ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಇದಕ್ಕೆ ಕಾರಣರಾದ ಬೆಂಗಳೂರು ನಗರದ ಶಾಸಕರ ಕ್ಷೇತ್ರಗಳ ಮೇಲೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೃಷ್ಟಿ ಹರಿಸಿದ್ದು, ಶನಿವಾರ ಮತ್ತು ಭಾನುವಾರ ನಾಲ್ಕು ಕ್ಷೇತ್ರಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ಕರೆದಿದ್ದಾರೆ.
ರಾಜರಾಜೇಶ್ವರಿನಗರ, ಕೆ.ಆರ್. ಪುರ, ಮಹಾಲಕ್ಷ್ಮಿ ಲೇ ಔಟ್, ಯಶವಂತಪುರ ಕ್ಷೇತ್ರಗಳ ಪಕ್ಷದ ಮುಖಂಡರ ಸಭೆ ಕರೆದಿದ್ದು, ಕುತೂಹಲ ಮೂಡಿಸಿದೆ. ಶನಿವಾರದಂದು ರಾಜರಾಜೇಶ್ವರಿ ನಗರ, ಕೆ.ಆರ್. ಪುರಂ, ಭಾನುವಾರದಂದು ಮಹಾಲಕ್ಷ್ಮಿ ಲೇ ಔಟ್, ಯಶವಂತಪುರ ಕ್ಷೇತ್ರಗಳ ಮುಖಂಡರ ಸಭೆ ಕರೆಯಲಾಗಿದೆ. ಹಂಗಾಮಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಆ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ನಾಲ್ಕು ಕ್ಷೇತ್ರಗಳ ಶಾಸಕರು ಕೈ ಕೊಟ್ಟ ಕಾರಣದಿಂ ದಲೇ ಸಮ್ಮಿಶ್ರ ಸರ್ಕಾರ ಪತನವಾಗಿರುವುದರಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಆ ಕ್ಷೇತ್ರಗಳಲ್ಲಿ ಜಯಗಳಿಸುವ ಹಿನ್ನೆಲೆಯಲ್ಲಿ ಪರ್ಯಾಯ ಅಭ್ಯರ್ಥಿಗಳ ತಲಾಷೆ, ತಳಮಟ್ಟದಿಂದ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಸಭೆ ಕರೆಲಾಗಿದೆ ಎಂದು ತಿಳಿದು ಬಂದಿದೆ.
ಯಶವಂತಪುರದಲ್ಲಿ ಎಸ್.ಟಿ. ಸೋಮಶೇಖರ್ ವಿರುದ್ಧ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಜವರಾಯಿಗೌಡ, ರಾಜರಾಜೇಶ್ವರಿನಗರ ದಲ್ಲಿ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ರಾಮಚಂದ್ರ ಜತೆಗೆ ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್. ಪ್ರಕಾಶ್, ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದಲ್ಲಿ ಉಪ ಮೇಯರ್ ಭದ್ರೇಗೌಡ ಅವರನ್ನು ಅಭ್ಯರ್ಥಿ ಮಾಡುವ ಸಂಬಂಧ ಪಕ್ಷದ ವಲಯದಲ್ಲಿ ಚರ್ಚಿಸಲಾಗಿದೆ.
ರಾಜರಾಜೇಶ್ವರಿನಗರ ಮತ್ತು ಯಶವಂತಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೂ ಉಪ ಚುನಾವಣೆಯಲ್ಲೂ ಮೈತ್ರಿಯಾದರೆ ಜೆಡಿಎಸ್‌ಗೆ ಆ ಕ್ಷೇತ್ರಗಳನ್ನು ಪಡೆಯುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಕ್ಷೇತ್ರಗಳಲ್ಲಿ ಒಕ್ಕಲಿಗ ಮತದಾರರು ಹೆಚ್ಚಾಗಿರುವುದರಿಂದ ಜೆಡಿಎಸ್‌ಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವಿದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರದ ಯಶವಂತಪುರ, ರಾಜರಾಜೇಶ್ವರಿನಗರ, ಮಹಾಲಕ್ಷ್ಮಿ ಲೇ ಔಟ್, ಕೆ.ಆರ್.ಪುರ, ಶಿವಾಜಿನಗರ ಕ್ಷೇತ್ರಗಳ ಪೈಕಿ ಎರಡು ಇಲ್ಲವೇ ಮೂರು ಕ್ಷೇತ್ರಗಳಾದರೂ ಜೆಡಿಎಸ್‌ಗೆ ಮೈತ್ರಿಯಾದರೆ ಪಡೆಯಬಹುದು. ಒಂದೊಮ್ಮೆ ಯಶವಂತಪುರ ಕ್ಷೇತ್ರ ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪದಿದ್ದರೆ ಜೆಡಿಎಸ್ ಆಕಾಂಕ್ಷಿ ಜವರಾಯಿಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂದು ತಿಳಿದು ಬಂದಿದೆ. ಇದರ ಜತೆಗೆ ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಪಡೆದು ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.