರಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲವಾಗುವ ಯಂತ್ರ ಅಭಿವೃದ್ಧಿಪಡಿಸಿದ್ದಾನೆ. ರೈತರ ಆತ್ಮಹತ್ಯೆ ವಿಷಯ ಪ್ರಧಾನವಾಗಿಟ್ಟುಕೊಂಡು ಕೃಷಿಗೆ ನೆರವಾಗುವ ಸಾಧನಗಳನ್ನು ಆವಿಷ್ಕಾರ ಮಾಡಿ ಪ್ರಶಂಸೆ ಗಳಿಸಿದ್ದಾನೆ.

ಕರ್ನಾಟಕ ವಿಜ್ಞಾನ ಪರಿಷತ್ತಿನಲ್ಲಿ ಶನಿವಾರದಿಂದ ಆರಂಭವಾಗಿರುವ ಎರಡು ದಿನಗಳ ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ಯಶ್‌ ಕಣºರ್ಗಿ, ತಾನು ಅಭಿವೃದ್ಧಿಪಡಿಸಿರುವ ಯಂತ್ರಗಳನ್ನು ಪ್ರದರ್ಶಿಸಿದ್ದು, ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯವಷ್ಟೇ ಅಲ್ಲ, ದೇಶದ ಹಲವು ಭಾಗಗಳಲ್ಲಿ ವಿವಿಧ ಕಾರಣಗಳಿಂದಾಗಿ ಅನ್ನದಾತ ನೇಣಿಗೆ ಶರಣಾಗುತ್ತಿದ್ದಾನೆ. ಕೃಷಿ, ಬೆಳೆಗಳಿಗೆ ನೀರು ಹರಿಸಲು ವಿದ್ಯುತ್‌ ಇಲ್ಲದೆ ಪರಿತಪಿಸುತ್ತಿರುತ್ತಾನೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಇಲ್ಲದೆ ಕಡಿಮೆ ವೆಚ್ಚದಲ್ಲಿ ಕೃಷಿ ಬೆಳೆಗಳಿಗೆ ನೀರುಣಿಸುವ ಯಂತ್ರವನ್ನು ಆವಿಷ್ಕಾರ ಮಾಡಿರುವುದು ಖುಷಿ ತಂದಿದೆ ಎಂದು ಯಶ್‌ ಕಣºರ್ಗಿ ಹೇಳಿದ್ದಾನೆ.

ಹೇಗಿದೆ ಯಂತ್ರ?
ಹಾಳಾಗಿರುವ ಸೈಕಲ್‌ ಮತ್ತು ದುರಸ್ಥಿಗೊಂಡ ಪಂಪ್‌ ಸೆಟ್‌ನ್ನು ಇಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಸೈಕಲ್‌ನ ಮುಂಭಾಗದಲ್ಲಿ ಸುಮಾರು 25 ಲೀ.ನೀರು ಹಿಡಿಯುವ ನೀರಿನ ಟ್ಯಾಂಕ್‌ ಅಳವಡಿಸಲಾಗಿದೆ. ಉದ್ದನೆ ಪೈಪ್‌ಗ್ಳ ಮೂಲಕ ಪಂಪ್‌ಸೆಟ್‌ ಮತ್ತು ನೀರಿನ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಹೀಗೆ ಮಾಡಿದ ನಂತರ, ಸೈಕಲ್‌ ಪ್ಯಾಡಲ್‌ ತುಳಿದರೆ ಯಂತ್ರದಿಂದ ಸುಮಾರು 5ರಿಂದ 15ಅಡಿಯಷ್ಟು ಎತ್ತರದಲ್ಲಿ ನೀರು ಹರಿಯಲಿದೆ. ರೈತರು ತಮ್ಮ ಕೃಷಿ ಭೂಮಿಯಲ್ಲಿ ಎಲ್ಲಿ ಬೇಕಾದರೂ ಈ ಯಂತ್ರವನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ.

Advertisement

ಖರ್ಚು ಎಷ್ಟಾಗಲಿದೆ:
ಈ ಯಂತ್ರವನ್ನು ಯಶ್‌ಕಣºರ್ಗಿ ಕೇವಲ ಹದಿನೈದು ದಿನಗಳಲ್ಲಿ ಕಂಡು ಹಿಡಿದಿದ್ದಾನೆ. ಇದಕ್ಕಾಗಿ 1,500 ರೂ.ವೆಚ್ಚ ಮಾಡಿದ್ದಾನೆ. ಬೇಡ ಎಂದು ಬಿಸಾಡಿರುವ ವಸ್ತುಗಳನ್ನು ಬಳಸಿಕೊಂಡು ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್‌ ಇಲ್ಲದೆ ಇರುವ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ರೈತರು ಇದನ್ನು ಉಪಯೋಗಿಸಬಹುದಾಗಿದೆ. ಜತೆಗೆ ಹೊಲಗಳಲ್ಲಿ ಔಷಧಿ ಸಿಂಪಡಿಸಲೂ ಬಳಕೆ ಮಾಡಬಹುದಾಗಿದೆ ಎಂದು ಬೆಳಗಾವಿಯ ಸೈಂಟ್‌ ಮೇರಿಸ್‌ ಹೈಸ್ಕೂಲ್‌ನ ಶಿಕ್ಷಕಿ ಮಂಗಳಾ ಪಾಟೀಲ್‌ ಮಾಹಿತಿ ನೀಡಿದ್ದಾರೆ. 

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ರಾಜ್ಯಕ್ಕೆ ಕೀರ್ತಿ ತರುವ ಹುಡುಗನಾಗಿ ಈ ಬಾಲಕ ಬೆಳೆಯುತ್ತಾನೆಂಬ ಭರವಸೆ ವ್ಯಕ್ತಪಡಿಸಿದರು.

ಕಬ್ಬಿನ ಬೀಜ ಬಿಡಿಸುವ ಯಂತ್ರ:
ಜೊತೆಗೆ, ಯಶ್‌ ಕಣºರ್ಗಿ ರೈತರು ಸುಲಭವಾಗಿ ಕಬ್ಬಿನ ಬೀಜ ಬಿಡಿಸುವ ಸಲುವಾಗಿ ನೂತನ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾನೆ. ಕಬ್ಬಿನ ಬೀಜ ನೆಲಕ್ಕೆ ಹಾಕುವಾಗ ಉದ್ದನೆ ಕಬ್ಬನ್ನು ಹಾಕಲಾಗುತ್ತದೆ. ಹೀಗೆ ಮಾಡುವುದರಿಂದ ಸಾಕಷ್ಟು ಜಾಗ ವ್ಯರ್ಥವಾಗಲಿದೆ. ಇದನ್ನೆ ಕೇಂದ್ರೀಕರಿಸಿ ಕೇವಲ ಕಬ್ಬಿನ ಬೀಜವನ್ನಷ್ಟೇ ಕತ್ತರಿಸುವ ಯಂತ್ರವನ್ನು ಆವಿಷ್ಕರಿಸಿದ್ದಾನೆ. ಜತೆಗೆ ಹರಿಯುವ ನೀರನ್ನು ಬಳಸಿಕೊಂಡು ಕೃಷಿಗೆ ನೀರು ಹರಿಸಬಹುದಾದ ಹೈಡ್ರೋಲಿಕ್‌ ರ್ಯಾಮ್‌ ಪಂಪ್‌ನ್ನು ಕೂಡ ಅಭಿವೃದ್ಧಿಪಡಿಸಿದ್ದಾನೆ. ಈತ ಈಗಾಗಲೇ ಜಿಲ್ಲಾಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳಗಾವಿ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.  ಮುಂದೆ ವಿಜ್ಞಾನ ಲೋಕದಲ್ಲಿ ಹೆಸರು ಮಾಡುವ ಕನಸು ಕಂಡಿದ್ದಾನೆ.

ನನ್ನ ತಂದೆ ಬೆಳಗಾವಿಯಲ್ಲಿ ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ನನ್ನ ಮನ ಸದಾ ರೈತರ ಬಗ್ಗೆ ಮಿಡಿಯುತ್ತದೆ. ಆದರಲ್ಲೂ ಅನ್ನದಾತರ ಆತ್ಮಹತ್ಯೆಯ ಪ್ರಕರಣಗಳು ನನ್ನ ಮನವನ್ನು ಘಾಸಿಗೊಳಿಸಿದೆ. ಹೀಗಾಗಿ ಸಣ್ಣ ಪ್ರಮಾಣದಲ್ಲಾದರೂ ಅನ್ನದಾತನಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕಾಗಿ ಈ ಯಂತ್ರಗಳನ್ನು ಅಭಿವೃದ್ಧಿಪಡಿಸಿದ್ದೇನೆ.
– ಯಶ್‌ಕಣರ್ಗಿ, ಸೈಂಟ್‌ ಮೇರಿಸ್‌ ಹೈಸ್ಕೂಲ್‌ ಬೆಳಗಾವಿ.

– ದೇವೇಶ ಸೂರಗುಪ್ಪ
 

Advertisement

Udayavani is now on Telegram. Click here to join our channel and stay updated with the latest news.

Next