Advertisement

ಎಚ್‌ಡಿಕೆ ಸಿಎಂ ಆಗ್ಬೇಕೆಂದು 11 ವರ್ಷದಿಂದ ಕೂದಲು ತೆಗೆದಿಲ್ಲ

02:05 PM May 22, 2018 | Team Udayavani |

ಭೇರ್ಯ: ಜೆಡಿಎಸ್‌ ರಾಜಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಮಹಾದಾಸೆಯಿಂದ ಹರಕೆ ಹೊತ್ತು ಸತತ 11 ವರ್ಷಗಳ ಕಾಲ ಗಡ್ಡ ತಲೆಗೂದಲು ತೆಗೆಯದ ಅಭಿಮಾನಿಯೊಬ್ಬರ ಕನಸು ಇಂದು ನನಸಾಗಿದೆ.

Advertisement

ಹೌದು, ಕೃಷ್ಣರಾಜನಗರ ತಾಲೂಕು ಬೇರ್ಯ ಸಮೀಪದ ಮೇಲೂರು ಗ್ರಾಮದ ರಾಮಕೃಷ್ಣೇಗೌಡ ಅವರು ಇಂಥದ್ದೊಂದು ವಿಶಿಷ್ಟ ಹರಕೆ ಹೊತ್ತು ಕುಮಾರಸ್ವಾಮಿಯವರು ಸಿಎಂ ಆಗಲಿದ್ದಾರೆಂಬ ಸುದ್ದಿ ತಿಳಿದು ಹರ್ಷಚಿತ್ತರಾಗಿ ತಮ್ಮ ಕುಟುಂಬದ ಸಮೇತ ಸಂಭ್ರಮಿಸಿದ್ದಾರೆ.

ವೃತ್ತಿಯಲ್ಲಿ ರೈತನಾಗಿರುವ ಅವರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಜನಪರವಾದ ವಿಭಿನ್ನ ಕಾರ್ಯಕ್ರಮಗಳಿಗೆ ಮನಸೋತಿದ್ದರು. ಎಚ್‌ಡಿಕೆ ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ರೈತರು, ಶೋಷಿತರು, ಬಡವರ ಆಶಾಕಿರಣವಾಗಲೆಂದು ಹಂಬಲಿಸಿದ್ದರು.

20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡು ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಕ್ಷೀಣಿಸತೊಡಗಿತ್ತು. ಎಚ್‌ಡಿಕೆ ಅಧಿಕಾರದಿಂದ ಇಳಿದ ಬಳಿಕ ರಾಜ್ಯದಲ್ಲಿ ನಡೆದ ಒಂದರ ಮೇಲೊಂದು ರೈತರ ಆತ್ಮಹತ್ಯೆ, ಭ್ರಷ್ಟಾಚಾರ ಪ್ರಕರಣಗಳು, ಬಡವರ ಮೇಲಿನ ದಬ್ಟಾಳಿಕೆ ನನ್ನ ಮನಕಲಕುವಂತೆ ಮಾಡಿದವು.

ಇಂಥ ಅನಿಷ್ಟಗಳನ್ನೆಲ್ಲಾ ಹೋಗಲಾಡಿಸಿ ರಾಜ್ಯಕ್ಕೆ ಒಳ್ಳೆಯ ಹೆಸರು ತರಲು ಕುಮಾರಸ್ವಾಮಿಯವರಿಂದ ಮಾತ್ರ ಸಾಧ್ಯವೆನಿಸಿತು. 2007ರಲ್ಲಿ ಕುಮಾರಸ್ವಾಮಿಯವರ ತಂದೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನೈಸ್‌ ಸಂಸ್ಥೆ ವಿರುದ್ಧ ರೈತರೊಡಗೂಡಿ ಪ್ರತಿಭಟನೆ ನಡೆಸುತ್ತಿದ್ದಾಗ ಅಂದಿನ ರಾಜ್ಯ ಸರಕಾರ ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲು ಯತ್ನಿಸಿತ್ತು. ರೈತರನ್ನು ಬಾಡಿಗೆ ಗೂಂಡಾಗಳೆಂದು ಕರೆದು ದೇವೇಗೌಡರನ್ನು ಅವಮಾನಿಸಿತು.

Advertisement

ಇದೂ ಸಹ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿ ದೇವೇಗೌಡರ ಸುಪುತ್ರ ಮತ್ತೆ ಮುಖ್ಯಮಂತ್ರಿಯಾದರೆ ರಾಜ್ಯದ ಜನರು ನೆಮ್ಮದಿ ಜೀವನ ನಡೆಸಲು ಸಾಧ್ಯವೆನಿಸಿತು. ಅಂದೆ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲೆಂಬ ಬಯಕೆಯಿಂದ ಸಾಲಿಗ್ರಾಮದ ಶ್ರೀಯೋಗಾನರಸಿಂಹ ಸ್ವಾಮಿಗೆ ಹರಕೆ ಹೊತ್ತೆ ಎಂದು ರಾಮಕೃಷ್ಣೇಗೌಡರು ತಿಳಿಸಿದ್ದಾರೆ.

2013 ರಲ್ಲಿ ಸಾಲಿಗ್ರಾಮದ ಶ್ರೀಯೋಗನರಸಿಂಹಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಚ್‌.ಡಿ.ದೇವೇಗೌಡರನ್ನು ನಾನು ಭೇಟಿ ಮಾಡಿದ್ದಾಗ ಅವರು ಗಡ್ಡ, ತಲೆಗೂದಲು ತೆಗೆಯಲು ಸಲಹೆ ನೀಡಿದ್ದರು. ನಿಮ್ಮ ಮಗ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವವರೆಗೂ ತೆಗೆಯುವುದಿಲ್ಲ. ಅದಕ್ಕಾಗಿ ಈ ದೇವರಿಗೆ ಹರಕೆ ಹೊತ್ತಿದ್ದೇನೆ ಎಂದು ವಿವರಿಸಿದೆ. ಆಗ ದೇವೇಗೌಡರು ನನ್ನ ಹೆಗಲ ಮೇಲೆ ಕೈಯಿಟ್ಟು ಬಾವುಕರಾದರು ಎಂದು ತಿಳಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಕಾಶಿ ಹಾಗೂ ಮೇಲುಕೋಟೆಗೆ ತೆರಳಿ ಮುಡಿ ನೀಡುವ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನ ಹರಕೆಯೊಂದೆ ಅಲ್ಲ. ರಾಜ್ಯದ ಲಕ್ಷಾಂತರ ಕಾರ್ಯಕರ್ತರ ಪ್ರಾರ್ಥನೆ ಇಂದು ಫ‌ಲಿಸಿದೆ. ಕುಮಾರಸ್ವಾಮಿಯವರು ಅತ್ಯುತ್ತಮ ಆಡಳಿತಗಾರನಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಲಿದ್ದಾರೆ. ಹೀಗಾಗಿ ಅವರ ಅಭಿಮಾನಕ್ಕಾಗಿ ಹರಕೆ ಹೊತ್ತಿದ್ದೆ.
-ರಾಮಕೃಷ್ಣೇಗೌಡ, ಹೆಚ್‌.ಡಿ.ಕುಮಾರಸ್ವಾಮಿ ಅಭಿಮಾನಿ

Advertisement

Udayavani is now on Telegram. Click here to join our channel and stay updated with the latest news.

Next