Advertisement

ಆರೋಗ್ಯ ಕಾರ್ಡ್‌ ಗ್ರಾಹಕರಿಗೆ ವಂಚನೆ

09:48 PM Apr 01, 2019 | Lakshmi GovindaRaju |

ಆರೋಗ್ಯ ಕಾರ್ಡ್‌ ಗ್ರಾಹಕರಿಗೆ ವಂಚನೆಕೇಂದ್ರ ಸರ್ಕಾರ ಜಾರಿಗೆ ತಂದ ಆಯುಷ್ಮಾನ್‌ ಆರೋಗ್ಯ ಯೋಜನೆಗೆ ಗುರುತಿನ ಪತ್ರವನ್ನು ನೋಂದಾಯಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಲುವುದು ಒಂದೆಡೆಯಾದರೆ, ಸೈಬರ್‌ ಸೆಂಟರ್‌ಗಳು ಹತ್ತುಪಟ್ಟು ಹಣವನ್ನು ಪಡೆದು ಗ್ರಾಹಕರಿಗೆ ವಂಚನೆ ಮಾಡುತ್ತಿವೆ ಎಂದು ಗ್ರಾಹಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Advertisement

ಹಣ ನಿಗದಿ ಮಾಡಿದ್ದರೂ ವಂಚನೆ: ಕನಕಪುರ ತಾಲೂಕಿನಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ಬಂದು ಅರ್ಜಿ ವಿತರಣೆ ಆರಂಭಿಸಿದಾಗ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಯಲ್ಲಿ 10 ರೂ. ಹಣ ಪಡೆದು ನೋಂದಣಿ ಮಾಡಲಾಗುತ್ತಿತ್ತು.

ಜನರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವುದನ್ನು ಗಮನಿಸಿ, ಖಾಸಗಿ ಸೈಬರ್‌ ಸೆಂಟರ್‌ಗಳಿಗೆ ಸೇವಾ ಸಿಂಧು ಸಮಿತಿ ಪ್ರತಿ ನೋಂದಣಿಗೆ 35 ರೂ. ನಿಗದಿ ಮಾಡಿ ಅನುಮತಿ ನೀಡಿದೆ. ಆದರೆ, ಒಂದಕ್ಕೆ ಹತ್ತು ಪಟ್ಟು ಹಣ ಪಡೆದು ಗ್ರಾಹಕರಿಗೆ ವಂಚನೆ ಮಾಡುತ್ತಿವೆ ಸೈಬರ್‌ ಸೆಂಟರ್‌ಗಳು.

ಮನಸೋಇಚ್ಛೆ ದರ ನಿಗದಿ: ಸರ್ಕಾರಿ ಸೇವಾ ಸಂಸ್ಥೆಗಳಲ್ಲಿ ಹತ್ತು ರೂ. ಸರ್ಕಾರ ನಿಗದಿ ಮಾಡಿದ್ದ ದರವನ್ನು ಕೊಟ್ಟು ನೋಂದಣಿ ಮಾಡಿಕೊಳ್ಳುತ್ತಿದ್ದ ನಾಗರಿಕರು, ಇಂದು ಸೈಬರ್‌ ಸೆಂಟರ್‌ಗಳಲ್ಲಿ 250, 200, 150, 100 ರೂ. ಹೀಗೆ ಮನಸೋಇಚ್ಛೆ ದರ ನಿಗದಿ ಮಾಡಿಕೊಂಡು ಗ್ರಾಹಕರಿಂದ ಹಗಲು ದರೋಡೆಗೆ ಇಳಿದಿವೆ ಇಲ್ಲಿನ ಸೈಬರ್‌ ಸೆಂಟರ್‌ಗಳು. ಈ ಬಗ್ಗೆ ಹಲವು ನಾಗರಿಕರು ಪ್ರಶ್ನೆ ಮಾಡಿದ್ದಕ್ಕೆ ಸರ್ಕಾರ ನಮಗೆ ಹಣ ಪಡೆಯಲು ಹೇಳಿದೆ, ನಿಮಗೆ ಬೇಕಾದರೆ ಮಾಡಿಸಿಕೊಳ್ಳಿ, ಇಲ್ಲವಾದರೆ ತೆರಳಿ ಎಂದು ಹೊರ ಹೋಗುವಂತೆ ತಿಳಿಸುತ್ತಾರೆ.

ಹತ್ತುಪಟ್ಟು ಹಣ ವಸೂಲಿ: ಕನಕಪುರ ನಗರದಲ್ಲಿ ಅಣ್ಣಾ ಹಜಾರೆ, ರಿಂಗ್‌ ಕಂಪ್ಯೂಟರ್, ಬಸ್‌ನಿಲ್ದಾಣದ ಕಲ್ಯಾಣಿ ಮೆಡಿಕಲ್‌ ಬಳಿಯ ಸೈಬರ್‌ ಹಾಗೂ ಮಾನಸ ಶಾಲೆಯ ಸನಿಹದ ಸೈಬರ್‌ ಕೇಂದ್ರಗಳಲ್ಲಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹತ್ತು ಪಟ್ಟು ಹಣ ವಸೂಲಿ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು,

Advertisement

ತಾಲೂಕು ಆರೋಗ್ಯಾಧಿಕಾರಿಗಳಿಗೆ ದೂರು ನೀಡಿ, ಕನಕಪುರ ನಗರ ಠಾಣೆ ಪೊಲೀಸರನ್ನು ಸ್ಥಳಕ್ಕೆ ಕರೆದು ಹಗಲು ದರೋಡೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದು, ನೋಂದಣಿಯನ್ನು ತಾತ್ಕಾಲಿಕವಾಗಿ ರದ್ದು ಮಾಡುವಂತೆ ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರದ್ದು ಮಾಡಿದ್ದಾರೆ.

73 ಸೈಬರ್‌ ಕೇಂದ್ರಗಳಿಗೆ ಅನುಮತಿ: ಈ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಸೇವಾ ಸಿಂಧು ಜಿಲ್ಲೆಯಲ್ಲಿ 73 ಸೈಬರ್‌ ಸೇವಾ ಕೇಂದ್ರಗಳಿಗೆ ಅನುಮತಿ ನೀಡಿದೆ. ಕನಕಪುರದಲ್ಲಿ 23 ಸೇವಾ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಈ ಅನುಮತಿ ಪಡೆದ ಸೇವಾ ಕೇಂದ್ರಗಳು ಸೇವಾ ಸಿಂಧು ನಾಮಫಲಕ ಅಳವಡಿಸಿಕೊಂಡು ಸರ್ಕಾರ ನಿಗದಿ ಮಾಡಿರುವ ಹಣವನ್ನು ಪಡೆದು ನಾಗರಿಕರಿಗೆ ಸೇವೆ ನೀಡಬೇಕು. ಅದನ್ನು ಉಲ್ಲಂಘಿಸಿದ ಸೈಬರ್‌ ಕೇಂದ್ರಗಳ ಅನುಮತಿ ರದ್ದು ಮಾಡಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶವಿದೆ.

ಕಾರ್ಡ್‌ ವಿತರಣೆಗೆ ನೀತಿ ಸಂಹಿತೆ ಅಡ್ಡಿ: ಜಿಲ್ಲೆಯಲ್ಲಿ ಸೇವಾ ಸಿಂಧು ಮತ್ತು ಸರ್ಕಾರಿ ಸೇವಾ ಕೇಂದ್ರಗಳಲ್ಲಿ ನೀಡಲಾಗುತ್ತಿರುವ ಆಯುಷ್ಮಾನ್‌ ಯೋಜನೆಯ ಆರೋಗ್ಯ ಕಾರ್ಡ್‌ ವಿತರಣೆ ಮಾಡುವಲ್ಲಿ ಹಲವು ಸಮಸ್ಯೆಗಳು ಹಾಗೂ ದೂರುಗಳು ಎದುರಾಗುತ್ತಿದೆ. ಈ ಕಾರ್ಡ್‌ ವಿತರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿದೆ. ತಾತ್ಕಾಲಿಕವಾಗಿ ಸ್ಥಗಿತಗೊಳಸಬಹುದು ಎನ್ನುವ ಮುನ್ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಸುಲಿಗೆಗೆ ಸೈಬರ್‌ ಮಾಲೀರು ತಂತ್ರ: ಸರ್ಕಾರದ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸೈಬರ್‌ ಸೆಂಟರ್‌ಗಳಿಗೆ ಸೇವಾ ಸಿಂಧು ಅನುಮತಿ ನೀಡುತ್ತಿದ್ದಂತೆ, ನಾಗರಿಕರ ಬಳಿ ಸುಲಿಗೆ ಮಾಡಲು ಸೈಬರ್‌ಗಳ ಮಾಲೀರು ತಂತ್ರ ರೂಪಿಸುತ್ತಾರೆ. ನಿತ್ಯ ಸೇವ ಪಡೆಯಲು ಬಂದ ನಾಗರಿಕರ ಬಳಿ ಸುಲಿಗೆ ಮಾಡಿ, ಅತ್ತ ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆ ನಿಗದಿ ಮಾಡಿದ ಹಣವನ್ನು ಪಡೆದು ವಂಚನೆ ನಡೆಸುತ್ತಿದ್ದಾರೆ.

ಅನುಮತಿ ಪಡೆಯದೇ ಕಾರ್ಡ್‌ ವಿತರಣೆ: ನಗರದ ಅಣ್ಣಾ ಹಜಾರೆ ಸೈಬರ್‌ ಕೇಂದ್ರಕ್ಕೆ ಜಿಲ್ಲೆಯ ಸೇವಾ ಸಿಂಧು ಅನುಮತಿ ನೀಡದಿದ್ದರೂ ಸಹ ಆಯುಷ್ಮಾನ್‌ ಭಾರತ್‌ ಯೋಜನೆಯ ಆರೋಗ್ಯ ಕಾರ್ಡ್‌ ವಿತರಣೆ ಮಾಡುತ್ತಿದೆ. ಸೇವೆ ಬಯಸಿ ಬಂದ ನಾಗರಿಕರ ಬಳಿ 250 ರೂ. ಪಡೆಯುವ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿದೆ. ಈ ಸೈಬರ್‌ ಸೆಂಟರ್‌ ಮಾಲೀಕರ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ನಗರದ ನಾಗರಿಕರು ಒತ್ತಾಯಿಸಿದ್ದಾರೆ.

ಜಿಲ್ಲಾ ಸೇವಾ ಸಿಂಧು ಕೇಂದ್ರದಿಂದ ಅನುಮತಿ ಪಡೆದ ಸೈಬರ್‌ ಕೇಂದ್ರಗಳು ಸಾರ್ವಜನಿಕರಿಗೆ ಸೇವೆ ನೀಡಲು ಸರ್ಕಾರ ನಿಗದಿ ಮಾಡಿರುವಂತೆ ಪಿವಿಸಿ ಕಾರ್ಡ್‌ ನೀಡಿದರೆ 35 ರೂ. ಪೇಪರ್‌ನಲ್ಲಿ ನೋಂದಣಿಯಾದ ಕಾರ್ಡ್‌ ನೀಡಿದರೆ 10 ರೂ. ನಿಗದಿ ಮಾಡಿದೆ. ಇದನ್ನು ಉಲ್ಲಂಘಿಸಿದ ಸೈಬರ್‌ ಸೇವಾ ಕೇಂದ್ರಗಳ ವಿರುದ್ಧ ಜಿಲ್ಲಾ ವೈದ್ಯ ಅಧಿಕಾರಿಗಳು ಅಥವಾ ಜಿಲ್ಲಾ ಸೇವಾ ಸಿಂಧು ಅಧಿಕಾರಿಗಳು, ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲು ಮುಕ್ತ ಅವಕಾಶವಿದೆ. ಇದು ಕ್ರಮಿನಲ್‌ ಅಪರಾಧವಾಗಿದೆ.
-ವಿಶ್ವನಾಥ್‌, ಜಿಲ್ಲಾ ಸೇವಾ ಸಿಂಧು ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next