Advertisement

ಆರೋಗ್ಯ ಕರ್ನಾಟಕ ಚಿಕಿತ್ಸಾ ಮೊತ್ತ 3 ಪಟ್ಟು ಹೆಚ್ಚಳ

06:00 AM Sep 15, 2018 | |

ಬೆಂಗಳೂರು: “ಆರೋಗ್ಯ ಕರ್ನಾಟಕ’ದಡಿ ಬಡ ಕುಟುಂಬಗಳಿಗೆ ನೀಡಲಾಗುವ ಚಿಕಿತ್ಸಾ ವೆಚ್ಚವನ್ನು ಮೂರುಪಟ್ಟು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ “ಆರೋಗ್ಯ ಕರ್ನಾಟಕ-ಆಯುಷ್ಮಾನ್‌ ಭಾರತ’ದಡಿ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಶೀಘ್ರ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ಪಡೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

Advertisement

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಜೆ.ಎನ್‌. ಟಾಟಾ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, “ಕೇಂದ್ರದ ಆಯುಷ್ಮಾನ್‌ ಭಾರತ’ ಯೋಜನೆ ಅಡಿ ರಾಜ್ಯದ ಕೇವಲ 62 ಲಕ್ಷ ಬಡ ಕುಟುಂಬಗಳಿಗೆ ಐದು ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ದೊರೆಯಲಿದೆ. ಆದರೆ, ರಾಜ್ಯದಲ್ಲಿ 1.20 ಕೋಟಿ ಕುಟುಂಬಗಳು ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿನ) ಕಾರ್ಡ್‌ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಧಕ್ಕರ್ಧ ಫ‌ಲಾನುಭವಿಗಳು ವಂಚಿತರಾಗಲಿದ್ದಾರೆ. ಹಾಗಾಗಿ, ಆರೋಗ್ಯ ಕರ್ನಾಟಕದಡಿ 2 ಲಕ್ಷ ರೂ.ವರೆಗಿದ್ದ ಚಿಕಿತ್ಸಾ ವೆಚ್ಚವನ್ನು ಐದು ಲಕ್ಷ ರೂ.ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

“ಜನರ ಆರೋಗ್ಯದ ದೃಷ್ಟಿಯಿಂದ ಈ ವಿಚಾರದಲ್ಲಿ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಮುಖ್ಯಮಂತ್ರಿ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಒಟ್ಟಿಗೆ ಕಾರ್ಯನಿರ್ವಹಿಸುವ ನಿರ್ಧಾರಕ್ಕೆ ಬರಲಾಗಿದೆ. ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಈ ಸಂಬಂಧದ ಪ್ರಸ್ತಾವನೆ ಚರ್ಚೆಗೆ ಬರಲಿದ್ದು, ಅಲ್ಲಿ ಅನುಮೋದನೆ ದೊರೆತ ನಂತರ ಅನುಷ್ಠಾನಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

1,600 ಕಾಯಿಲೆಗಳಿಗೆ ಚಿಕಿತ್ಸೆ:
ಆಯುಷ್ಮಾನ್‌ ಭಾರತ ಹಾಗೂ ಆರೋಗ್ಯ ಕರ್ನಾಟಕ ಉದ್ದೇಶ ಮತ್ತು ವ್ಯಾಪ್ತಿ ಒಂದೇ ಆಗಿರುವುದರಿಂದ ಎರಡೂ ಯೋಜನೆಗಳನ್ನು ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ. ವಿಲೀನಗೊಳಿಸಿ, “ಕೋ-ಬ್ರಾಂಡಿಂಗ್‌’ ಮಾದರಿಯಲ್ಲಿ ಜಾರಿಗೊಳಿಸಲಾಗುವುದು. ಇದರಿಂದ ಜನರಿಗೆ ಅನುಕೂಲ ಆಗಲಿದೆ. ಕೇಂದ್ರದಡಿ 1,328 ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುತ್ತದೆ. ವಿಲೀನದಿಂದ ಈ ಸಂಖ್ಯೆ 1,600ಕ್ಕೆ ಹೆಚ್ಚಲಿದೆ ಎಂದರು.

ಪ್ರಸ್ತುತ 700 ಕೋಟಿ ರೂ. ಆರೋಗ್ಯ ಕರ್ನಾಟಕ ಯೋಜನೆಗೆ ಮೀಸಲಿಡಲಾಗಿದೆ. ಚಿಕಿತ್ಸೆ ಮೊತ್ತ ಹೆಚ್ಚಳದಿಂದ 920 ಕೋಟಿಗೂ ಅಧಿಕ ಆಗಲಿದ್ದು, ಬಾಕಿ ಹೆಚ್ಚುವರಿ ಹೊರೆಯನ್ನು ವಿವಿಧ ಮೂಲಗಳಿಂದ ಕ್ರೋಡೀಕರಿಸಲಾಗುವುದು ಎಂದು ತಿಳಿಸಿದರು.

Advertisement

ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, “ಬುದ್ಧಿಮಾಂದ್ಯತೆಯನ್ನೂ ಆಯುಷ್ಮಾನ್‌ ಭಾರತ ಯೋಜನೆಯಲ್ಲಿ ಕೇಂದ್ರ ಸರ್ಕಾರ ಸೇರ್ಪಡೆಗೊಳಿಸಿದರೆ, ರಾಜ್ಯ ಸರ್ಕಾರ ಅದಕ್ಕೆ ಪೂರಕವಾಗಿ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಲು ಸಿದ್ಧವಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next