Advertisement

ರಾಜಕೀಯ ಧ್ರುವೀಕರಣದ ಲೆಕ್ಕಾಚಾರದಲ್ಲಿ ಎಚ್‌ಡಿಡಿ-ಎಚ್‌ಡಿಕೆ ಕಾರ್ಯತಂತ್ರ

09:42 AM Dec 05, 2019 | Sriram |

ಬೆಂಗಳೂರು: ಉಪ ಚುನಾವಣೆ ಅನಂತರ ರಾಜಕೀಯ ಧ್ರುವೀಕರಣದ ನಿರೀಕ್ಷೆಯಲ್ಲಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಚಾರದ ಅನಂತರ ಮತದಾನ ಮತ್ತು ಫ‌ಲಿತಾಂಶದ ಲೆಕ್ಕಾಚಾರದಲ್ಲಿದ್ದಾರೆ.

Advertisement

ಪ್ರಚಾರದಿಂದಾಗಿ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಜೆಪಿ ನಗರ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಲೇ ಉಪ ಚುನಾವಣೆ ಕುರಿತು ಸ್ಥಳೀಯ ಮುಖಂಡರಿಂದ ಮಾಹಿತಿ ಪಡೆದರು.

ಎಚ್‌.ಡಿ.ದೇವೇಗೌಡರು ಸಹ ಪದ್ಮನಾಭನಗರ ನಿವಾಸದಲ್ಲೇ ಕುಳಿತು ಜಿಲ್ಲಾ ನಾಯಕರ ಜತೆ ದೂರವಾಣಿ ಮೂಲಕ ಮಾತನಾಡಿ, ಮತದಾನದ ದಿನ ಎಚ್ಚರ ತಪ್ಪದಂತೆ ಸೂಚನೆ ನೀಡಿದರು.

ಹುಣಸೂರು, ಕೆ.ಆರ್‌.ಪೇಟೆ, ಚಿಕ್ಕಬಳ್ಳಾಪುರ, ಯಶವಂತಪುರ, ಗೋಕಾಕ್‌ ಕ್ಷೇತ್ರಗಳ ಬಗ್ಗೆ ಜೆಡಿಎಸ್‌ ಭರವಸೆ ಇಟ್ಟುಕೊಂಡಿದ್ದು, ಆ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವು ಜತೆಗೆ ಅನರ್ಹರು ಸೋಲುವ ಆಶಾವಾದದಲ್ಲಿದೆ.

ಹುಣಸೂರು, ಯಶವಂತಪುರ, ಕೆ.ಆರ್‌.ಪೇಟೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ ಗೆದ್ದರೆ ಗೋಕಾಕ್‌ನಲ್ಲಿ ಬಿಜೆಪಿ ಸೋತರೆ, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಗೆದ್ದರೆ ಇಡೀ ರಾಜ್ಯದ ಲೆಕ್ಕಾಚಾರವೇ ಬುಡಮೇಲು ಆಗಲಿದೆ ಎಂಬ ನಂಬಿಕೆ ಜೆಡಿಎಸ್‌ನದು.

Advertisement

ಹೀಗಾಗಿ ಸ್ಥಳೀಯ ನಾಯಕರು ಮತ್ತು ಮುಖಂಡರ ಜತೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಸಂಪರ್ಕದಲ್ಲಿದ್ದು ಇಲ್ಲಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಅನರ್ಹರ ವಿರುದ್ಧ ತೀರ್ಪು ನೀಡಲು
ಎಚ್‌ಡಿಡಿ ಟ್ವೀಟ್‌ ಮೂಲಕ ಮನವಿ
ಉಪ ಚುನಾವಣೆಯಲ್ಲಿ ಮತದಾರರು ಅನರ್ಹರ ವಿರುದ್ಧ ತೀರ್ಪು ನೀಡುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಟ್ವೀಟ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಹಣ, ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿದ “ಅನರ್ಹ’ರ ವಿರುದ್ಧ ತೀರ್ಪು ನೀಡುವ ಪರಮಾಧಿಕಾರ ರಾಜ್ಯದ ಜನತೆಗೆ ಸಿಕ್ಕಿದೆ. ಇಡೀ ದೇಶದ ಜನತೆಯ ಗಮನ ರಾಜ್ಯದ ಮತದಾರ ನೀಡುವ ತೀರ್ಪಿನ ಮೇಲಿದೆ. ಈ ಸಂದರ್ಭದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ರಾಜ್ಯದ ಘನತೆ ಎತ್ತಿ ಹಿಡಿಯುವ ತೀರ್ಪು ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಎಚ್‌ಡಿಕೆಗೆ ಜ್ವರ-ಕೆಮ್ಮು: ವಿಶ್ರಾಂತಿಗೆ ಸಲಹೆ
ಉಪ ಚುನಾವಣೆಯಲ್ಲಿ ಹದಿನೈದು ದಿನಗಳಿಗೂ ಹೆಚ್ಚು ಕಾಲ ರೋಡ್‌ ಶೋ ಮತ್ತು ಬಹಿರಂಗ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದು ಜಯದೇವ ಆಸ್ಪತ್ರೆಯಲ್ಲಿ ಬುಧವಾರ ತಪಾಸಣೆ ಮಾಡಿಸಿಕೊಂಡರು. ಅವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ನಾಲ್ಕು ದಿನಗಳ ಕಾಲ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಹೀಗಾಗಿ ಬುಧವಾರ ಜೆಪಿ ನಗರದ ನಿವಾಸದಲ್ಲಿ ವಿಶ್ರಾಂತಿಗೆ ಮೊರೆ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next