ಬೆಂಗಳೂರು: ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಕಾರ್ಡ್‌ಗಳ ನಕಲಿ ಸೃಷ್ಟಿ ಹಾಗೂ ವಿತರಣೆಯಲ್ಲಿ ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್ ಜತೆಗೆ ಕುಟುಂಬ ಸದಸ್ಯರಿಗೆ ಬಯೋಮೆಟ್ರಿಕ್ ಕಡ್ಡಾಯ ಸೇರಿದಂತೆ ಇನ್ನೂ ಅನೇಕ ಹೊಸ ನಿಯಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾರಿಗೆ ತಂದಿದೆ.
ಇಲ್ಲಿಯವರೆಗೂ ಆರೋಗ್ಯ ಕಾರ್ಡ್ ಪಡೆಯಲು ಆಧಾರ್ ಹಾಗೂ ರೇಷನ್ ಕಾರ್ಡ್ ಮಾತ್ರ ನೀಡಲು ಸಾರ್ವಜನಿಕರಿಗೆ ಸೂಚಿಸಲಾಗಿತ್ತು. ಆದರೆ, ಇನ್ನು ಮುಂದೆ ಕುಟುಂಬ ಸದಸ್ಯರೆಲ್ಲರೂ ಕಡ್ಡಾಯವಾಗಿ ಬಯೋಮೆಟ್ರಿಕ್ ವಿವರಗಳನ್ನು ನೀಡಲೇಬೇಕು. ಇದರ ಜತೆಗೆ ಆಧಾರ್-ಒಟಿಪಿ ಹಾಗೂ ಕ್ಯೂಆರ್ ಕೋಡ್ ಆಧಾರಿತವಾಗಿ ಕಾರ್ಡ್ ವಿತರಿಸುವುದನ್ನು ರದ್ದುಗೊಳಿಸಲಾಗಿದೆ. ಇದರಿಂದ ಫಲಾನುಭವಿಗಳೇ ಹಾಜರಿದ್ದು ಕಾರ್ಡ್ ಪಡೆಯಬೇಕಾಗುತ್ತದೆ.
ಆರೋಗ್ಯ ಕಾರ್ಡ್ ವಿತರಿಸುವ ಸರ್ಕಾರಿ ಆಸ್ಪತ್ರೆಗಳು, ಸೇವಾ ಸಿಂಧು ಕೇಂದ್ರ, ಬೆಂಗಳೂರು ಒನ್ ಹಾಗು ಕರ್ನಾಟಕ ಒನ್ ಸಿಬ್ಬಂದಿ ಬಯೋಮೆಟ್ರಿಕ್ ದಾಖಲೆಗಳನ್ನು ನೀಡಿ ತಮ್ಮ ಕಚೇರಿ ಪ್ರವೇಶಿಸಲು ಹಾಗೂ ಕಂಪ್ಯೂಟರ್ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ಸಿಬ್ಬಂದಿಗೆ ಬಯೋಮೆಟ್ರಿಕ್ ಕಡ್ಡಾಯವಾದಾಗ ಅನಧಿಕೃತ ವ್ಯಕ್ತಿ ಅಥವಾ ಏಜೆಂಟ್ರುಗಳು ಕಾರ್ಡ್ ತಯಾರಿಕೆ, ವಿತರಣೆಯ ಯಾವುದೇ ಹಂತದಲ್ಲಿ ಅಕ್ರಮ ನಡೆಸಲು ಸಾಧ್ಯವಾಗುವುದಿಲ್ಲ. ಜತೆಗೆ, ಅಧಿಕೃತವಾಗಿ ಕಾರ್ಡ್ ವಿತರಿಸುವ ಸಿಬ್ಬಂದಿ ತಾವು ವಿತರಿಸುವ ಕಾರ್ಡ್‌ಗಳಿಗೆ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.
ಅಲ್ಲದೇ, ಆಸ್ಪತ್ರೆ ಹಾಗೂ ಸೇವಾಕೇಂದ್ರಗಳಲ್ಲಿ ಕಾರ್ಡ್ ವಿತರಿಸುವ ಇಲಾಖೆಯ ಸಿಬ್ಬಂದಿ, ಪಾಸ್‌ವರ್ಡ್/ಯುಸರ್ ಐಡಿಯನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವಂತಿಲ್ಲ. ಈ ನಿಟ್ಟಿನಲ್ಲಿ ಕಾರ್ಡ್ ವಿತರಣೆಗೆ ಬಳಸಲಾಗುತ್ತಿರುವ ಸಾಫ್ಟ್ವೇರ್‌ನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ದಿನದ 24 ಗಂಟೆ ಕಾರ್ಡ್ ವಿತರಿಸಬಹುದು. ಆದರೆ, ಬಿ1, ಕೆ1 ಸೇವಾಸಿಂಧು ಕೇಂದ್ರಗಳು ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ಕಾರ್ಯ ನಿರ್ವಹಿಸಬೇಕಿದೆ.
Advertisement
ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 32.5 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆದರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರ್ಡ್ ವಿತರಣೆಯ ವೇಳೆ ಅವ್ಯವಹಾರ ನಡೆಯುತ್ತಿರುವ ಕುರಿತು ಇಲಾಖೆಗೆ ದೂರುಗಳು ಬಂದಿವೆ. ಪ್ರಮುಖವಾಗಿ ಫೋಟೊ ಸ್ಟುಡಿಯೋಗಳಲ್ಲಿ ನಕಲಿ ಕಾರ್ಡ್ ಸೃಷ್ಟಿ, ಮಧ್ಯವರ್ತಿಗಳು ಶೀಘ್ರವಾಗಿ ಕಾರ್ಡ್ ಕೊಡಿಸುತ್ತೇನೆ ಎಂದು ದುಪ್ಪಟ್ಟು ಹಣ ವಸೂಲಿ ಮಾಡಿದ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಆರೋಗ್ಯ ಯೋಜನೆಯಲ್ಲಿ ಮಧ್ಯವರ್ತಿ ಹಾಗೂ ಸೇವಾ ಕೇಂದ್ರಗಳಲ್ಲಿ ಅಕ್ರಮ ನಡೆಯಬಾರದು ಎಂದು ಕಾರ್ಡ್ ವಿತರಿಸುವ ಎಲ್ಲಾ ಹಂತಗಳಲ್ಲೂ ಹೊಸ ನಿಯಮಗಳನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ.
Related Articles
Advertisement
‘ಸಾರ್ವತ್ರಿಕ ಯೋಜನೆಯನ್ನು ಯಶಸ್ವಿಗೊಳಿಸುವುದು ನಮ್ಮ ಗುರಿಯಾಗಿದ್ದು, ಕಾರ್ಡ್ ವಿತರಣೆಯಲ್ಲಿ ಅಕ್ರಮ ಎಸಗುವ ಅಥವಾ ಶಾಮೀಲಾಗಿರುವ ಮಧ್ಯವರ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ’ ಎಂದು ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಇವುಗಳನ್ನು ಮೀರಿ ಯಾವುದೇ ಮಧ್ಯವರ್ತಿಗಳು ಅಥವಾ ಅಕ್ರಮ ಕಂಡು ಬಂದರೆ 104 ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು.