Advertisement

ಕೃಷ್ಣೆಯ ಕೊರಳಿನ ಕರೆ…

05:42 PM Mar 26, 2018 | |

ರಾಜ್ಯ ರಾಜ್ಯಗಳ ನೀರು ಹಂಚಿಕೆ ವಿಚಾರದಲ್ಲಿ ದೊಡ್ಡ ಚರ್ಚೆ ನಡೆಸುವ ನಾವು ನಮ್ಮ ರೈತರಿಗೆ ನೀರಾವರಿ ನಿಯಮ ಹೇಳಲು ಸೋತಿದ್ದೇವೆ. ರಾಜಕೀಯ ಆಟದಲ್ಲಿ ತಕ್ಷಣದ ಲಾಭ ಯೋಚಿಸಿ ಅಭಿವೃದ್ಧಿಯ ವಾಸ್ತವವನ್ನು ಸರಕಾರ, ರಾಜಕಾರಣಿಗಳು ಮರೆಮಾಚುತ್ತಿದ್ದಾರೆ. ನೀರು ಬಳಕೆಯಲ್ಲಿ ನಿಯಂತ್ರಣ ಸಾಧಿಸಿದರೆ ನಾಡು ಹಸಿರಾಗಲು ಸಾಧ್ಯವಿದೆ.

Advertisement

ಜಮಖಂಡಿಯ ಹಿಪ್ಪರಗಿಯಲ್ಲಿ  ಕೃಷ್ಣಾ ನದಿಗೆ ಬ್ಯಾರೇಜ್‌ ಕಟ್ಟಲಾಗಿದೆ. ಕ್ರಿ.ಶ 1972ರಲ್ಲಿ ಆರಂಭವಾದ ಕಾಮಗಾರಿ ಅಂತೂ ಕ್ರಿ.ಶ 2004ರಲ್ಲಿ ಮುಗಿದಿದೆ. ಕೃಷಿ, ಕುಡಿಯುವ ನೀರಿಗಾಗಿ ನಿರ್ಮಿಸಲಾಗಿರುವ ಈ ಬ್ಯಾರೇಜ್‌ ಸಂಪೂರ್ಣ ಭರ್ತಿಯಾದರೆ 6 ಟಿಎಮ್‌ಸಿ ನೀರು ಸಂಗ್ರಹಣೆಯಾಗುತ್ತದೆ. ನೀರಾವರಿ ಯೋಜನೆ ರೂಪಿಸುವಾಗ ಸಂಗ್ರಹಿಸುವ ನೀರಿನಲ್ಲಿ ಎಷ್ಟು ಎಕರೆಗೆ ನೀರಾವರಿ ಸಾಧ್ಯವೆಂಬ ವರದಿ ತಯಾರಿಸಲಾಗುತ್ತದೆ. ಈ ನೀರು ಬಳಸಿ  ಜೋಳ, ಸಜ್ಜೆ, ಹತ್ತಿ, ಶೇಂಗಾ, ಕಡ್ಲೆ, ಗೋಧಿ, ಸೂರ್ಯಕಾಂತಿ, ತೊಗರಿ, ಹೆಸರು… ಹೀಗೆ ಹಿಂಗಾರಿ-ಮುಂಗಾರಿಗೆ ಸೂಕ್ತವಾದ ಬೆಳೆ ಬೆಳೆಯಬಹುದು. ಆದರೆ ಅಣೆಕಟ್ಟು ನಿರ್ಮಾಣವಾಗಿ ಬರದ ಸೀಮೆಗೆ ನೀರು ಹರಿಯಲು ಶುರುವಾದ ಬಳಿಕ ಇಡೀ ಪ್ರದೇಶದಲ್ಲಿ ಅಧಿಕ ನೀರು ಬಳಸುವ ಬೆಳೆ ಕಾಣಿಸುತ್ತದೆ. ಅಧಿಕ ಮಳೆ ಸುರಿಯುವ ಮಲೆನಾಡಿಗಿಂತ ಜಾಸ್ತಿ ಕೃಷಿ ನೀರಿನ ಬಳಕೆ ಏರುತ್ತದೆ. ಮಳೆ ಆಶ್ರಿತ ಬೆಳೆಗೆ ಹೋಲಿಸಿ ನೀರಾವರಿ ವಾಣಿಜ್ಯ ಬೆಳೆಯ ಲಾಭದತ್ತ ರೈತರು ಹೊರಡುತ್ತಾರೆ. ಹಿಪ್ಪರಗಿಯಲ್ಲಿ ಕಬ್ಬು ಮುಖ್ಯ ಬೆಳೆಯಾಗಿದೆ.  

ಕೃಷ್ಣಾ ಮೇಲ್ದಂಡೆ ಯೋಜನೆಗೆ ಈವರೆಗೂ ಸಾವಿರಾರು ಕೋಟಿ ವಿನಿಯೋಗವಾಗಿದೆ. ಇಲ್ಲಿನ ನಾರಾಯಣಪುರ ಹಾಗೂ ಆಲಮಟ್ಟಿ ಅಣೆಕಟ್ಟೆಯಲ್ಲಿ 170 ಗ್ರಾಮಗಳು ಮುಳುಗಡೆಯಾಗಿ 92 ಸಾವಿರ ಕುಟುಂಬಗಳು ನಿರಾಶ್ರಿತವಾಗಿವೆ. ಆಲಮಟ್ಟಿ ಅಣೆಕಟ್ಟೆಯಿಂದ ಬಾಗಲಕೋಟೆ ಜಿಲ್ಲಾ ಕೇಂದ್ರ ಮುಳುಗಡೆಯಾದ ನಂತರ ಇಲ್ಲಿ ಮನೆ ನಿರ್ಮಾಣ, ಜಮೀನು ಖರೀದಿ, ಪುನರ್ವಸತಿ ಕೇಂದ್ರಗಳಲ್ಲಿ ಸಾರ್ವಜನಿಕ ವ್ಯವಸ್ಥೆ, ನಿರಾಶ್ರಿತರಿಗೆ ಜೀವನಾಧಾರ ಭತ್ಯೆಗಳಿಗಾಗಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ 2400 ಕೋಟಿ  ವಿನಿಯೋಗವಾಗಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಲಿದ್ದ ಬಸವಣ್ಣನ ಐಕ್ಯಸ್ಥಳವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲಾಗಿದೆ. ಇಷ್ಟೆಲ್ಲ ಹಣ ಖರ್ಚುಮಾಡಿದ್ದರ ಉದ್ದೇಶ ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು ಸೀಮೆಯ ತೀವ್ರ ಬರದ 25 ಲಕ್ಷ ಎಕರೆ ಭೂಮಿಗೆ ನೀರುಣಿಸುವುದು. ಯೋಜನೆ ಜಾರಿಗೊಳಿಸುವಾಗ ಮುಳುಗಡೆ ಹಳ್ಳಿಗರ ತೀವ್ರ ವಿರೋಧ ಎದುರಿಸಬೇಕು. ಸೂಕ್ತ ಪುನರ್ವಸತಿ ವ್ಯವಸ್ಥೆ, ಹಣಕಾಸು, ರಾಜಕೀಯ ಇಚ್ಛಾಶಕ್ತಿಗಳು ಬೇಕು. ಮುಂಚಿನಿಂದಲೂ ಮೈಸೂರು ಸೀಮೆಗಿರುವಷ್ಟು ರಾಜಕೀಯ ಶಕ್ತಿ, ತಂತ್ರಗಾರಿಕೆ ಹೈದ್ರಾಬಾದ್‌ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಇಲ್ಲ. ನಾರಾಯಣಪುರ ಅಣೆಕಟ್ಟೆಯಿಂದ ಕಾಲುವೆಗಳ ಮೂಲಕ 125 ಕಿ.ಲೋ ಮೀಟರ್‌ ದೂರದ ಶಹಾಪೂರಕ್ಕೆ ನೀರುಣಿಸುವ ಪ್ರಸ್ತಾಪ 70ರ ದಶಕದಲ್ಲಿ ನಡೆದಾಗ ರಾಜಕಾರಣಿಗಳೇ ಇದನ್ನು ವಿರೋಧಿಸಿದ್ದರಂತೆ. ಇದೊಂದು ಅವಾಸ್ತವ, ಅಸಾಧ್ಯ ಕಲ್ಪನೆಯೆಂದು ಟೀಕಿಸಿದ್ದರೆಂದು ಹಿರಿಯ ಹೋರಾಟಗಾರ, ನ್ಯಾಯವಾದಿ ಭಾಸ್ಕರರಾವ್‌ ಮೂಡಬೊಳ ಹೇಳುತ್ತಾರೆ. ಇವರು ಕೃಷ್ಣೆಯ ಹೋರಾಟದ ಇತಿಹಾಸ ಕುರಿತು “ದಕ್ಷಿಣದ ಗಂಗೆ ಕೃಷ್ಣೆ’ ಎಂಬ ಪುಸ್ತಕ ಬರೆದಿದ್ದಾರೆ.

ಲಾಲ್‌ಬಹದ್ದೂರ್‌ ಶಾಸಿŒಯವರು ಕೇಂದ್ರ ಸರಕಾರದ ಖಾತೆ ರಹಿತ ಮಂತ್ರಿಯಾಗಿದ್ದ ಕಾಲದಲ್ಲಿ ಕ್ರಿ.ಶ. 1964 ಮೇ 22 ರಂದು ಆಲಮಟ್ಟಿ ಅಣೆಕಟ್ಟೆಗೆ ಶಂಕುಸ್ಥಾಪನೆ ಮಾಡಿದರು. ಇದು ನಂತರ 21ಆಗಸ್ಟ್‌ 2006ರಲ್ಲಿ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್‌ ಕಲಾಂರಿಂದ ಉದ್ಘಾಟನೆಯಾಗಿದೆ. ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದಲ್ಲಿ 18 ಲಕ್ಷ ಎಕರೆ ಭೂಮಿ ಇದೆ. ಆದರೆ ಕೃಷ್ಣಾ ಕಣಿವೆಯಲ್ಲಿ 40 ಲಕ್ಷ ಎಕರೆ ಇದೆ! ಅತ್ಯಂತ ಹೆಚ್ಚು ಬರ ಕಂಡ ಇಲ್ಲಿನ ನೆಲಕ್ಕೆ ನೀರಾವರಿ ಯೋಜನೆ ಕಲ್ಪಿಸಲು ನಾಲ್ಕು ದಶಕಗಳು ಬೇಕಾಯಿತೆಂದರೆ ರಾಜ್ಯದ ಆಡಳಿತ ಈ ಯೋಜನೆಯನ್ನು ಜಾರಿಗೆ ಎಷ್ಟು ಮುತುವರ್ಜಿ ವಹಿಸಿತ್ತು ಎಂಬುದನ್ನು ತಿಳಿಯಬಹುದು. ಸರಕಾರಗಳ ನಿರ್ಲಕ್ಷ್ಯ, ವಿಳಂಬ ಧೋರಣೆಯಿಂದ 120 ಕೋಟಿಯ ಯೋಜನೆಗೆ  2000 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚುಮಾಡಬೇಕಾಯಿತು!  

ರಾಜ್ಯದಲ್ಲಿ ಕೃಷ್ಣಾ 480 ಕಿ.ಲೋ ಮೀಟರ್‌ ಹಾಗೂ ಮಹಾರಾಷ್ಟ್ರದಲ್ಲಿ 290 ಕಿಲೋ ಮೀಟರ್‌ ಹರಿಯುತ್ತದೆ. ಕೃಷ್ಣಾ, ಭೀಮಾ ನದಿಗಳಿಗೆ ಮಹಾರಾಷ್ಟ್ರ 104 ಬ್ಯಾರೇಜು ರೂಪಿಸಿ ನೀರು ಹಿಡಿದಿದೆ. ನೀರು ಸಂಗ್ರಹಣೆ ವಿಚಾರದಲ್ಲಿ ನಮ್ಮ ನಿರ್ಲಕ್ಷ್ಯದ ಲಾಭವನ್ನು ಪಕ್ಕದ ರಾಜ್ಯಗಳು ಪಡೆದಿವೆ. ಆಲಮಟ್ಟಿ ಯೋಜನೆ ಆರಂಭಿಸಿದಾಗ ಆಂಧ್ರದ ತಕರಾರು ಶುರುವಾಯ್ತು. ಕೃಷ್ಣಾ ನೀರನ್ನು ಕರ್ನಾಟಕ ಹಿಡಿದರೆ ತಮಗೆ ನೀರಿಲ್ಲವೆಂಬ ಕೊರಗು. ಮೂರು ರಾಜ್ಯಗಳು ಒಂದು ನದಿ ನೀರಿಗಾಗಿ ಕಚ್ಚಾಟ ಆರಂಭಿಸಿದಾಗ ಕೇಂದ್ರ ಸರಕಾರ ಜಸ್ಟಿಸ್‌ ಆರ್‌. ಎಸ್‌. ಬಚಾವತ್‌ ಅಧ್ಯಕ್ಷತೆಯಲ್ಲಿ ಕ್ರಿ. ಶ. 1972ರಲ್ಲಿ ದ್ವಿಸದಸ್ಯ ನ್ಯಾಯ ಮಂಡಳಿ ರಚಿಸಿತು.  ಸಮಗ್ರ ವಿಚಾರಣೆಯ ನಂತರ ತೀರ್ಪು 31 ಮೇ 1976ರಲ್ಲಿ ಹೊರಬಿತ್ತು.  ಮಹಾರಾಷ್ಟ್ರ 500 ಟಿಎಮ್‌ಸಿ, ಆಂಧ್ರಪ್ರದೇಶಕ್ಕೆ 800 ಟಿಎಮ್‌ಸಿ ಹಾಗೂ ನಮ್ಮ ಕರ್ನಾಟಕಕ್ಕೆ 734 ಟಿಎಮ್‌ಸಿ ಬಳಕೆಯ ಹಕ್ಕು ದೊರೆಯಿತು. 

Advertisement

ಕೃಷ್ಣಾ ಮೇಲ್ದಂಡೆ ಯೋಜನೆಯ “ಎ’ ಸ್ಕೀಂ ಹಾಗೂ “ಬಿ’ ಸ್ಕೀಂ ಮೂಲಕ ನೀರು ಹಿಡಿದು 25 ಲಕ್ಷ ಎಕರೆಗೆ ನೀರುಣಿಸುವ ಯೋಜನೆಗಳನ್ನು ರಾಜ್ಯ ರೂಪಿಸಿತು. ನಿಧಾನಗತಿಯಲ್ಲಿ ಯೋಜನೆ ಜಾರಿಯಾಯ್ತು. ಅಷ್ಟರಲ್ಲಿ  ಪುನಃ ನೀರು ಹಂಚಿಕೆ ಕುರಿತ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್‌ ಎತ್ತರಕ್ಕೆ ಏರಿಸುವುದಕ್ಕೆ ವಿರೋಧ ಬಂದಿತು.  ಅಣೆಕಟ್ಟೆಯ ಎತ್ತರ ಏರಿಸಿದರೆ ಮಹಾರಾಷ್ಟ್ರದ ಭೂಮಿ ಮುಳುಗಡೆಯಾಗುತ್ತದೆಂದೂ, ಬಚಾವತ್‌ ಆಯೋಗದ ತೀರ್ಪಿನ ಉಲ್ಲಂಘನೆಯಾಗುತ್ತದೆಂದು  ಎರಡೂ ರಾಜ್ಯಗಳು ತಕರಾರು ಅರ್ಜಿ ಸಲ್ಲಿಸಿದವು.  ಅಣೆಕಟ್ಟೆಯ ಎತ್ತರವನ್ನು 509 ಮೀಟರ್‌ಗೆ ಮಿತಿಗೊಳಿಸಲು ಆಗ್ರಹಿಸಿದವು . ಕ್ರಿ.ಶ. 1996ರಿಂದ ಪುನಃ ನ್ಯಾಯಾಲಯ ಹೋರಾಟ ಶುರುವಾಯ್ತು. ಪ್ರಕರಣದಲ್ಲಿ ಯಾವ ಹುರುಳಿರಲಿಲ್ಲ.  ಆಲಮಟ್ಟಿಯ ಹಿಂಭಾಗದಲ್ಲಿ ಹಿಪ್ಪರಗಿಯ ಬ್ಯಾರೇಜ್‌ ಇದೆ, ನೀರು ಅಲ್ಲಿಗೆ ಹೋಗಿ ನಿಲ್ಲಬಹುದು.  ಇದರ ಹಿಂಭಾಗದ ಭೂಮಿ ಮಹಾರಾಷ್ಟ್ರದ ಪ್ರದೇಶವಾದ್ದರಿಂದ ಮುಳುಗಡೆ ಸಮಸ್ಯೆಇರಲಿಲ್ಲ. ಕಾಲಹರಣದ ತಂತ್ರವಾಗಿ ಸತತ 11 ಸಾರಿ ನ್ಯಾಯಾಲಯದಲ್ಲಿ ಪ್ರಕರಣ ಮುಂದೂಡಲ್ಪಟ್ಟಿತು. ಕಡೆಗೂ 25 ಏಪ್ರಿಲ್‌ 2000 ರ ತೀರ್ಪು ಹೊರಬಿದ್ದು ಜಲಾಶಯದಲ್ಲಿ 519 ಮೀಟರ್‌ವರೆಗೆ ನೀರು ಸಂಗ್ರಹಿಸಬಹುದೆಂದು  ಕೋರ್ಟು ಆದೇಶಿಸಿತು.

ಈಗಿನ ಹೊಸ ತೀರ್ಪಿನ ಪ್ರಕಾರ ಮೂಲ ಯೋಜನೆಯಂತೆ 524 ಮೀಟರ್‌ ಎತ್ತರಕ್ಕೆ ನಾವು ನೀರು ನಿಲ್ಲಿಸಬಹುದು. ಆದರೆ ಸರಕಾರ ನಮ್ಮ ಹಕ್ಕಿನ ನೀರು ಹಿಡಿಯಲು ಮುಂದಾಗುತ್ತಿಲ್ಲ. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಈ ಹಿಂದೆ ಕತ್ತರಿಸಿದ ಗೇಟ್‌ ಏರಿಸಿದರೆ ಹೆಚ್ಚುವರಿ ಐದು ಮೀಟರ್‌ ನೀರು ಸಂಗ್ರಹಣೆಯಾಗುತ್ತದೆ. ಇದು ಬಯಲುನಾಡು, ಪುನಃ ಸಾವಿರಾರು ಎಕರೆ ಭೂಮಿ ಮುಳುಗಡೆಯಾಗುತ್ತದೆ. ಪುನರ್ವಸತಿ, ಪರಿಹಾರ ದೊಡ್ಡ ಸವಾಲು. ಒಂದು ಎಕರೆಗೆ ಇಲ್ಲಿ 25 ಲಕ್ಷ ರೂಪಾಯಿ ಬೆಲೆ ಇದೆ.  ಭೂಮಿಯ ಬೆಲೆ ಏರುತ್ತಿರುವುದರಿಂದ ರೈತರು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸುತ್ತಾರೆ. ಹಲವು ಸಾವಿರ ಕೋಟಿ ರೂಪಾಯಿ ಇದಕ್ಕೆ ಬೇಕು. ಜನಪ್ರಿಯ ಕಾರ್ಯಕ್ರಮಕ್ಕೆ ಹಣ ಖರ್ಚುಮಾಡುವ ಸರಕಾರಕ್ಕೆ  ಬರದ ಸೀಮೆಯ ರೈತರಿಗೆ ನೀರು ನೀಡಲು ಹಣವಿಲ್ಲ! ವಿಪರ್ಯಾಸ ಹೇಗಿದೆಯೆಂದರೆ ಬಚಾವತ್‌ ತೀರ್ಪಿನ ಹಕ್ಕಿನ ನೀರು ಬಳಸಲೂ ಸಾಧ್ಯವಾಗುತ್ತಿಲ್ಲ. 

ಹತ್ತು ಹಲವು ಅಡೆತಡೆಗಳ ನಡುವೆ ಜಾರಿಗೊಂಡ ಯೋಜನೆಯ ನೀರನ್ನಾದರೂ ನಾವು  ಸಮರ್ಥವಾಗಿ ಬಳಸಿದ್ದೇವೆಯೇ? ನೀರಾವರಿ ನಿಯಮ ಪಾಲಿಸಿದ್ದೇವೆಯೇ? ಅದೂ ಇಲ್ಲ. ಶೇಕಡಾ 60ರಷ್ಟು ನೀರು ಪೋಲಾಗುತ್ತಿದೆ. ತುಂಗಭದ್ರಾ ನೀರಾವರಿ ಕ್ಷೇತ್ರದಲ್ಲಿ ಆಂಧ್ರದ ಜನ ವಲಸೆ ಬಂದಂತೆ ನಾರಾಯಣಪುರ ಯೋಜನಾ ಪ್ರದೇಶದಲ್ಲಿ ಭೂಕಬಳಿಕೆಯೂ ಶುರುವಾಗಿತ್ತು. ಶಹಾಪೂರ, ಜೀವರ್ಗಿ, ಸಿಂದಗಿ, ಇಂಡಿಗಳಲ್ಲಿ ರೈತರು ಇದನ್ನು ವಿರೋಧಿಸಿದರು. ನೀರಾವರಿ ಸಚಿವರಾಗಿದ್ದ ಎಚ್‌. ಕೆ. ಪಾಟೀಲರು 2003ರಲ್ಲಿ ಕರ್ನಾಟಕ ನೀರಾವರಿ ಕಾನೂನಿಗೆ ಮಹತ್ವದ ಬದಲಾವಣೆ ತಂದು ಸೆಕ್ಷನ್‌ 27/ಎ ಅನ್ನು ಹೊಸದಾಗಿ ಸೇರಿಸಿದರು. ಇದರಿಂದ ಕರ್ನಾಟಕದ ಯಾವುದೇ ನೀರಾವರಿಗೆ ಒಳಪಟ್ಟ ಭೂಮಿಯನ್ನು  10 ವರ್ಷದ ಒಳಗಡೆ ನೀರಾವರಿ ಅಧಿಕಾರಿಯ ಸಮ್ಮತಿ ಇಲ್ಲದೇ ಮಾರಾಟ ಮಾಡಬಾರದೆಂಬ ಸುಗ್ರಿವಾಜ್ಞೆ ಹೊರಡಿಸಿದರು. ಪರಿಣಾಮವಾಗಿ ಕೃಷ್ಣಾಮೇಲ್ದಂಡೆ ಯೋಜನಾ ಪ್ರದೇಶದಲ್ಲಿ ಆಂಧ್ರ ರೈತರ ವಲಸೆ ನಿಯಂತ್ರಣಕ್ಕೆ ಬಂದಿತು. ಆದರೆ ನಮ್ಮ ರೈತರು ಅಧಿಕ ನೀರು ಬಳಸುವ ಕಬ್ಬು, ಭತ್ತ, ಬಾಳೆ ಬೆಳೆಯಲು ಹೊರಟಾಗ ಪರ್ಯಾಯ ದಾರಿ ತೋರಿಸಲು ಮುಂದಾಗಿಲ್ಲ. ಪರಿಣಾಮ, ರಾಯಚೂರು, ಯಾದಗಿರಿಗಳಲ್ಲಿ ನಿರ್ಮಿಸಿದ ಎಷ್ಟೋ ಕಾಲುವೆಗಳಲ್ಲಿ ಯೋಜನೆ ಮುಗಿದರೂ ನೀರು ಹರಿಯುತ್ತಿಲ್ಲ.

ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಸಲಹಾ ಸಮಿತಿ ಇದೆ. ಸಮಿತಿ ಹಿಂಗಾರು, ಮುಂಗಾರಿನ ಸಮಯದಲ್ಲಿ ಅಣೆಕಟ್ಟೆಯಿಂದ ನೀರು ಬಿಡುವ ಸಮಯ ನಿರ್ಧರಿಸುತ್ತದೆ. ಯಾವ ಬೆಳೆ ಬೆಳೆಯಬೇಕೆಂದು ನಿರ್ಧರಿಸುವ ಹಕ್ಕು ಸಮಿತಿಗೆ ಇದೆ. ಆದರೆ ಸಭೆ ನಡೆಯುವುದಿಲ್ಲ. ಕ್ರಿ.ಶ. 1989ರ ಸಭೆಯ ಎಲ್ಲ ನಡಾವಳಿಯಲ್ಲಿಯೂ ಕಬ್ಬು, ಭತ್ತ, ಬಾಳೆ ಬೆಳೆಯುವದನ್ನು ನಿಷೇಧಿಸಲಾಗಿದೆ.  ವಿಶೇಷವೆಂದರೆ ನೀರಾವರಿ, ಕಂದಾಯ ಹಾಗೂ ಪೋಲಿಸ್‌ ಇಲಾಖೆಯ ಸಹಕಾರದೊಂದಿಗೆ ಈ ನಿಯಮ ಜಾರಿಗೊಳಿಸಬೇಕು. ಭತ್ತ, ಕಬ್ಬು ಬೆಳೆ ನಿಯಂತ್ರಿಸಲು ರೈತರು ನ್ಯಾಯಾಲಯ ಮೆಟ್ಟಿಲೇರಿದ ಉದಾಹರಣೆ ಇದೆ. ನಿಷೇಧಿತ ಬೆಳೆ ನಿಯಂತ್ರಣದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ರೈತರು ಪರಿಸ್ಥಿತಿ ಅರ್ಥಮಾಡಿಕೊಂಡು ಹತ್ತಿಪ್ಪತ್ತು ಎಕರೆ ಕಬ್ಬು ಮಾತ್ರ ಬೆಳೆಯುವ ಬದಲು ಕೆಲವು ಕ್ಷೇತ್ರಗಳಲ್ಲಿ ನೀರು ಕಡಿಮೆ ಬಳಸುವ ಬೆಳೆ ಬೆಳೆಯಲು ಹೆಜ್ಜೆ ಇಡುತ್ತಿಲ್ಲ. ಸಾವಿರಾರು ಕೋಟಿ ಸುರಿದು ರೂಪಿಸಿದ ಯೋಜನೆ ಫ‌ಲಾನುಭ ರೈತರಿಂದ ನೀರಾವರಿ ಕರ ಸಂಗ್ರಹಣೆಯೂ ಇಲ್ಲ!  ಇದರಿಂದ ಭವಿಷ್ಯದ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಸಬಹುದಿತ್ತು. ರಾಜಕೀಯ ಆಟದಲ್ಲಿ ತಕ್ಷಣದ ಲಾಭ ಯೋಚಿಸಿ ಅಭಿವೃದ್ಧಿಯ ವಾಸ್ತವವನ್ನು ಸರಕಾರ, ರಾಜಕಾರಣಿಗಳು ಮರೆಮಾಚುತ್ತಿವೆ. ಅಭ್ಯುದಯದ ಮುತ್ಸದ್ದಿತನ ಮರೆಯಾಗಿದೆ. ನದಿ ಕಣಿವೆಯ ಕೃಷಿ ಆರೋಗ್ಯದ ದೃಷ್ಟಿಯಲ್ಲಿ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ನದಿಯನ್ನು ಅಣೆಕಟ್ಟೆ, ಟಿಎಮ್‌ಸಿ ಮೂಲಕ ನೋಡುವ ಕಾಲದಲ್ಲಿದ್ದೇವೆ. ನೀರಾವರಿ ವಿಚಾರದಲ್ಲಿ ಹೇಳ್ಳೋರು ಯಾರು? ಕೇಳ್ಳೋರು ಯಾರು? ಎನ್ನುವಂತಾಗಿದೆ. 

ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next